ADVERTISEMENT

ಮಿಶ್ರ ಬೇಸಾಯದಲ್ಲಿ ಯಶಸ್ಸು ಕಂಡ ರೈತ: ಚಿಕ್ಕ ಜಮೀನಿನಲ್ಲೇ ಉತ್ತಮ ಆದಾಯ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2022, 16:08 IST
Last Updated 22 ಸೆಪ್ಟೆಂಬರ್ 2022, 16:08 IST
ನೇಸರಗಿ ಸಮೀಪದ ಸೋಮನಟ್ಟಿಯ ತಮ್ಮ ಜಮೀನಿನಲ್ಲಿ ರೈತ ಗಂಗಪ್ಪ ಹಸಬಿ ಮೆಣಶಿನಕಾಯಿ ಬೆಳೆ ಬೆಳೆದಿರುವುದು
ನೇಸರಗಿ ಸಮೀಪದ ಸೋಮನಟ್ಟಿಯ ತಮ್ಮ ಜಮೀನಿನಲ್ಲಿ ರೈತ ಗಂಗಪ್ಪ ಹಸಬಿ ಮೆಣಶಿನಕಾಯಿ ಬೆಳೆ ಬೆಳೆದಿರುವುದು   

ನೇಸರಗಿ: ಶ್ರದ್ಧೆಯಿಂದ ದುಡಿದರೆ ಕೃಷಿ ಕಾಯಕದಲ್ಲಿ ಬದುಕು ಕಟ್ಟಿಕೊಳ್ಳಬಹುದು. ಇದಕ್ಕೆ ಉತ್ತಮ ನಿದರ್ಶನ ಸಮೀಪದ ಸೋಮನಟ್ಟಿ ಗ್ರಾಮದ ಪ್ರಗತಿಪರ ರೈತ ಗಂಗಪ್ಪ ನಾಗಪ್ಪ ಹಸಬಿ.

ಒಂದೇ ಬೆಳೆ ಬೆಳೆಯುವುದಕ್ಕಿಂತ, ಹಲವು ಬೆಳೆಗಳನ್ನು ಬೆಳೆಯುವುದು ಸೂಕ್ತ ಎಂಬುದನ್ನು ಪ್ರಾಯೋಗಿಕವಾಗಿ ಅರಿತ ಗಂಗಪ್ಪ, ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಮಿಶ್ರ ಬೇಸಾಯ ಕೈಗೊಳ್ಳುತ್ತಿದ್ದಾರೆ. ವರ್ಷವಿಡೀ ಆದಾಯದ ಮಾರ್ಗ ಕಂಡುಕೊಂಡಿದ್ದಾರೆ.

ತಮ್ಮ ಜಮೀನಿನಲ್ಲಿ ಟೊಮೆಟೊ, ಹತ್ತಿ, ಬದನೆಕಾಯಿ, ಮೆಣಸಿನಕಾಯಿ, ಶೇಂಗಾ, ಸೋಯಾಬಿನ್‌, ಗಜ್ಜರಿ ಹೀಗೆ ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಮೇವಿಗಾಗಿ ಫಾರಂ ಹುಲ್ಲು ಬೆಳೆದಿದ್ದಾರೆ. ಪತ್ನಿ, ಪುತ್ರನೂ ಅವರ ಕೃಷಿ ಕಾಯಕಕ್ಕೆ ನೆರವಾಗುತ್ತಾರೆ.

ADVERTISEMENT

‘ನನ್ನ ಜಮೀನಿನಲ್ಲಿ ತಲಾ 10 ಗುಂಟೆಯಲ್ಲಿ ಮೆಣಸಿನಕಾಯಿ, ಬದನೆಕಾಯಿ ಹಾಗೂ ಉಳಿದ ಕ್ಷೇತ್ರದಲ್ಲಿ ಸೋಯಾಬಿನ್ ಬೆಳೆದಿದ್ದೇನೆ. ವಾರ್ಷಿಕವಾಗಿ ₹2 ಲಕ್ಷ ಆದಾಯ ಗಳಿಸುತ್ತೇನೆ’ ಎಂದು ಗಂಗಪ್ಪ ತಿಳಿಸಿದರು.

‘ಮನೆಯಲ್ಲಿ ಒಂದು ಜೋಡಿ ಎತ್ತುಗಳಿವೆ. ಎರಡು ಎಮ್ಮೆಗಳನ್ನು ಸಾಕಿದ್ದೇನೆ. ಅವುಗಳ ಹಾಲು ಮಾರಾಟ ಹಾಗೂ ಹೊಲದಲ್ಲಿರುವ ಮರಗಳ ತೆಂಗಿನಕಾಯಿ ಮಾರಾಟದಿಂದಲೂ ಒಂದಿಷ್ಟು ಆದಾಯ ಕೈಗೆಟುಕುತ್ತಿದೆ. ಜೊತೆಗೆ ವಿವಿಧ ಧಾನ್ಯಗಳನ್ನು ಮಾರಾಟ ಮಾಡಿ, ಆದಾಯ ಹೆಚ್ಚಿಸಿಕೊಳ್ಳುತ್ತಿದ್ದೇನೆ’ ಎಂದರು.

ಅವರು ತಮ್ಮ ಹೊಲದಲ್ಲಿ 20 ವರ್ಷಗಳ ಹಿಂದೆ ಕೊರೆಯಿಸಿದ ಕೊಳವೆಬಾವಿಯಿಂದ ಎಲ್ಲ ಬೆಳೆಗಳಿಗೆ ನೀರುಣಿಸುತ್ತಿದ್ದಾರೆ. ತಮ್ಮ ಸ್ವಂತ ಜಮೀನಿನ ಜೊತೆಗೆ, ಬೇರೆಯವರ 4 ಎಕರೆ ಜಮೀನಿನಲ್ಲೂ ಗಜ್ಜರಿ, ಸೋಯಾಬೀನ್ ಮತ್ತಿತರ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

‘ನನ್ನ ಜಮೀನಿನಲ್ಲಿ ತಿಪ್ಪೆ ಗೊಬ್ಬರ ಬಳಕೆಗೆ ಒತ್ತು ನೀಡುತ್ತೇನೆ. ಇದರಿಂದ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯವಾಗುತ್ತಿದೆ. ಈಗಿನ ಕಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾರ್ಮಿಕರನ್ನು ಇಟ್ಟುಕೊಂಡು ಕೃಷಿ ಮಾಡಿದರೆ ನಷ್ಟವೇ ಹೆಚ್ಚು. ಹೀಗಾಗಿ ಕುಟುಂಬದವರೆಲ್ಲ ಕೃಷಿಯಲ್ಲಿ ತೊಡಗಿಕೊಂಡಿದ್ದೇವೆ’ ಎನ್ನುತ್ತಾರೆ ಅವರು. ಸಂಪರ್ಕಕ್ಕಾಗಿ ಮೊ.ಸಂ.80953 23002.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.