
ಬೆಳಗಾವಿ: ರಾಜ್ಯದಲ್ಲಿ ಕೆಲಸ ಮಾಡುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಕೇಂದ್ರದ ಪ್ರೋತ್ಸಾಹಧನ, ರಾಜ್ಯದ ಗೌರವಧನ ಸೇರಿ ಮಾಸಿಕ ₹15 ಸಾವಿರ ನೀಡುವುದಾಗಿ ಈ ಬಾರಿ ಬಜೆಟ್‌ನಲ್ಲಿ ಘೋಷಿಸಬೇಕು ಎಂದು ಒತ್ತಾಯಿಸಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದವರು ನಗರದಲ್ಲಿ ಶುಕ್ರವಾರ ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿನ ಸರ್ಕಾರಿ ಸರದಾರ್ಸ್ ಪ್ರೌಢಶಾಲೆ ಮೈದಾನದಿಂದ ರಾಣಿ ಚನ್ನಮ್ಮನ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ, ತಮ್ಮ ಬೇಡಿಕೆ ಈಡೇರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನಂತರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಮನವಿ ಕೊಟ್ಟರು.
‘ಮಾಸಿಕ ₹15 ಸಾವಿರ ನೀಡುವವರೆಗೆ, ಕಾಂಗ್ರೆಸ್ ಪಕ್ಷವು 2023ರ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಆಶಾ ಕಾರ್ಯಕರ್ತೆಯರ ಗೌರವಧನವನ್ನು ₹5 ಸಾವಿರದಿಂದ ₹8 ಸಾವಿರಕ್ಕೆ ಹೆಚ್ಚಿಸಬೇಕು. ನಿವೃತ್ತ ಕಾರ್ಯಕರ್ತೆಯರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡುಗಂಟು ನೀಡಬೇಕು. ತೀವ್ರತರದ ಕಾಯಿಲೆಗಳ ಚಿಕಿತ್ಸಾ ವೆಚ್ಚಕ್ಕಾಗಿ ಕಾರ್ಪಸ್ ಫಂಡ್ ಮಾಡಿ, ಅಂಗನವಾಡಿ ಮಾದರಿಯಲ್ಲಿ ಚಿಕಿತ್ಸಾ ವೆಚ್ಚ ಮರುಪಾವತಿಗೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಗೀತಾ ರಾಯಗೋಳ, ರೂಪಾ ಅಂಗಡಿ, ಸುಜಾತಾ ಕಾಡಮಠ, ಜಯಶ್ರೀ ನಾವಿ, ಭಾರತಿ ಮಾಶಾಳ, ರೀಟಾ ಫರ್ನಾಂಡೀಸ್, ಗಂಗಾ ಅವಟಿ, ಗಂಗಮ್ಮ ಬೆಂಡಿಗೇರಿ, ಲಕ್ಷ್ಮಣ ಜಡಗನ್ನವರ ನೇತೃತ್ವ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.