ಅಥಣಿ: ರಾಜ್ಯದ ಅತ್ಯುತ್ತಮ 10 ಸರ್ಕಾರಿ ಆಸ್ಪತ್ರೆಗಳಲ್ಲಿ ಅಥಣಿ ಸಾರ್ವಜನಿಕ ಆಸ್ಪತ್ರೆ ಇರುವುದು ನಮ್ಮೆಲ್ಲರಿಗೆ ಹೆಮ್ಮೆಯ ಸಂಗತಿಯಾಗಿದ್ದು, ಶಾಸಕರ ವಿಶೇಷ ಕಾಳಜಿಯಿಂದ ಆಸ್ಪತ್ರೆಗೆ ಹೈಟೆಕ್ ಸೌಲಭ್ಯಗಳು ದೊರಕಿದ್ದು, ಇದರಿಂದ ಬಡ ರೋಗಿಗಳಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಉಚಿತವಾಗಿ ಒದಗಿಸಲು ಸಹಕಾರಿಯಾಗಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ ಹೇಳಿದರು.
ಈಚೆಗೆ ಪಟ್ಟಣದ ಹೆಸ್ಕಾಂ ಕಚೇರಿಯ ಆವರಣದಲ್ಲಿ ಸರ್ಕಾರಿ ಆಸ್ಪತ್ರೆಗೆ ದಿನದ 24 ಗಂಟೆಯ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲ್ಲೂಕಿನ ಬಡ ರೋಗಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆಗಳು ದೊರಕ ಬೇಕು ಮತ್ತು ಅತ್ಯಾಧುನಿಕ ಸೌಲಭ್ಯಗಳು ಕೂಡಾ ಉಚಿತವಾಗಿ ದೊರಕಬೇಕು ಎಂಬ ವಿಶೇಷ ಕಾಳಜಿಯೊಂದಿಗೆ ಶಾಸಕರಾದ ಲಕ್ಷ್ಮಣ ಸವದಿ ಅವರು ಸರ್ಕಾರದಿಂದ ವಿಶೇಷ ಅನುದಾನ ನೀಡುವ ಮೂಲಕ ಅಥಣಿ ಸಾರ್ವಜನಿಕ ಆಸ್ಪತ್ರೆಗೆ ಸೌಲಭ್ಯ ಒದಗಿಸಿದ್ದಾರೆ. ಡಯಾಲಿಸಿಸ್ ಘಟಕ, ಆಕ್ಸಿಜನ್ ಘಟಕ, ಹೈಟೆಕ್ ಪ್ರಯೋಗಾಲಯ, ಅಂಬುಲೆನ್ಸ್ ಸೇವೆ, ದಿನದ 24 ಗಂಟೆ ಶುದ್ಧ ಕುಡಿಯುವ ನೀರಿಗಾಗಿ ಬೋರ್ವೆಲ್ ಮತ್ತು ಜಲಸುದ್ಧೀಕರಣ ಘಟಕ, ದಿನದ 24 ಗಂಟೆ ವಿದ್ಯುತ್ ಸಂಪರ್ಕ ಒದಗಿಸುವ ಮೂಲಕ ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಎಲ್ಲಾ ಸೌಲಭ್ಯಗಳು ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ದೊರಕುವ ವ್ಯವಸ್ಥೆ ಮಾಡಿ ಕೊಟ್ಟಿದ್ದಾರೆ ಎಂದರು.
ಶಾಸಕರ ಮಾರ್ಗದರ್ಶನದಂತೆ ಆಸ್ಪತ್ರೆಗೆ ಎಲ್ಲ ತಜ್ಞ ವೈದ್ಯರು ಮತ್ತು ಸಿಬ್ಬಂದಿ ಬಡ ರೋಗಿಗಳಿಗೆ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ. ನಮಗೆ ಮೇಲಿಂದ ಮೇಲೆ ವಿದ್ಯುತ್ ಸಮಸ್ಯೆ ಆಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಕೆಡಿಪಿ ಸಭೆಯಲ್ಲಿ ಶಾಸಕರು ನೀಡಿದ ಸೂಚನೆಯ ಮೇರೆಗೆ ಹೆಸ್ಕಾಂ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತ ಜಿ. ವ್ಹಿ. ಸಂಪಣ್ಣವರ ಹಾಗೂ ಅವರ ಸಿಬ್ಬಂದಿ, ಲೈಮನ್‌ಗಳು ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಕಳೆದು ಒಂದು ವಾರದಿಂದ ಪ್ರಾಯೋಗಿಕವಾಗಿ ದಿನದ 24 ಗಂಟೆ ವಿದ್ಯುತ್ ಸಂಪರ್ಕ ಒದಗಿಸಿದ್ದಾರೆ ಎಂದರು.
ಇಂದು ಅಧಿಕೃತ ಚಾಲನೆಗೆ ಮಾನ್ಯ ಶಾಸಕರು ಆಗಮಿಸಬೇಕಾಗಿತ್ತು. ಅನಿವಾರ್ಯ ಕಾರಣಗಳಿಂದ ಅವರ ಅನುಪಸ್ಥಿತಿಯಲ್ಲಿ ಅವರ ಸಲಹೆಯಂತೆ ನಾವಿಂದು ಈ ವಿದ್ಯುತ್ ಸಂಪರ್ಕಕ್ಕೆ ಚಾಲನೆ ನೀಡುತ್ತಿದ್ದೇವೆ.
ಅಥಣಿ ಹೆಸ್ಕಾಂ ಉಪ ವಿಭಾಗದ ಕಾರ್ಯನಿರ್ವಾಹಕ ಅಭಿಯಂತ ಜಿ. ವಿ. ಸಂಪಣ್ಣವರ ಮಾತನಾಡಿ ಹೆಸ್ಕಾಂ ಇಲಾಖೆಯಿಂದ ಸಾರ್ವಜನಿಕರಿಗೆ ಇರುವ ವಿದ್ಯುತ್ ಸೌಲಭ್ಯಗಳು ಮತ್ತು ರೈತಾಪಿ ಜನರಿಗೆ ಇರುವ ಕುಸುಮ ಯೋಜನೆಯ ಸೋಲಾರ್ ಪಂಪ್ ಸೆಟ್‌ಗಳನ್ನ ಸರ್ಕಾರದ ಸಬ್ಸಿಡಿ ದರದಲ್ಲಿ ಪಡೆದುಕೊಳ್ಳುವಂತೆ ಕರೆ ನೀಡಿದರು.
ಹೆಸ್ಕಾಂ ಇಲಾಖೆಯ ಸಹಾಯಕ ಅಭಿಯಂತ ಸಿಆರ್. ಗುರುಸ್ವಾಮಿ, ಎ.ಎಸ್. ಮಾಕಾಣಿ, ಆರ್. ವೈ ಗುಗ್ರಿ, ಶಾಖಾಧಿಕಾರಿಗಳಾದ ಮಹಾಂತೇಶ ಅಂಬೋಳಿ, ಬಿ.ಜಿ.ಸನದಿ, ಎಸ್.ಎ ಪಾರ್ಥನಹಳ್ಳಿ, ಬಿಎಸ್ ಸನದಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಮಹಾಂತೇಶ ಅಂಬೋಳಿ ಸ್ವಾಗತಿಸಿದರು. ಅಶೋಕ ವಾಲೀಕಾರ ನಿರೂಪಿಸಿದರು. ಪಿ ಬಿ ಸತ್ತಿ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.