ADVERTISEMENT

ಮೂಡಲಗಿ: ‘ಕೊನೆ’ ಗ್ರಾಮ, ಸೌಲಭ್ಯದಿಂದ ದೂರ

ಕಾಯಕಲ್ಪಕ್ಕಾಗಿ ಕಾಯುತ್ತಿರುವ ಅವರಾದಿ ಸೇತುವೆ

ಬಾಲಶೇಖರ ಬಂದಿ
Published 26 ಏಪ್ರಿಲ್ 2022, 19:30 IST
Last Updated 26 ಏಪ್ರಿಲ್ 2022, 19:30 IST
ಜಲಾವೃತಗೊಂಡಿರುವ ಘಟಪ್ರಭಾ ನದಿಗೆ ನಿರ್ಮಿಸಿರುವ ಅವರಾದಿ ಸೇತುವೆಯಲ್ಲಿ ಸಂಚಾರಕ್ಕೆ ಜನರು ಪರದಾಡುತ್ತಿರುವುದು 
ಜಲಾವೃತಗೊಂಡಿರುವ ಘಟಪ್ರಭಾ ನದಿಗೆ ನಿರ್ಮಿಸಿರುವ ಅವರಾದಿ ಸೇತುವೆಯಲ್ಲಿ ಸಂಚಾರಕ್ಕೆ ಜನರು ಪರದಾಡುತ್ತಿರುವುದು    

ಮೂಡಲಗಿ: ತಾಲ್ಲೂಕಿನ ಪೂರ್ವ ಭಾಗದ ಕೊನೆಯ ಗ್ರಾಮವಾದ ಅವರಾದಿ ಮೂಲಸೌಲಭ್ಯಗಳ ಕೊರತೆ ಎದುರಿಸುತ್ತಿದೆ.

2,656 ಜನಸಂಖ್ಯೆ ಹೊಂದಿರುವ ಗ್ರಾಮವು ಹಳೇಯರಗುದ್ರಿ, ತಿಮ್ಮಾಪುರ, ವೆಂಕಟಾಪುರ, ಯರಗುದ್ರಿ ಗ್ರಾಮಗಳನ್ನು ಒಳಗೊಂಡಿರುವ ಗ್ರಾಮ ಪಂಚಾಯ್ತಿ ಕೇಂದ್ರವಾಗಿದೆ. ವ್ಯಾಪಾರ ಮತ್ತು ಶಿಕ್ಷಣಕ್ಕೆ ಕೇಂದ್ರ ಸ್ಥಳವಾಗಿದೆ. ಕೃಷಿ ಇಲ್ಲಿನವರ ಮುಖ್ಯ ಕಸುಬು. ಶಿಕ್ಷಣ, ದೇಸಿ ಕ್ರೀಡೆ, ಸಾಂಸ್ಕೃತಿಕ ಕಾರ್ಯಗಳಿಗೆ ಉತ್ತೇಜನ ನೀಡುವ ಗ್ರಾಮವಿದು. ರಸ್ತೆಗಳು, ಚರಂಡಿ ವ್ಯವಸ್ಥೆ, ಸಾರ್ವಜನಿಕ ಶೌಚಾಲಯಗಳ ಮೂಲ ಸೌಲಭ್ಯಗಳ ಕೊರತೆ ಎದ್ದುಕಾಣುತ್ತದೆ.

ಅವರಾದಿಯಿಂದ ಯರಗುದ್ರಿ, ಅರಳಮಟ್ಟಿ, ಮಹಾಲಿಂಗಪುರ ಸಂಪರ್ಕಿಸುವ ರಸ್ತೆಗಳು ಬಹಳಷ್ಟು ಹದಗೆಟ್ಟಿವೆ. ಇದರಿಂದ ಸಂಚಾರಕ್ಕೆ ತೊಂದರೆಯಾಗಿದೆ. ಮಳೆ ಬಿದ್ದಾಗಲಂತೂ ಸಂಚಾರ ತೀವ್ರ ತ್ರಾಸದಾಯವಾಗುತ್ತದೆ.

ADVERTISEMENT

ಹಲವು ತೊಂದರೆ:ಗ್ರಾಮಕ್ಕೆ ಅವಶ್ಯವಿರುವಷ್ಟು ಶೌಚಾಲಯಗಳಿಲ್ಲ. ಇದರಿಂದ ಬಯಲು ಬಹಿರ್ದೆಸೆ ತಪ್ಪಿಲ್ಲ. ಪ್ರತಿ ಭಾನುವಾರ ನಡೆಯುವ ಸಂತೆಗೆ ಪ್ರತ್ಯೇಕ ಸ್ಥಳ ಇಲ್ಲವಾದ್ದರಿಂದ ರಸ್ತೆಯಲ್ಲೇ ವ್ಯಾಪಾರ–ವಹಿವಾಟು ನಡೆಯುತ್ತದೆ. ಆಗಲೂ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ.

ಗ್ರಾ.ಪಂ.ನಿಂದ ನಿರ್ವಹಿಸಲಾಗುವ ಗ್ರಂಥಾಲಯಕ್ಕೆ ಕಟ್ಟಡವಿಲ್ಲ. ಶೀಟಿನ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ದಿನಪತ್ರಿಕೆಗಳ ಕೊರತೆ ಇದೆ. ನಿರ್ವಹಣೆ ಇಲ್ಲದೆ ಗ್ರಂಥಾಲಯವು ಕೇವಲ ‘ಆಲಯ’ ಎನ್ನುವಂತಿದೆ ಎಂದು ಪದವೀಧರ ಯುವಕರು ದೂರುತ್ತಾರೆ. ಮೂರು ಅಂಗನವಾಡಿ ಕೇಂದ್ರಗಳೂ ಸ್ವಂತ ಕಟ್ಟಡವಿಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿವೆ.

‘ಜಲ ಜೀವನ ಮಿಷನ್‌ ಯೋಜನೆಯಲ್ಲಿ ಅವರಾದಿಯಲ್ಲಿ ಶೇ. 60ಕ್ಕೂ ಹೆಚ್ಚು ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸಲಾಗಿದೆ’ ಎಂದು ಪಿಡಿಒ ಶಿವಲೀಲಾ ದಳವಾಯಿ ತಿಳಿಸಿದರು.

ಸೇತುವೆ ಜಲಾವೃತ:ಘಟಪ್ರಭಾ ನದಿಗೆ 4 ದಶಕದ ಹಿಂದೆ ನಿರ್ಮಿಸಿರುವ ಸೇತುವೆ ಕೆಳಮಟ್ಟದಲ್ಲಿದೆ. ಪ್ರವಾಹ ಬಂದಾಗ ಹಾಗೂ ಜಲಾಶಯದಿಂದ ನೀರು ಬಿಟ್ಟಾಗ ಜಲಾವೃತಗೊಂಡು ನಂದಾಗಾಂವ ಮತ್ತು ಮಹಾಲಿಂಗಪುರಕ್ಕೆ ಸಂಪರ್ಕ ಕಡಿತವಾಗುತ್ತದೆ. ವಿದ್ಯಾರ್ಥಿಗಳು ಕಾಲೇಜುಗಳಿಗೆ ಮತ್ತು ರೋಗಿಗಳು ಆಸ್ಪತ್ರೆಗಳಿಗೆ ಹೋಗಲು ಪರದಾಡುವ ಸ್ಥಿತಿ ನಿರ್ಮಾಣವಾಗುತ್ತದೆ.

ಮಟ್ಟ ಎತ್ತರಿಸದೆ ಪಡಿಪಾಟಲು:ಸೇತುವೆಯ ಮಟ್ಟ ಎತ್ತರಿಸಬೇಕು ಎನ್ನುವುದು ಈ ಭಾಗದ ಜನರ ಹಲವು ದಶಕಗಳ ಬೇಡಿಕೆಯಾಗಿದೆ. ಈ ಬಗ್ಗೆ ಶಾಸಕರು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಪ್ರಮುಖರಾದ ಎಂ.ಎಂ. ಪಾಟೀಲ, ಚಂದ್ರಶೇಖರ ನಾಯಿಕ, ಸುಭಾಷ ಪಾಟೀಲ, ಮಲಗೌಡ ಪಾಟೀಲ, ಹನಮಂತಗೌಡ ಪಾಟೀಲ, ಹನಮಂತ ಡೊಂಬರ, ಚತ್ರು ಮೇತ್ರಿ ನೇತೃತ್ವದಲ್ಲಿ ಕಳೆದ ವರ್ಷ ಜಲ ಸಂಪನ್ಮೂಲ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ. ಇನ್ನೂ ಎಷ್ಟು ವರ್ಷ ತೊಂದರೆ ಅನುಭವಿಸಬೇಕು ಎನ್ನುವುದು ಜನರ ಪ್ರಶ್ನೆಯಾಗಿದೆ.

‘ಅಭಿವೃದ್ಧಿ ಕೆಲಸಗಳಿಗೆ ಇಲಾಖೆಯಿಂದ ಅನುಮತಿ ಪಡೆದಿದ್ದು, ಶೀಘ್ರದಲ್ಲೇ ಆರಂಭವಾಗಲಿವೆ. ಅವರಾದಿ–ತಿಮ್ಮಾಪುರ ರಸ್ತೆ ಕಾಮಗಾರಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ₹18 ಕೋಟಿ ಮಂಜೂರು ಮಾಡಿಸಿದ್ದು ಶೀಘ್ರದಲ್ಲೇ ಚಾಲನೆ ದೊರೆಯಲಿದೆ’ ಎಂದು ಗ್ರಾ.ಪಂ. ಅಧ್ಯಕ್ಷೆ ಸವಿತಾ ನಾಯಿಕ ತಿಳಿಸಿದರು.

‘ಪರಿಶಿಷ್ಟರ ಓಣಿಯಲ್ಲಿ ಸಿಸಿ ರಸ್ತೆ, ಚರಂಡಿಗಳ ಕಾಮಗಾರಿ ನಡೆದಿದೆ. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಭಿವೃದ್ಧಿಗೆ ಹೆಚ್ಚು ಗಮನ ನೀಡಿದ್ದಾರೆ. ಮಾದರಿ ಗ್ರಾಮವನ್ನಾಗಿಸುವತ್ತ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇವೆ’ ಎನ್ನುತ್ತಾರೆ ಅವರು.

***

ನಿರ್ಮಾಣಕ್ಕೆ ಕ್ರಮ

ಅವರಾದಿ ಗ್ರಾಮದಲ್ಲಿ ₹30 ಲಕ್ಷದ ವೆಚ್ಚದಲ್ಲಿ ಚರಂಡಿ, ಶೌಚಾಲಯಗಳ ನಿರ್ಮಾಣಕ್ಕೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ನಿವೇಶನ ನೀಡಲು ನಿರ್ಧರಿಸಲಾಗಿದೆ.

–ಸವಿತಾ ಚಂದ್ರಶೇಖರ ನಾಯಿಕ, ಅಧ್ಯಕ್ಷೆ, ಗ್ರಾಮ ಪಂಚಾಯ್ತಿ, ಅವರಾದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.