ADVERTISEMENT

ಬಸವಣ್ಣ ಸಮಾನತೆಯ ಹರಿಕಾರ: ಸಂಸದೆ ಮಂಗಲಾ ಅಂಗಡಿ

ಬೆಳಗಾವಿಯಲ್ಲಿ ಬಸವ ಜಯಂತಿ ಆಚರಣೆಗೆ ಚಾಲನೆ

​ಪ್ರಜಾವಾಣಿ ವಾರ್ತೆ
Published 30 ಏಪ್ರಿಲ್ 2022, 11:42 IST
Last Updated 30 ಏಪ್ರಿಲ್ 2022, 11:42 IST
ಬೆಳಗಾವಿಯಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ಸಂಸದೆ ಮಂಗಲಾ ಅಂಗಡಿ, ಕಾರಂಜಿ ಮಠದ ಗುರುಸಿದ್ದ ಸ್ವಾಮೀಜಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮೊದಲಾದವರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶನಿವಾರ ಚಾಲನೆ ನೀಡಿದರು
ಬೆಳಗಾವಿಯಲ್ಲಿ ಬಸವ ಜಯಂತಿ ಅಂಗವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳಿಗೆ ಸಂಸದೆ ಮಂಗಲಾ ಅಂಗಡಿ, ಕಾರಂಜಿ ಮಠದ ಗುರುಸಿದ್ದ ಸ್ವಾಮೀಜಿ, ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಮೊದಲಾದವರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಶನಿವಾರ ಚಾಲನೆ ನೀಡಿದರು   

ಬೆಳಗಾವಿ: ‘ಬಸವಣ್ಣನವರು ಸಮಾನತೆಯ ಹರಿಕಾರರಾಗಿದ್ದಾರೆ. ಸಮ ಸಮಾಜ ನಿರ್ಮಿಸುವ ಮೂಲಕ ಶತಮಾನಗಳ ಕೊಳೆಯನ್ನು ತೊಳೆದರು. ಅವರ ಸಂದೇಶಗಳು ವಿಶ್ವಮಾನ್ಯವಾಗಿವೆ’ ಎಂದು ಸಂಸದೆ ಮಂಗಲಾ ಅಂಗಡಿ ಸ್ಮರಿಸಿದರು.

ಅಖಿಲ ಭಾರತ ವೀರಶೈವ ಮಹಾಸಭೆ, ‘ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವ ಸಮಿತಿ’ ಮತ್ತು ವಿವಿಧ ಲಿಂಗಾಯತ ಸಂಘಟನೆಗಳ ಸಹಯೋಗದಲ್ಲಿ ನಗರದಲ್ಲಿ ನಾಲ್ಕು ದಿನಗಳವರೆಗೆ ಹಮ್ಮಿಕೊಂಡಿರುವ ಬಸವ ಜಯಂತಿ ಕಾರ್ಯಕ್ರಮವನ್ನು ಗೋವಾವೇಸ್ ಬಸವೇಶ್ವರ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಬಸವಣ್ಣನವರು ತಮ್ಮ ವಿಚಾರಗಳನ್ನು ನಡೆ–ನುಡಿಯಲ್ಲಿ ತಂದರು. ಸಮಾಜದಲ್ಲಿ ಬೇರು ಬಿಟ್ಟಿದ್ದ ಮೌಢ್ಯತೆಗಳನ್ನು ಖಂಡಿಸಿದರು. ಅವರ ವಿಚಾರಗಳನ್ನು ಅನುಷ್ಠಾನಕ್ಕೆ ತರುವುದು ಇಂದಿನ ಅನಿವಾರ್ಯ’ ಎಂದರು.

ADVERTISEMENT

ಸ್ತ್ರೀ ಸಮಾನತೆಗೆ:ಮುಖ್ಯ ಅತಿಥಿಯಾಗಿದ್ದ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ, ‘ಬಸವಣ್ಣ ಸ್ತ್ರೀ ಸಮಾನತೆಯ ಹರಿಕಾರರು. ಸಮಾಜದಲ್ಲಿಯ ಅನೇಕ ಓರೆಕೋರೆಗಳನ್ನು ಪರಾಮರ್ಶಿಸಿದರು. ವ್ಯಕ್ತಿ ಸ್ವಚ್ಛಂದವಾಗಿ ಬದುಕಬೇಕು ಎಂದು ಆಶಿಸಿದರು. ಅವರ ವಿಚಾರಗಳು ಪ್ರಖರವಾಗಿದ್ದವು; ಮನನೀಯವಾಗಿದ್ದವು’ ಎಂದು ನೆನೆದರು.

‘ಬಸವಣ್ಣನ ಕರ್ನಾಟಕದ ಅದ್ಭುತ ಕೊಡುಗೆಯಾಗಿದ್ದಾರೆ. ಇಂದಿನ ಯುವ ಜನಾಂಗ ಅವರ ವಿಚಾರಧಾರೆಯನ್ನು ಅವಲೋಕಿಸಬೇಕು; ಅನುಸರಿಸಬೇಕು. ಅದು ನಾವು ಅವರಿಗೆ ನೀಡುವ ಗೌರವವಾಗಿದೆ’ ಎಂದು ತಿಳಿಸಿದರು.

ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ, ‘ಯುವ ಜನಾಂಗಕ್ಕೆ ಬಸವಣ್ಣನವರ ವಿಚಾರಗಳನ್ನು ಮುಟ್ಟಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು. ಮಕ್ಕಳಲ್ಲಿ ಬಸವ ಸಂಸ್ಕಾರಗಳನ್ನು ಬಿತ್ತಬೇಕು’ ಎಂದು ಆಶಯ ವ್ಯಕ್ತಪಡಿಸಿದರು.

ಜಯಂತ್ಯುತ್ಸವ ಸಮಿತಿ ಅಧ್ಯಕ್ಷೆ ಜ್ಯೋತಿ ಭಾವಿಕಟ್ಟಿ, ‘ನಗರದಲ್ಲಿ ಬಸವ ಜಯಂತಿಯ ಉಸ್ತುವಾರಿಯನ್ನು ಇದೇ ಮೊದಲ ಬಾರಿಗೆ ಮಹಿಳೆಗೆ ವಹಿಸಲಾಗಿದೆ. ಅನೇಕ ದಾನಿಗಳು ಉತ್ಸವಕ್ಕೆ ನೆರವಾಗಿದ್ದಾರೆ’ ಎಂದರು.

ಬಹುಮಾನ ವಿತರಣೆ:ಬಸವ ಜಯಂತಿ ಅಂಗವಾಗಿ ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿಪತ್ರ ಮತ್ತು ಬಹುಮಾನ, ಎಸ್ಸೆಸ್ಸೆಲ್ಸಿ, ಪಿಯು, ಪದವಿ ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮಹಾನಗರ ಪಾಲಿಕೆ ಆಯುಕ್ತ ರುದ್ರೇಶ ಘಾಳಿ, ಮುಖಂಡರಾದ ಘೂಳಪ್ಪ ಹೊಸಮನಿ, ಡಾ.ಎಸ್.ಎಂ. ದೊಡ್ಡಮನಿ, ರಮೇಶ ಕಳಸಣ್ಣವರ, ಹನಮಂತ ಕೊಂಗಾಲ, ರಾಜಶೇಖರ ಡೋಣಿ, ಶಂಕರ ಬಿಜಾಪುರೆ, ಡಾ.ಎಚ್.ಬಿ. ರಾಜಶೇಖರ, ಚಂದ್ರಶೇಖರ ಬೆಂಬಳಗಿ, ಡಾ.ಎಫ್.ವಿ. ಮಾನ್ವಿ, ವಿ.ಬಿ. ಜಾವೂರ, ಚೇತನ ಅಂಗಡಿ, ಸುಜಿತ ಮುಳಗುಂದ ಇದ್ದರು.

ಶಹಾಪುರದ ಅಕ್ಕನ ಬಳಗದ ಶರಣೆಯರು ಹಾಗೂ ನಯನಾ ಗಿರಿಗೌಡರ ಪ್ರಾರ್ಥಿಸಿದರು. ಸೋಮಲಿಂಗ ಮಾವಿನಕಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಡಾ.ಮಹೇಶ ಗುರನಗೌಡರ ನಿರೂಪಿಸಿದರು. ಗುರುದೇವ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.