ADVERTISEMENT

ಯತ್ನಾಳ ಉಚ್ಚಾಟನೆ ಹಿಂಪಡೆಯಲು ಏ.10ರ ಗಡುವು ನೀಡಿದ ಮೃತ್ಯುಂಜಯ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2025, 12:26 IST
Last Updated 27 ಮಾರ್ಚ್ 2025, 12:26 IST
ಬಸವಜಯ ಮೃತ್ಯುಂಜಯ ಸ್ವಾಮೀಜಿ
ಬಸವಜಯ ಮೃತ್ಯುಂಜಯ ಸ್ವಾಮೀಜಿ   

ಬೆಳಗಾವಿ: ‘ಬಸನಗೌಡ ಪಾಟೀಲ ಯತ್ನಾಳ ಉಚ್ಚಾಟನೆ ಆದೇಶವನ್ನು ಬಿಜೆಪಿ ನಾಯಕರು ಏಪ್ರಿಲ್‌ 10ರೊಳಗೆ ಹಿಂದಕ್ಕೆ ಪಡೆಯಬೇಕು. ಇಲ್ಲದಿದ್ದರೆ ಏಪ್ರಿಲ್‌ 13ರಿಂದ ಸಮಾಜದಿಂದ ಬೃಹತ್‌ ಪ್ರತಿಭಟನೆ ಎದುರಿಸಬೇಕಾಗುತ್ತದೆ’ ಎಂದು ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ನಗರದಲ್ಲಿ ಗುರುವಾರ ಸಮಾಜದವರ ನಡೆಸಿ ಚರ್ಚಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.

‘ಯಡಿಯೂರಪ್ಪ, ವಿಜಯೇಂದ್ರ ಕುತಂತ್ರದಿಂದ ಯತ್ನಾಳ ಉಚ್ಚಾಟನೆ ಮಾಡಲಾಗಿದೆ. ಕರ್ನಾಟಕದಲ್ಲಿ ಲಿಂಗಾಯತರನ್ನು ಕಡೆಗಣಿಸಿ ಸರ್ಕಾರಗಳು ಉಳಿದಿಲ್ಲ. ದೊಡ್ಡ ಬಲ ಹೊಂದಿದ ‍ಪಂಚಮಸಾಲಿ ನಾಯಕರನ್ನು ತುಳಿದವರು ಉದ್ಧಾರವಾಗಿಲ್ಲ. ಮುಖ್ಯಮಂತ್ರಿಗಳಾಗಿದ್ದ ವೀರೇಂದ್ರ ಪಾಟೀಲ, ಜೆ.ಎಚ್‌.ಪಟೇಲ್ ಅವರ ಕಾಲದಿಂದಲೂ ಇದಕ್ಕೆ ಉದಾಹರಣೆಗಳಿವೆ’ ಎಂದರು.

ADVERTISEMENT

‘ಉತ್ತರ ಕರ್ನಾಟಕದ ಅಭಿವೃದ್ಧಿಗೆ, ಪಂಚಮಸಾಲಿ ಸಮಾಜದ ಮೀಸಲಾತಿಗೆ, ಹಿಂದೂ ಪರ ನಿಲುವುಗಳಿಗೆ ಯತ್ನಾಳ ಅವರು ಯಾವಾಗಲೂ ಮುಂದೆ ಬಂದಿದ್ದಾರೆ. ಎಲ್ಲ ಜಾತಿ, ಸಮಾಜದವರೊಂದಿಗೂ ನಿಂತಿದ್ದಾರೆ. ಈಗ ಎಲ್ಲರೂ ಅವರ ಬೆಂಬಲಕ್ಕೆ ನಿಲ್ಲಲಿದ್ದಾರೆ’ ಎಂದೂ ಸ್ವಾಮೀಜಿ ಹೇಳಿದರು.

‘ಕಾಂಗ್ರೆಸ್‌, ಬಿಜೆಪಿ ಎರಡನ್ನೂ ನಾವು ಸಮಾನವಾಗಿ ವಿರೋಧಿಸುತ್ತೇವೆ. ಮುಂದಿನ ದಿನಗಳಲ್ಲಿ ಪಂಚಮಸಾಲಿಗರದ್ದೇ ಶಕ್ತಿ ಹುಟ್ಟುಹಾಕುತ್ತೇವೆ. ಇದಕ್ಕೆ ನಾಯಕರ ಸಭೆ ಕರೆದು ಅಭಿಪ್ರಾಯ ಪಡೆಯುತ್ತೇವೆ’ ಎಂದರು.

‘ಪಂಚಮಸಾಲಿ ಸಮಾಜದ ಎಲ್ಲ ಶಾಸಕರು, ಸಂಸದರು ಬಿಜೆಪಿ ವರಿಷ್ಠರಿಗೆ ಮನವರಿಕೆ ಮಾಡಿಕೊಡಬೇಕು. ಸಮಾಜದವರೂ ಅವರ ಬೆನ್ನಿಗೆ ನಿಲ್ಲಬೇಕು’ ಎಂದೂ ಕರೆ ಕೊಟ್ಟರು.

‘ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್‌ ಶಾ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಸೇರದಂತೆ ಯಾರ ಮೇಲೂ ನಮಗೆ ಬೇಸರವಿಲ್ಲ. ಅವರಿಗೆ ಸುಳ್ಳು ಮಾಹಿತಿ ನೀಡಿದವರ ಬಗ್ಗೆ ಮಾತ್ರ ತಕರಾರು ಇದೆ’ ಎಂದೂ ಪ್ರಶ್ನೆಗೆ ಉತ್ತರಿಸಿದರು.

ಹೋರಾಟ ಸಮಿತಿ ಮುಖಂಡರಾದ ನಿಂಗಪ್ಪ ಫೀರೋಜಿ, ಆರ್‌.ಕೆ.ಪಾಟೀಲ, ಗುಂಡು ಪಾಟೀಲ, ಶಿವಾನಂದ ತಂಬಾಕೆ, ರಾಜು ಮಗದುಮ್‌, ರಾಮನಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.