ADVERTISEMENT

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಚನ್ನಮ್ಮ ಹೆಸರು: ವಿಳಂಬವೇಕೆ?

ಸಂತೋಷ ಈ.ಚಿನಗುಡಿ
Published 22 ಅಕ್ಟೋಬರ್ 2022, 19:31 IST
Last Updated 22 ಅಕ್ಟೋಬರ್ 2022, 19:31 IST
ಬೆಳಗಾವಿ ವಿಮಾನ ನಿಲ್ದಾಣ
ಬೆಳಗಾವಿ ವಿಮಾನ ನಿಲ್ದಾಣ   

ಬೆಳಗಾವಿ: ವಿಜಯಪುರ ವಿಮಾನ ನಿಲ್ದಾಣಕ್ಕೆ ಬಸವಣ್ಣನ ಹೆಸರಿಡಲು ಈಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಆದರೆ, ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮನ ಹೆಸರು ಇಡಬೇಕೆಂಬ ಕೂಗಿಗೆ ಸರ್ಕಾರ ಇನ್ನೂ ಕಿವಿಗೊಟ್ಟಿಲ್ಲ.

ಬೆಂಗಳೂರು ವಿಮಾನ ನಿಲ್ದಾಣಕ್ಕೆ ‘ನಾಡಪ್ರಭು ಕೆಂಪೇಗೌಡ’ ಹೆಸರು, ರೈಲು ನಿಲ್ದಾಣಕ್ಕೆ ‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಹೆಸರನ್ನು ಹಿಂದೆಯೇ ನಾಮಕರಣ ಮಾಡಲಾಗಿದೆ. ಆದರೆ, ಚನ್ನಮ್ಮನಿಗೆ ಅಂತರರಾಷ್ಟ್ರೀಯ ಹೆಗ್ಗುರುತು ನೀಡುವ ಉದ್ದೇಶದಿಂದ ವಿಮಾನ ನಿಲ್ದಾಣ ಮರುನಾಮಕರಣ ಮಾಡಬೇಕು ಎಂಬುದು ಕಿತ್ತೂರು ಕರ್ನಾಟಕ ಭಾಗದ ಜನರ ಅಂಬೋಣ.

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೆಸರು ಇಡಲು ತುರ್ತಾಗಿ ನಿರ್ಧಾರ ಮಾಡಲಾಯಿತು. ಮೈಸೂರಿನ ರೈಲಿಗೆ ಟಿಪ್ಪು ಸುಲ್ತಾನ್‌ ಹೆಸರು ಬದಲಿಸಿ ಒಡೆಯರ ಹೆಸರಿಡುವುದಕ್ಕೂ ತಡ ಮಾಡಲಿಲ್ಲ. ಇಂಥದ್ದೇ ಅವಸರವನ್ನು ಚನ್ನಮ್ಮಾಜಿ ವಿಚಾರದಲ್ಲಿ ಕೈಗೊಳ್ಳುತ್ತಿಲ್ಲ ಏಕೆ ಎಂಬುದು ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಅವರ ಪ್ರಶ್ನೆ.

ADVERTISEMENT

ಇತಿಹಾಸ ತಜ್ಞರು, ಕನ್ನಡಪರ ಸಂಘಟನೆಗಳ ಮುಖಂಡರು ಒಂದೂವರೆ ದಶಕದಿಂದ ಇದಕ್ಕಾಗಿ ಸಾಕಷ್ಟು ಹೋರಾಟ ಮಾಡಿದ್ದಾರೆ. ಪ್ರತಿ ಬಾರಿಯ ಕಿತ್ತೂರು ಉತ್ಸವದಲ್ಲೂ ಬೊಗಸೆ ತುಂಬ ಭರವಸೆ ಮಾತ್ರ ಸಿಗುತ್ತಿದೆ. ಇದೀಗ ರಾಜ್ಯ ಸರ್ಕಾರ ವಿಜಯಪುರ ವಿಮಾನ ನಿಲ್ದಾಣದ ಹೆಸರು ಬದಲಿಸಿದ್ದಕ್ಕೆ ಹೋರಾಟಗಾರರು ಹರ್ಷ ವ್ಯಕ್ತಪಡಿಸಿದ್ದಾರೆ. ಆದರೆ, ಬೆಳಗಾವಿ ವಿಮಾನ ನಿಲ್ದಾಣದ ಮಾತೇ ಎತ್ತದ ಕಾರಣಕ್ಕೆ ತೀವ್ರ ಬೇಸರ ಹೊರಹಾಕುವಂತಾಗಿದೆ.

‘ಮುಖ್ಯಮಂತ್ರಿ ಅವರು ಕಿತ್ತೂರು ಉತ್ಸವ ಮುಗಿಯುವ ಮುನ್ನವೇ, ತುರ್ತಾಗಿ ಸಚಿವ ಸಂಪುಟ ಸಭೆ ಕರೆದು ಬೆಳಗಾವಿ ವಿಮಾನ ನಿಲ್ದಾಣಕ್ಕೆ ರಾಣಿ ಚನ್ನಮ್ಮಾಜಿ ಹೆಸರನ್ನು ಇಡುವ ತೀರ್ಮಾನ ತೆಗೆದುಕೊಳ್ಳಬೇಕು. ಇದಕ್ಕಾಗಿ 2007ರಿಂದ ಹೋರಾಟ ನಡೆಸಿದ್ದೇವೆ. ಜನರ ಭಾವನೆಗೆ ಸ್ಪಂದಿಸಬೇಕು’ ಎಂದು ಕನ್ನಡ ಹೋರಾಟಗಾರ ಶ್ರೀನಿವಾಸ್ ತಾಳೂಕರ್ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.