ADVERTISEMENT

ಬೆಳಗಾವಿ– ಬೆಂಗಳೂರು ರೈಲು; ಈಡೇರಿದ ಬಹುದಿನಗಳ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2019, 19:45 IST
Last Updated 29 ಜೂನ್ 2019, 19:45 IST
ಬೆಳಗಾವಿಯಲ್ಲಿ ಶನಿವಾರ ಸಂಜೆ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಸಿರು ನಿಶಾನೆ ತೋರಿದರು
ಬೆಳಗಾವಿಯಲ್ಲಿ ಶನಿವಾರ ಸಂಜೆ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿಗೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹಸಿರು ನಿಶಾನೆ ತೋರಿದರು   

ಬೆಳಗಾವಿ: ಬೆಳಗಾವಿ– ಬೆಂಗಳೂರು ಸೂಪರ್‌ಫಾಸ್ಟ್‌ ರೈಲಿಗೆ ಶನಿವಾರ ಸಂಜೆ ಹಸಿರು ನಿಶಾನೆ ತೋರಿಸುವ ಮೂಲಕ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ, ಈ ಭಾಗದ ಜನರು ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದರು.

ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ನಡೆದ ಪ್ರಾರಂಭೋತ್ಸವದಲ್ಲಿ ಮಾತನಾಡಿದ ಅವರು, ‘ಬೆಂಗಳೂರಿಗೆ ತೆರಳಲು ಇಲ್ಲಿನ ಜನರಿಗೆ ಹೆಚ್ಚಿನ ರೈಲುಗಳ ಅನುಕೂಲವಿರಲಿಲ್ಲ. ಮಿರಜ್‌– ಬೆಂಗಳೂರು ರೈಲು ಸಾಕಾಗುತ್ತಿರಲಿಲ್ಲ. ಅಲ್ಲದೇ, ಈ ರೈಲ್ವೆಯ ಸಮಯ ಕೂಡ ಇಲ್ಲಿನ ಜನರಿಗೆ ಅನುಕೂಲಕರವಾಗಿರಲಿಲ್ಲ. ಹೀಗಾಗಿ ಹೊಸ ರೈಲನ್ನೇ ಆರಂಭಿಸಿದ್ದೇವೆ. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಕೋರಿದರು.

‘ಹೊಸ ಹೊಸ ರೈಲ್ವೆ ಯೋಜನೆಗಳನ್ನು ಕೈಗೊಳ್ಳಲು ಹಣದ ಕೊರತೆ ಇಲ್ಲ. ಜನರ ಬಹುದಿನಗಳ ಬೇಡಿಕೆಯ ಯೋಜನೆಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುತ್ತಿದೆ. ರೈಲ್ವೆ, ವಿಮಾನ, ರಸ್ತೆ ಸಂಪರ್ಕ ಚೆನ್ನಾಗಿ ಇದ್ದಷ್ಟು ಇಲ್ಲಿನ ಉದ್ಯಮಗಳು ಬೆಳೆಯಲು ಅನುಕೂಲ. ಈ ಅವಕಾಶವನ್ನು ಸ್ಥಳೀಯ ಯುವಕರು ಬಳಸಿಕೊಳ್ಳಬೇಕು’ ಎಂದರು.

ADVERTISEMENT

ಒಗ್ಗಟ್ಟಾಗಿರಲು ಸಲಹೆ:‘ಬೆಳಗಾವಿ ಜಿಲ್ಲೆಯಲ್ಲಿರುವ ಎಲ್ಲ 18 ಶಾಸಕರು ಒಗ್ಗಟ್ಟಾಗಿದ್ದರೆ ಎಂತಹ ಯೋಜನೆಗಳನ್ನಾದರೂ ತರಬಹುದು. ಆದರೆ, ದುರಾದೃಷ್ಟವಶಾತ್‌ ಇವರ‍್ಯಾರೂ ಒಗ್ಗಟ್ಟಾಗಲ್ಲ’ ಎಂದು ನೊಂದು ನುಡಿದರು.

‘ಇಲ್ಲಿ ನಿರ್ಮಿಸಲಾಗಿರುವ ಸುವರ್ಣ ವಿಧಾನಸೌಧವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಒಂದು ತಿಂಗಳವರೆಗೆ ಅಧಿವೇಶನ ನಡೆಸುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಿ’ ಎಂದು ಒತ್ತಾಯಿಸಿದರು.

ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಮಾತನಾಡಿ, ‘ಜಿಲ್ಲೆಯಲ್ಲಿ 24 ಸಕ್ಕರೆ ಕಾರ್ಖಾನೆಗಳಿವೆ. ಇಲ್ಲಿನ ಸಕ್ಕರೆಯನ್ನು ಹೊರರಾಜ್ಯಗಳಿಗೆ ಪೂರೈಸಲು ರೈಲಿನ ಸಂಪರ್ಕ ಬೇಕು. ಬೆಳಗಾವಿಯಿಂದ ಪುಣೆಯವರೆಗೆ ಪುಷ್‌ಪುಲ್‌ ರೈಲು ಆರಂಭಿಸಬೇಕು’ ಎಂದು ಕೋರಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮಾತನಾಡಿ, ‘ಹೊಸ ರೈಲಿಗೆ ಬೆಳವಡಿ ಮಲ್ಲಮ್ಮ ಹೆಸರು ನಾಮಕರಣ ಮಾಡಬೇಕು’ ಎಂದು ಕೋರಿದರು.

ಶಾಸಕ ಅಭಯ ಪಾಟೀಲ ಮಾತನಾಡಿ, ‘ಸುರೇಶ ಅಂಗಡಿಯವರ ಪ್ರಯತ್ನದಿಂದಾಗಿ ಉಡಾನ್‌ ಯೋಜನೆಯಡಿ ಬೆಳಗಾವಿಯಿಂದ 10ಕ್ಕೂ ಹೆಚ್ಚು ವಿಮಾನಗಳು ಹಾರಾಟ ನಡೆಸಿವೆ. ವಿಮಾನ ಸಂಪರ್ಕ, ರೈಲು ಸಂಪರ್ಕ ಹೆಚ್ಚಾಗಿ ಇದ್ದಷ್ಟು ಉದ್ಯಮಗಳು ಬೆಳೆಯಲು ಸಾಧ್ಯ’ ಎಂದು ಹೇಳಿದರು.

ಶಾಸಕ ಆನಂದ ಮಾಮನಿ ಮಾತನಾಡಿ, ‘ಧಾರ್ಮಿಕ ಸ್ಥಳ ಯಲ್ಲಮ್ಮನಗುಡ್ಡಕ್ಕೆ ಹೊರರಾಜ್ಯಗಳಿಂದಲೂ ಭಕ್ತರು ಆಗಮಿಸುತ್ತಾರೆ. ಇವರ ಅನುಕೂಲಕ್ಕಾಗಿ ಸವದತ್ತಿಗೆ ರೈಲು ಮಾರ್ಗ ನಿರ್ಮಿಸಬೇಕು. ಘಟಪ್ರಭಾ– ಸವದತ್ತಿ– ಧಾರವಾಡ ಮಾರ್ಗವಾಗಿ ರೈಲುಗಳನ್ನು ಓಡಿಸಬೇಕು. ಬೆಂಗಳೂರಿಗೆ ಆರಂಭವಾಗಿರುವ ಹೊಸ ರೈಲಿಗೆ ಶ್ರೀ ರೇಣುಕಾ ಯಲ್ಲಮ್ಮ ಎಕ್ಸ್‌ಪ್ರೆಸ್‌ ಹೆಸರು ನಾಮಕರಣ ಮಾಡಬೇಕು’ ಎಂದು ಕೋರಿದರು.

‘ಮೈಸೂರು– ಧಾರವಾಡ ರೈಲು ಮಿರಜ್‌ವರೆಗೆ ವಿಸ್ತರಿಸಲು ಚಿಂತನೆ’
ಬೆಳಗಾವಿ:
‘ಮೈಸೂರು– ಧಾರವಾಡ ರೈಲನ್ನು ಬೆಳಗಾವಿ ಮಾರ್ಗವಾಗಿ ಮಹಾರಾಷ್ಟ್ರದ ಮಿರಜ್‌ವರೆಗೆ ವಿಸ್ತರಿಸಲು ಚಿಂತನೆ ನಡೆದಿದೆ’ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ನಗರದಲ್ಲಿ ಶನಿವಾರ ಸಂಜೆ ಬೆಳಗಾವಿ– ಬೆಂಗಳೂರು ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲಿಗೆ ಚಾಲನೆ ನೀಡುವ ವೇಳೆ ಅವರು ಮಾತನಾಡಿದರು.

‘ಬೆಳಗಾವಿಯಿಂದ ಪುಣೆಯವರೆಗೆ ಪುಷ್‌ಪುಲ್‌ ರೈಲು ಆರಂಭಿಸಲು ಹಾಗೂ ಬೆಳಗಾವಿಯಿಂದ ಗೋವಾದ ವಾಸ್ಕೋವರೆಗೆ ಹೊಸ ರೈಲು ಆರಂಭಿಸುವಂತೆ ಸಾಕಷ್ಟು ಬೇಡಿಕೆ ಇದೆ. ಇದರ ಬಗ್ಗೆಯೂ ಚಿಂತನೆ ಮಾಡುತ್ತಿದ್ದೇವೆ’ ಎಂದು ನುಡಿದರು.

‘ಬೆಳಗಾವಿ– ಬೆಂಗಳೂರು ನೂತನ ರೈಲಿಗೆ ಬೆಳವಡಿ ಮಲ್ಲಮ್ಮ ಅಥವಾ ಶ್ರೀ ರೇಣುಕಾ ಯಲ್ಲಮ್ಮ ಎಕ್ಸ್‌ಪ್ರೆಸ್‌ ಹೆಸರು ಇಡಬೇಕೆಂದು ಕೆಲವರು ಸಲಹೆ ನೀಡಿದ್ದಾರೆ. ರಾಜ್ಯ ಸರ್ಕಾರ ಯಾವ ಹೆಸರನ್ನು ಆಯ್ಕೆ ಮಾಡಿ, ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡುತ್ತದೆಯೋ ಅದನ್ನು ಅಂತಿಮಗೊಳಿಸುತ್ತೇವೆ’ ಎಂದು ತಿಳಿಸಿದರು.

ಪ್ರಯಾಣ ದರ: ಬೆಳಗಾವಿ– ಬೆಂಗಳೂರು ರೈಲು ದರ– 2 ಎಸಿ ₹ 1,755, 3 ಎಸಿ– ₹ 1,235 ಸ್ಲೀಪರ್‌– ₹ 465. ಈ ರೈಲು ಧಾರವಾಡ, ಹುಬ್ಬಳ್ಳಿ, ದಾವಣಗೆರೆ, ಅರಸಿಕೆರೆ, ತುಮಕೂರು ಹಾಗೂ ಯಶವಂತಪುರದಲ್ಲಿ ನಿಲುಗಡೆ ಹೊಂದಿದೆ. ಬೆಳಗಾವಿಯಿಂದ ಬೆಂಗಳೂರು ನಡುವಿನ 610 ಕಿ.ಮೀ ದೂರವನ್ನು 10 ಗಂಟೆಗಳಲ್ಲಿ ಕ್ರಮಿಸಲಿದೆ.

ಇದೇ ವೇಳೆಶಾಸಕರಾದ ಅನಿಲ ಬೆನಕೆ, ದುರ್ಯೋಧನ ಐಹೊಳೆ ಮಾತನಾಡಿದರು. ನೈರುತ್ಯ ರೈಲ್ವೆ ವಿಭಾಗದ ಪ್ರಧಾನ ವ್ಯವಸ್ಥಾಪಕ ಅಜಯಕುಮಾರ್‌ ಸಿಂಗ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.