ADVERTISEMENT

ಬೆಳಗಾವಿ: ಮರಾಠಿ ಬಾರದು ಎಂದಿದ್ದಕ್ಕೆ ನಿರ್ವಾಹಕನ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 12:40 IST
Last Updated 21 ಫೆಬ್ರುವರಿ 2025, 12:40 IST
   

ಬೆಳಗಾವಿ: ಮರಾಠಿ ಮಾತನಾಡಲು ಬರುವುದಿಲ್ಲ ಎಂದು ಹೇಳಿದ್ದಕ್ಕೆ ಬಸ್‌ ನಿರ್ವಾಹಕ ಹಾಗೂ ಚಾಲಕರ ಮೇಲೆ ಯುವಕರ ಗುಂಪು ಹಲ್ಲೆ ಮಾಡಿದ ಘಟನೆ ತಾಲ್ಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

ಗಾಯಗೊಂಡ ನಿರ್ವಾಹಕ ಮಹಾದೇವ ಹುಕ್ಕೇರಿ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಾಧ್ಯಮಗಳ ಮುಂದೆ ಘಟನಾವಳಿ ವಿವರಿಸಿದ ಮಹಾದೇವ ಅವರು ನೋವಿನಿಂದ ಕಣ್ಣೀರು ಹಾಕಿದರು.

‘ಬೆಳಗಾವಿ ನಗರ ಸಾರಿಗೆ ಬಸ್‌ ನಿಲ್ದಾಣದಿಂದ ಒಬ್ಬ ಯುವಕ ಹಾಗೂ ಯುವತಿ ಜತೆಯಾಗಿ ಬಸ್‌ ಹತ್ತಿದರು. ನಾನು ಟಿಕೆಟ್‌ ಪಡೆಯಿರಿ ಎಂದು ಕನ್ನಡದಲ್ಲಿ ಕೇಳಿದೆ. ಯುವತಿ ಆಧಾರ್‌ ಕಾರ್ಡ್‌ ತೋರಿಸಿ ಎರಡು ಟಿಕೆಟ್‌ ಕೇಳಿದರು. ನಿಮಗೆ ಮಾತ್ರ ಉಚಿತ ಟಿಕೆಟ್‌ ನೀಡಲಾಗುವುದು, ಯುವಕ ದುಡ್ಡು ಕೊಟ್ಟು ಟಿಕೆಟ್‌ ಪಡೆಯಬೇಕು ಎಂದು ನಾನು ಒತ್ತಾಯಿಸಿದೆ. ಇದರಿಂದ ಸಿಟ್ಟಿಗೆದ್ದ ಯುವಕ– ಯುವತಿ ಮರಾಠಿಯಲ್ಲಿ ಬೈಯ್ಯಲು ಶುರು ಮಾಡಿದರು. ಕನ್ನಡ ಏಕೆ ಬೊಗಳುತ್ತೀ, ಮರಾಠಿ ಕಲಿತುಕೋ ಎಂದು ಬೆದರಿಕೆ ಹಾಕಿದರು’ ಎಂದು ಮಹಾದೇವ ತಿಳಿಸಿದ್ದಾರೆ.

ADVERTISEMENT

‘ನಮ್ಮೂರು ತಲುಪಿದಾಗ ನಿನ್ನನ್ನು ನೋಡಿಕೊಳ್ಳುತ್ತೇನೆ’ ಎಂದು ಮರಾಠಿಯಲ್ಲಿ ಬೆದರಿಕೆ ಹಾಕಿದ ಯುವಕ, ಹಲವರಿಗೆ ಫೋನ್‌ ಮಾಡಿ ಕರೆಸಿದ. ಬಸ್‌ ಸಣ್ಣಬಾಳೇಕುಂದ್ರಿ ಗ್ರಾಮಕ್ಕೆ ಬಂದಾಗ ನೂರಾರು ಜನ ಬಸ್ಸಿಗೆ ಮುತ್ತಿಗೆ ಹಾಕಿದರು. 20ಕ್ಕೂ ಹೆಚ್ಚು ಯುವಕರು ಬಸ್ಸಿನೊಳಗೆ ಹತ್ತಿ ಏಕಾಏಕಿ ಹೊಡೆಯಲು ಶುರು ಮಾಡಿದರು. ನನ್ನ ತಲೆ, ಬೆನ್ನು, ಕಿಬ್ಬೊಟ್ಟೆ, ಭುಜಕ್ಕೆ ಹೊಡೆದರು. ಕಾಲಿನಿಂದ ಒದ್ದರು. ಬಸ್‌ ಚಾಲಕರಿಗೂ ಕಪಾಳು ಹಾಗೂ ಹೊಟ್ಟೆಗೆ ಜೋರಾಗಿ ಹೊಡೆದರು. ಹೆದರಿ ಅಲ್ಲಿಂದ ಪಾರಾಗಿ ಬಂದೆವು’ ಎಂದೂ ವಿವರಿಸಿದರು.

‘ಮಾರಿಹಾಳ ಠಾಣೆಗೆ ದೂರು ದಾಖಲಿಸಲು ಹೋದರೆ ಪೊಲೀಸರು ರಾಜೀ ಸಂಧಾನಕ್ಕೆ ಯತ್ನಿಸಿದರು’ ಎಂದು ಚಾಲಕ ಆರೋಪಿಸಿದರು.

ಡಿಸಿಪಿ ರೋಹನ್‌ ಜಗದೀಶ್‌ ಆಸ್ಪತ್ರೆಗೆ ಭೇಟಿ ನೀಡಿ ಚಾಲಕ ಹಾಗೂ ನಿರ್ವಾಹಕರಿಂದ ಮಾಹಿತಿ ಸಂಗ್ರಹಿಸಿದರು. 'ಹಲ್ಲೆ ಮಾಡಿದವರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಜರುಗಿಸಲಾಗುವುದು. ಪೊಲೀಸರು ರಾಜೀ ಸಂಧಾನಕ್ಕೆ ಯತ್ನಿಸಿದ ಆರೋಪದ ಬಗ್ಗೆಯೂ ಪರಿಶೀಲಿಸಲಾಗುವುದು" ಎಂದರು.

‘ಬೆಳಗಾವಿಯಲ್ಲಿ ಕನ್ನಡಿಗರಗೇ ರಕ್ಷಣೆ ಇಲ್ಲ. ಮರಾಠಿ ಮಾತನಾಡದ್ದಕ್ಕೆ ಸರ್ಕಾರಿ ನೌಕರರ ಮೇಲೆ ಹಲ್ಲೆ ಮಾಡಲಾಗಿದೆ. ನಾವು ಸುಮ್ಮನೇ ಕುಳಿತುಕೊಳ್ಳುವುದಿಲ್ಲ’ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್‌ ಗುಡಗನಟ್ಟಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.