ಬೆಳಗಾವಿ: ‘2025ರ ಡಿಸೆಂಬರ್ 31ರೊಳಗೆ ರಾಜ್ಯ ಸರ್ಕಾರವು ಬೆಳಗಾವಿ ಜಿಲ್ಲೆ ವಿಭಜನೆ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬೇಕು’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯಿಸಿದರು.
ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜನಗಣತಿ ಸಂಬಂಧ ಕೇಂದ್ರವು ಎಲ್ಲ ರಾಜ್ಯ ಸರ್ಕಾರಗಳಿಗೆ ಇತ್ತೀಚೆಗೆ ಸುತ್ತೋಲೆ ಹೊರಡಿಸಿ, ಆಡಳಿತಾತ್ಮಕ ಪ್ರದೇಶಗಳ ಗಡಿಗಳಲ್ಲಿ ಬದಲಾವಣೆ ಪ್ರಸ್ತಾವಗಳಿದ್ದರೆ 2025ರ ಡಿಸೆಂಬರ್ 31ರೊಳಗೆ ಪೂರ್ಣಗೊಳಿಸುವಂತೆ ಸೂಚಿಸಿದೆ. ಜನಗಣತಿಗಾಗಿ ಮನೆಗಳ ಪಟ್ಟಿ ಮಾಡುವ ಕಾರ್ಯಾಚರಣೆ 2026ರ ಏ.1ರಿಂದ ಆರಂಭವಾಗಲಿದೆ. ಗಣತಿ ಮುಗಿಯಲು ಎರಡು ವರ್ಷ ಬೇಕಾಗುತ್ತದೆ. ಗಣತಿ ಆರಂಭವಾದರೆ, ಜಿಲ್ಲಾ ವಿಭಜನೆ ಪ್ರಕ್ರಿಯೆ ನನೆಗುದಿಗೆ ಬೀಳುತ್ತದೆ. ಹಾಗಾಗಿ ಈ ವರ್ಷಾಂತ್ಯದೊಳಗೆ ವಿಭಜನೆಗೆ ಕ್ರಮ ವಹಿಸಬೇಕು’ ಎಂದು ಒತ್ತಾಯಿಸಿದರು.
‘ಕಳೆದ ಮೂರು ದಶಕಗಳಿಂದ ಬೆಳಗಾವಿ ಜಿಲ್ಲಾ ವಿಭಜನೆ ಪ್ರಕ್ರಿಯೆ ನನೆಗುದಿಗೆ ಬಿದ್ದಿದೆ. ಬೆಳಗಾವಿ ಜಿಲ್ಲೆ ವಿಭಜಿಸುತ್ತೇವೆ ಎಂದು ಹೇಳುತ್ತ, ರಾಜ್ಯ ಸರ್ಕಾರಗಳು ಜನರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿವೆ. ಜಿಲ್ಲೆ ವಿಭಜಿಸುವ ಕುರಿತು ಈ ಹಿಂದೆ ವಿವಿಧ ಆಯೋಗಗಳು ಸರ್ಕಾರಕ್ಕೆ ವರದಿ ಕೊಟ್ಟಿವೆ. ಆದರೆ, ಕೆಲವರ ಹಿತಾಸಕ್ತಿಯಿಂದ ಇಂದಿಗೂ ಬೇಡಿಕೆ ಈಡೇರಿಲ್ಲ’ ಎಂದು ದೂರಿದರು.
‘ಬೆಳಗಾವಿ ಜಿಲ್ಲೆ ವಿಭಜಿಸಲು ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಅವರೂ ಉತ್ಸುಕರಿದ್ದಾರೆ. ಹಾಗಾಗಿ ಬೆಳಗಾವಿ ವಿಭಜಿಸಿ, ಪ್ರತ್ಯೇಕ ಜಿಲ್ಲೆ ರಚನೆಗೆ ಸರ್ಕಾರ ನಾಂದಿ ಹಾಡಬೇಕು’ ಎಂದು ಒತ್ತಾಯಿಸಿದರು.
‘ಭೌಗೋಳಿಕವಾಗಿ ದೊಡ್ಡದಾಗಿರುವ ಬೆಳಗಾವಿ ಜಿಲ್ಲೆ ಆಡಳಿತಾತ್ಮಕ ದೃಷ್ಟಿಯಿಂದ ನಲುಗಿ ಹೋಗುತ್ತಿದೆ. ಹಿರಿಯ ಅಧಿಕಾರಿಗಳಿಗೆ ಕರ್ತವ್ಯ ನಿರ್ವಹಣೆಗೆ ಕಷ್ಟವಾಗುತ್ತಿದೆ. ಸರ್ಕಾರಿ ಅನುದಾನವೂ ಸರಿಯಾಗಿ ಬಳಕೆಯಾಗದೆ, ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ’ ಎಂದು ಆರೋಪಿಸಿದರು.
‘ಬೆಳಗಾವಿ ವಿಭಜಿಸಿ, ಯಾವ ಜಿಲ್ಲೆಗಳನ್ನು ರಚಿಸಬೇಕು’ ಎಂಬ ಪ್ರಶ್ನೆಗೆ, ‘ವಿವಿಧ ಆಯೋಗಗಳು ನೀಡಿದ ವರದಿ ಅನುಸಾರವಾಗಿ, ಪ್ರತ್ಯೇಕ ಜಿಲ್ಲೆಗಳನ್ನು ರಚಿಸುವುದು ಸೂಕ್ತ’ ಎಂದು ತಿಳಿಸಿದರು.
‘ಬೈಲಹೊಂಗಲ ಪ್ರತ್ಯೇಕ ಜಿಲ್ಲೆ ರಚಿಸಬೇಕು’ ಎಂದು ಆಗ್ರಹ ಕೇಳಿಬರುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಕಡಾಡಿ, ‘ಎಲ್ಲರಿಗೂ ಪ್ರತ್ಯೇಕ ಜಿಲ್ಲೆ ಕೇಳುವ ಹಕ್ಕಿದೆ. ಆದರೆ, ಮತ್ತೊಂದು ಪ್ರತ್ಯೇಕ ಜಿಲ್ಲೆ ರಚನೆಗೆ ಅವರು ವಿರೋಧಿಸಬಾರದು’ ಎಂದರು.
‘ಬೆಳಗಾವಿ ಜಿಲ್ಲೆ ವಿಭಜನೆಯಿಂದ ಕರ್ನಾಟಕ–ಮಹಾರಾಷ್ಟ್ರ ಗಡಿ ವಿವಾದಕ್ಕೆ ಹಿನ್ನಡೆಯಾಗುವುದಿಲ್ಲವೇ’ ಎಂಬ ಪ್ರಶ್ನೆಗೆ, ‘ಗಡಿ ವಿವಾದ ಈಗ ಮುಗಿದ ಅಧ್ಯಾಯ. ಜಿಲ್ಲಾ ವಿಭಜನೆಯಿಂದ ಗಡಿ ವಿವಾದಕ್ಕೇನೂ ತೊಂದರೆಯಾಗದು. ಗಡಿ ವಿವಾದವೇ ಬೇರೆ, ಆಡಳಿತಾತ್ಮಕ ವಿಷಯವೇ ಬೇರೆ’ ಎಂದು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.