ADVERTISEMENT

ಬೆಳಗಾವಿ | ಬದುಕಿದ ರೈತನಿಗೆ ಮರಣ ದೃಢೀಕರಣ: ನಾಲ್ವರು ಅಧಿಕಾರಿಗಳ ಮೇಲೆ ಕೇಸ್‌

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 18:01 IST
Last Updated 13 ಜನವರಿ 2026, 18:01 IST
ಸವದತ್ತಿ ತಾಲ್ಲೂಕಿನ ಸುತಗಟ್ಟಿ ಗ್ರಾಮದ ರೈತ ಈರಪ್ಪ ನಾಗಪ್ಪ ಅಬ್ಬಾಯಿ ಆಧಾರ್‌ ಕಾರ್ಡ್‌
ಸವದತ್ತಿ ತಾಲ್ಲೂಕಿನ ಸುತಗಟ್ಟಿ ಗ್ರಾಮದ ರೈತ ಈರಪ್ಪ ನಾಗಪ್ಪ ಅಬ್ಬಾಯಿ ಆಧಾರ್‌ ಕಾರ್ಡ್‌   

ಬೆಳಗಾವಿ: ರೈತ ಬದುಕಿದ್ದಾಗಲೇ ಸತ್ತಿರುವುದಾಗಿ ಎಂದು ದಾಖಲೆ ಸೃಷ್ಟಿಸಿ, ದೃಢೀಕರಿಸಿದ ಆರೋಪದಡಿ ನಾಲ್ವರು ಅಧಿಕಾರಿಗಳ ವಿರುದ್ಧ ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಜಿಲ್ಲೆಯ ಸವದತ್ತಿ ತಾಲ್ಲೂಕಿನ ಸುತಗಟ್ಟಿ ಗ್ರಾಮದ ರೈತ ಈರಪ್ಪ ನಾಗಪ್ಪ ಅಬ್ಬಾಯಿ ಎಂಬುವರು ಇನ್ನೂ ಬದುಕಿದ್ದಾರೆ. ಆದರೆ, 2021ರಲ್ಲೇ ಅವರು ಸತ್ತಿದ್ದಾರೆ ಎಂದು ಅವರ ದಾಖಲೆಗಳಲ್ಲಿ ದೃಢೀಕರಿಸಲಾಗಿದೆ. ಕಳೆದ ಐದು ವರ್ಷಗಳಿಂದ ರೈತನಿಗೆ ಈ ವಿಷಯ ಗೊತ್ತಿಲ್ಲದೇ ಸರ್ಕಾರಿ ಯೋಜನೆಗಳಿಂದ ವಂಚಿತರಾಗಿದ್ದಾರೆ.

ಈ ಬಗ್ಗೆ ‘ಪ್ರಜಾವಾಣಿ’ಯ ಬುಧವಾರದ ಸಂಚಿಕೆಯಲ್ಲಿ ‘ದಾಖಲೆಯಲ್ಲೂ ‘ಬದುಕಲು’ ರೈತನ ಹೋರಾಟ’ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು. ಇದನ್ನು ಆಧರಿಸಿ ದೂರು ದಾಖಲಿಸಿಕೊಂಡಿರುವುದಾಗಿ ಉಪ ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ಲೋಪ ಎಸಗಿದ ಸುತಗಟ್ಟಿ ಗ್ರಾಮ ಆಡಳಿತಾಧಿಕಾರಿ ನೀಲಾ ಮುರಗೋಡ, ಮುರಗೋಡ ವೃತ್ತದ ಕಂದಾಯ ನಿರೀಕ್ಷಕ ಆರ್‌.ಎಸ್‌.ಪಾಟೀಲ, ಸವದತ್ತಿ ತಹಶೀಲ್ದಾರ ಮಲ್ಲಿಕಾರ್ಜುನ ಹೆಗ್ಗನ್ನವರ, ಬೈಲಹೊಂಗಲ ಉಪವಿಭಾಗಾಧಿಕಾರಿ ಪ್ರವೀಣ ಜೈನ್‌ ಅವರ ಮೇಲೆ ದೂರು ದಾಖಲಿಸಿಕೊಂಡು, ವಿಚಾರಣೆ ಮುಂದುವರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.