
ಬೈಲಹೊಂಗಲದಲ್ಲಿ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಸರ್ಕಾರಿ ಉರ್ದು ಪ್ರಾಥಮಿಕ ಶಾಲೆ
ಪ್ರಜಾವಾಣಿ ಚಿತ್ರ: ರವಿಕುಮಾರ ಹುಲಕುಂದ
ಬೆಳಗಾವಿ: ಜಾಗದ ಅಲಭ್ಯತೆ, ಅನುದಾನ ಕೊರತೆಯಿಂದಾಗಿ ಜಿಲ್ಲೆಯಲ್ಲಿ 37 ಸರ್ಕಾರಿ ಶಾಲೆಗಳಿಗೆ ಇಂದಿಗೂ ಸ್ವಂತ ಕಟ್ಟಡ ಹೊಂದಲು ಸಾಧ್ಯವಾಗಿಲ್ಲ. ಈ ಪೈಕಿ 17 ಶಾಲೆಗಳಿಗೆ ಬಾಡಿಗೆ ಕಟ್ಟಡಗಳೇ ಆಸರೆಯಾಗಿದ್ದರೆ, 20 ಶಾಲೆ ಬಾಡಿಗೆ ರಹಿತ ಕಟ್ಟಡಗಳಲ್ಲಿ ನಡೆಯುತ್ತಿವೆ.
ಗ್ರಾಮೀಣ ಭಾಗಕ್ಕೆ ಹೋಲಿಸಿದರೆ, ನಗರ–ಪಟ್ಟಣಗಳಲ್ಲಿ ಇರುವ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೇ ಹೆಚ್ಚಾಗಿ ಸ್ವಂತ ಕಟ್ಟಡಕ್ಕಾಗಿ ಜಾಗ ಸಿಗದ ಪರಿಸ್ಥಿತಿ ಇದೆ. ಅಲ್ಲಿ ಮೂಲಸೌಕರ್ಯ ಅಭಾವ ಹೆಚ್ಚಿದ್ದು, ಮಕ್ಕಳ ಕಲಿಕೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.
ಕೆಲವೆಡೆ ಸ್ವಂತ ಕಟ್ಟಡ ಹೊಂದಿರದ ಶಾಲೆಗಳನ್ನು ಸಮೀಪದ ಶಾಲೆಗಳಲ್ಲಿ ವಿಲೀನಗೊಳಿಸಲಾಗಿದೆ. ಮಕ್ಕಳ ದಾಖಲಾತಿ ಪ್ರಮಾಣ ಹೆಚ್ಚಿದ್ದರೂ, ಸ್ವಂತ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಆಸಕ್ತಿ ತಳೆಯುತ್ತಿಲ್ಲ. ಹಾಗಾಗಿ ಪಾಲಕರು ತಮ್ಮ ಮಕ್ಕಳನ್ನು ಅಲ್ಲಿಂದ ಬಿಡಿಸಿ, ಬೇರೆ ಶಾಲೆಗೆ ಸೇರಿಸುತ್ತಿದ್ದಾರೆ. ಇದರಿಂದ ದಾಖಲಾತಿ ಪ್ರಮಾಣ ಕುಸಿಯುತ್ತಿದೆ ಎಂದು ಅಲ್ಲಿ ಕೆಲಸ ಮಾಡುವ ಶಿಕ್ಷಕರೇ ಹೇಳುತ್ತಾರೆ.
ಎಲ್ಲೆಲ್ಲಿ ಸಮಸ್ಯೆ?: ಏಳು ಶೈಕ್ಷಣಿಕ ವಲಯ ಒಳಗೊಂಡ ಬೆಳಗಾವಿ ಶೈಕ್ಷಣಿಕ ಜಿಲ್ಲೆಯಲ್ಲಿ 32 ಶಾಲೆಗಳಿಗೆ ಸ್ವಂತ ಕಟ್ಟಡವಿಲ್ಲ. ಈ ಪೈಕಿ 20 ಶಾಲೆಗಳು ಬಾಡಿಗೆ ಇಲ್ಲದ ಕಟ್ಟಡಗಳಲ್ಲಿ(ಸರ್ಕಾರಿ ಕಟ್ಟಡಗಳಲ್ಲಿ) ನಡೆಯುತ್ತಿದ್ದರೆ, 12 ಶಾಲೆ ಬಾಡಿಗೆ ಕಟ್ಟಡಗಳಲ್ಲಿ ಇವೆ.
ಈ ಪೈಕಿ ಬೆಳಗಾವಿ ಮಹಾನಗರದಲ್ಲಿ ಎಂಟು, ಬೈಲಹೊಂಗಲ ಪಟ್ಟಣದಲ್ಲಿ ಮೂರು, ಖಾನಾಪುರದಲ್ಲಿ ಒಂದು ಶಾಲೆ ಇದೆ. ಕೆಲ ಶಾಲೆಗಳು ಅಲ್ಪಪ್ರಮಾಣದ ಬಾಡಿಗೆ ಶುಲ್ಕ ಭರಿಸುತ್ತಿದ್ದರೆ, ಇನ್ನೂ ಕೆಲವು ಶಾಲೆ ದುಬಾರಿ ಶುಲ್ಕ ತುಂಬುತ್ತಿವೆ.
ಎಂಟು ಶೈಕ್ಷಣಿಕ ವಲಯ ಒಳಗೊಂಡ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಐದು ಶಾಲೆ ಬಾಡಿಗೆ ಕಟ್ಟಡಗಳಲ್ಲಿವೆ. ಈ ಪೈಕಿ ಗೋಕಾಕ ನಗರದಲ್ಲಿ ಎರಡು, ಗೋಕಾಕ ತಾಲ್ಲೂಕಿನ ಕೊಣ್ಣೂರ, ಚಿಕ್ಕೋಡಿ ತಾಲ್ಲೂಕಿನ ಕರೋಶಿ ಹಾಗೂ ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರದಲ್ಲಿ ತಲಾ ಒಂದು ಶಾಲೆ ಇವೆ.
ಬಾಡಿಗೆ ಕಟ್ಟಡಗಳಲ್ಲಿನ ಶಾಲೆಗಳ ಸ್ವಂತ ಕಟ್ಟಡ ನಿರ್ಮಾಣಕ್ಕಾಗಿ ಪ್ರಯತ್ನ ಮುಂದುವರಿಸಿದ್ದೇವೆ. ಈ ವಿಷಯ ಸರ್ಕಾರದ ಗಮನಕ್ಕೂ ತಂದಿದ್ದೇವೆಲೀಲಾವತಿ ಹಿರೇಮಠ ಡಿಡಿಪಿಐ ಬೆಳಗಾವಿ
ಎಲ್ಲ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಪ್ರಯತ್ನ ಮುಂದುವರಿದಿದೆ. ಬಾಡಿಗೆ ಕಟ್ಟಡಗಳಲ್ಲಿ ಶಾಲೆ ಇದ್ದರೂ ಕಲಿಕಾ ಚಟುವಟಿಕೆಗೇನೂ ಸಮಸ್ಯೆಯಾಗಿಲ್ಲಆರ್.ಎಸ್.ಸೀತಾರಾಮು ಚಿಕ್ಕೋಡಿ ಡಿಡಿಪಿಐ
‘ಹುಡುಕಿದರೂ ಜಾಗ ಸಿಗುತ್ತಿಲ್ಲ’
‘ಬೈಲಹೊಂಗಲದಲ್ಲಿ ಬಾಡಿಗೆ ಕಟ್ಟಡಗಳಲ್ಲಿ ಇರುವ ಶಾಲೆಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ಉದ್ದೇಶದಿಂದ ದಶಕಗಳಿಂದ ಹುಡುಕಾಡಿದರೂ ಸೂಕ್ತ ಜಾಗ ಸಿಗುತ್ತಿಲ್ಲ. ನಮ್ಮ ಬೇಡಿಕೆಗೆ ಪೂರಕ ಜಾಗ ಸಿಗಲ್ಲ. ಸಿಕ್ಕರೂ ಶಾಲೆ ಇರುವ ಪ್ರದೇಶದಲ್ಲಿ ಇರಲ್ಲ. ಪಟ್ಟಣದ ಹೃದಯಭಾಗದಲ್ಲೇ ಇರುವ ಜಾಗ ದುಬಾರಿ ಕೂಡ. ಆದರೆ ಬಾಡಿಗೆ ಕಟ್ಟಡಗಳಲ್ಲಿ ಮಕ್ಕಳ ಕಲಿಕೆಗೆ ಯಾವ ತೊಂದರೆ ಆಗದಂತೆ ಕ್ರಮ ವಹಿಸಿದ್ದೇವೆ’ ಎಂದು ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ಎ.ಎನ್.ಪ್ಯಾಟಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.