ADVERTISEMENT

ಬೆಳಗಾವಿ | ಮರಗಳ ಹನನ: ಒಬ್ಬನ ಬಂಧನ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2026, 7:03 IST
Last Updated 6 ಫೆಬ್ರುವರಿ 2026, 7:03 IST
ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿ ಗ್ರಾಮದ ಬಳಿ ಮರಗಳ ಹನನ ಮಾಡಲಾದ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗೆ ಮುಖಂಡರು ಮಾಹಿತಿ ನೀಡಿದರು
ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿ ಗ್ರಾಮದ ಬಳಿ ಮರಗಳ ಹನನ ಮಾಡಲಾದ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯಾಧಿಕಾರಿಗೆ ಮುಖಂಡರು ಮಾಹಿತಿ ನೀಡಿದರು   

ಬೆಳಗಾವಿ: ತಾಲ್ಲೂಕಿನ ಬಡಾಲ ಅಂಕಲಗಿ ಹೊರವಲಯದಲ್ಲಿ ಸೌರ ಯೋಜನೆ ಆರಂಭಿಸುವ ಸಂಬಂಧ, ಅನುಮತಿ ಇಲ್ಲದೇ ಮರಗಳ ಹನನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಒಬ್ಬ ಆರೋಪಿಯನ್ನು ಗುರುವಾರ ಬಂಧಿಸಿದ್ದಾರೆ. ಆದರೆ, ಆರೋಪಿ ಹೆಸರನ್ನು ಬಹಿರಂಗಪಡಿಸಿಲ್ಲ.

ಬಡಾಲ ಅಂಕಲಗಿ ಗ್ರಾಮದ ವ್ಯಾಪ್ತಿಯಲ್ಲಿರುವ ಕೌರಿಗುಡಾ ರೇಣುಕಾದೇವಿ ದೇವಸ್ಥಾನದ ಆವರಣದ ಸುತ್ತಲಿನ 40 ಎಕರೆ ಪಾಳು ಜಮೀನು ಇದೆ. ಇದರಲ್ಲಿ ಪಿಎಂ–ಕುಸುಮ್‌ ಯೋಜನೆ ಅಡಿ ಸೌರ ವಿದ್ಯುತ್‌ ಉತ್ಪಾದನಾ ಘಟಕ ಸ್ಥಾಪಿಸಲು ಜಿಲ್ಲಾಧಿಕಾರಿ ಕಚೇರಿಯಿಂದ ಅನುಮತಿ ನೀಡಲಾಗಿದೆ. ಘಟಕಕ್ಕೆ ಹೆಸ್ಕಾಂ ಅಧಿಕಾರಿಗಳಿಂದಲೂ ಅನುಮತಿ ಪಡೆಯಲಾಗಿದೆ. ಆದರೆ, ಇಲ್ಲಿರುವ ಮರಗಳನ್ನು ಕಡಿಯಲು ಅರಣ್ಯ ಇಲಾಖೆಯಿಂದ ಅನುಮತಿ ಪಡೆದಿಲ್ಲ.

ಆರೋಪಿಗಳು ಯಾವುದೇ ಹಿಂಜರಿಕೆ ಇಲ್ಲದೇ, ಅನುಮತಿಯೂ ಇಲ್ಲದೇ ಅಪಾರ ಪ್ರಮಾಣದ ಮರಗಳನ್ನು ಹನನ ಮಾಡಿದ್ದಾರೆ. ಇದರಲ್ಲಿ ರಾಜಕೀಯ ವ್ಯಕ್ತಿಗಳ ಕೈವಾಡವೂ ಇದೆ ಎಂದು ರೈತ ಸಂಘದ ಮುಂಖಡರು ಆರೋಪ ಮಾಡಿದ್ದಾರೆ.

ADVERTISEMENT

ಈ ಬಗ್ಗೆ ಪ್ರಕಟಣೆ ನೀಡಿರುವ ಡಿಸಿಎಫ್‌ ಕ್ರಾಂತಿ, ‘ಈ ಕುರಿತು ಈಗಾಗಲೇ ಎಫ್‌ಐಆರ್ ದಾಖಲಿಸಲಾಗಿದೆ. ಎಂಟು ಎಕರೆ ಪ್ರದೇಶದಲ್ಲಿದ್ದ ಸಣ್ಣ ಗಂಧದ ಮರಗಳೂ ಸೇರಿ ಕುರುಚಲು ಗಿಡಗಳನ್ನು ಕತ್ತರಿಸಲಾಗಿದೆ. ಇದಕ್ಕೆ ಯಾವುದೇ ಅನುಮತಿ ಪಡೆದಿಲ್ಲ. ತನಿಖೆ ನಡೆಸಲು ಅಧಿಕಾರಿಗಳಿಗೆ ಆದೇಶಿಸಲಾಗಿದೆ. ಈಗಾಗಲೇ ಒಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘ಪಿಎಂ– ಕುಸುಮ್‌ ಸೌರ ಯೋಜನೆಗೆ ಅನುಮತಿ ನೀಡಿದ ಮೇಲೂ ಜಿಲ್ಲಾಧಿಕಾರಿ, ತಹಶೀಲ್ದಾರ್‌ ಅಥವಾ ಸಂಬಂಧಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಆ ಸ್ಥಳವನ್ನು ಪರಿಶೀಲನೆ ಮಾಡಿಲ್ಲ. ಕಾಡು ಇದ್ದ ಜಾಗದಲ್ಲಿ ಅನುಮತಿ ನೀಡಬಾರದು ಮತ್ತು ಅರಣ್ಯ ಕಡಿಯಬಾರದು ಎಂಬ ನಿಯಮವಿದೆ. ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣ 10 ಸಾವಿರಕ್ಕೂ ಹೆಚ್ಚು ಮರಗಳು ನಾಶವಾಗಿವೆ’ ಎಂದು ಬಿಜೆ‍ಪಿ ಮುಖಂಡರು ಪ್ರಕಟಣೆ ನೀಡಿ ಆರೋಪಿಸಿದ್ದಾರೆ.

‘ಈ ಜಾಗದಿಂದ ಕೇವಲ 1 ಕಿ.ಮೀ ದೂರದಲ್ಲಿ 55 ಎಕರೆ ಬಂಜರು ಭೂಮಿ ಇದೆ. ಯೋಜನೆಗೆ ಅದನ್ನು ಬಳಸಿಕೊಳ್ಳಬಹುದಿತ್ತು. ಆದರೆ, ಅರಣ್ಯವನ್ನೇ ಏಕೆ ಬಳಸಿಕೊಳ್ಳಲಾಗಿದೆ? ಇದರ ಹಿಂದಿರುವ ಗ್ರಾಮೀಣ ಕ್ಷೇತ್ರದ ರಾಜಕಾರಣಿ ಯಾರು ಎಂಬ ಬಗ್ಗೆ ಬಹಿರಂಗ ಮಾಡಬೇಕು’ ಎಂದೂ ಬಿಜೆಪಿ ಗ್ರಾಮೀಣ ಮಂಡಲ ಮಾಜಿ ಅಧ್ಯಕ್ಷ ಧನಂಜಯ ಜಾಧವ್ ದೂರಿದ್ದಾರೆ.

‘ಮರಗಳನ್ನು ಕತ್ತರಿಸುವವರೆಗೂ ಅರಣ್ಯ ಅಧಿಕಾರಿಗಳು ಏಕೆ ಸುಮ್ಮನಿದ್ದರು? ಈವರೆಗೆ ಮುಖ್ಯ ಆರೋಪಿಯನ್ನು ಏಕೆ ಬಂಧಿಸಿಲ್ಲ ಎಂಬ ಪ್ರಶ್ನೆ ಮುಂದಿಟ್ಟುಕೊಂಡು ಫೆ.6ರಂದು ರೈತ ಸಂಘಟನೆ, ಬಡಾಲ ಅಂಕಲಗಿ ಗ್ರಾಮಸ್ಥರ ಜತೆಗೂಡಿ ಡಿಸಿಎಫ್‌ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು’ ಎಂದೂ ಧನಂಜಯ ತಿಳಿಸಿದ್ದಾರೆ.

40 ಎಕರೆ ಸೌರಘಟಕಕ್ಕೆ ಮಂಜೂರು ಮಾಡಿದ ಸರ್ಕಾರ 8 ಎಕರೆಯಲ್ಲಿ ಮರಗಳ ಹನನ ಎನ್ನುವ ಅರಣ್ಯಾಧಿಕಾರಿ 10 ಸಾವಿರ ಮರಗಳ ನಾಶ ಎಂದ ಪ್ರತಿಭಟನಕಾರರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.