ಬೆಳಗಾವಿ: ‘ಬೆಳಗಾವಿಯೂ ಸೇರಿದಂತೆ ರಾಜ್ಯದ ಗಡಿ ಭಾಗದಲ್ಲಿರುವ ಕನ್ನಡ ಶಾಲೆಗಳನ್ನು ಸದೃಢಗೊಳಿಸಲು ಕ್ರಮ ವಹಿಸಲಾಗುವುದು. ಇದಕ್ಕೆ ಅನುಕೂಲವಾಗುವಂತೆ ಇಲ್ಲಿನ ಕನ್ನಡ ಸಂಘಟನೆಗಳ ಮುಖಂಡರು ಸೇರಿಕೊಂಡು ಒಂದು ಸ್ಪಷ್ಟ ವರದಿ ನೀಡಿ’ ಎಂದುಗಡಿ ಉಸ್ತುವಾರಿ ಸಚಿವರೂ ಆಗಿರುವ ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ಸಚಿವ ಎಚ್.ಕೆ.ಪಾಟೀಲ ಸಲಹೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಶನಿವಾರ ಗಡಿ ಭಾಗದ ಕನ್ನಡಪರ ಸಂಘಟನೆಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ‘ಗಡಿಯಲ್ಲಿ ಕನ್ನಡ ಶಾಲೆಗಳು ದಯನೀಯ ಸ್ಥಿತಿಯಲ್ಲಿವೆ ಎಂಬ ಮಾಹಿತಿ ಇದೆ. ಈ ಬಗ್ಗೆ ಶಿಕ್ಷಣ ಸಚಿವರ ಜತೆಗೂ ಚರ್ಚಿಸಲಾಗುವುದು’ ಎಂದರು.
‘ವಿಧಾನಸೌಧ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಿ ಪ್ರವಾಸಿ ತಾಣವಾಗಿ ಮಾರ್ಪಡಿಸಲಾಗಿದೆ. ಅದೇ ರೀತಿ ಬೆಳಗಾವಿಯ ಸುವರ್ಣ ವಿಧಾನಸೌಧವನ್ನೂ ಪ್ರವಾಸಿ ತಾಣ ಮಾಡಲಾಗುವುದು’ ಎಂದು ಭರವಸೆ ನೀಡಿದರು.
ಸಭೆಯಲ್ಲಿ ಮಾತನಾಡಿದ ಕಿತ್ತೂರು ಕರ್ನಾಟಕ ಸೇನೆ ಅಧ್ಯಕ್ಷ ಮಹದೇವ ತಳವಾರ, ‘ಗಡಿ ಸಂರಕ್ಷಣಾ ಆಯೋಗ ರಚನೆ ಆಗಬೇಕು. ಗಡಿ ಪ್ರದೇಶಾಭಿವೃದ್ಧಿ ಮಂಡಳಿಗಳ ಕಚೇರಿ ಸುವರ್ಣ ವಿಧಾನಸೌಧದಲ್ಲಿ ಸ್ಥಾಪಿಸಬೇಕು. ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
‘ಸುವರ್ಣ ವಿಧಾನಸೌಧದ ಆವರಣದಲ್ಲಿ ಭವ್ಯವಾದ ಭುವನೇಶ್ವರಿ ತಾಯಿಯ 108 ಅಡಿ ಎತ್ತರದ ಕಂಚಿನ ಮೂರ್ತಿ ಸ್ಥಾಪಿಸಬೇಕು’ ಎಂದು ಸರ್ವೋದಯ ಸ್ವಯಂ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ತಾಳೂರಕರ ಒತ್ತಾಯಿಸಿದರು.
‘ಮೂರು ತಿಂಗಳಿಗೊಮ್ಮೆ ಕನ್ನಡಪರ ಸಂಘಟನೆಗಳ ಸಭೆ ನಡೆಸಬೇಕು’ ಎಂದು ಕರವೇ ಜಿಲ್ಲಾ ಘಟಕದ ಅಧ್ಯಕ್ಷ ದೀಪಕ್ ಗುಡಗನಟ್ಟಿ ಆಗ್ರಹಿಸಿದರು.
ಶಾಸಕ ವಿಶ್ಚಾಸ ವೈದ್ಯ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಅಶೋಕ ಚಂದರಗಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ವೇದಿಕೆಯಲ್ಲಿದ್ದರು.
ಬೆಳಗಾವಿಯಲ್ಲಿ ಮೇಲ್ಸೇತುವೆ ನಿರ್ಮಾಣ ಮಾಡುವಾಗ ಕಿತ್ತೂರು ಚನ್ನಮ್ಮ ವೃತ್ತದ ಎತ್ತರ ಎಚ್ಚಿಸಿ ಬೃಹತ್ ಗಾತ್ರದ ಪುತ್ಥಳಿ ಸ್ಥಾಪಿಸಲಾಗುವುದು.– ಎಚ್.ಕೆ.ಪಾಟೀಲ, ಗಡಿ ಉಸ್ತುವಾರಿ ಸಚಿವ
ನಾಡು– ನುಡಿಗಾಗಿ ನಡೆಯುತ್ತಿರುವ ಹೋರಾಟಗಳಿಗೆ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಗಡಿ ವಿವಾದ ಪೂರ್ಣ ಅರಿತಿರುವ ಸಚಿವರು ಗಮನ ಕೊಡಬೇಕು.– ಅಶೋಕ ಚಂದರಗಿ, ಸದಸ್ಯ ಗಡಿ ಅಭಿವೃದ್ಧಿ ಪ್ರಾಧಿಕಾರ
ನಾಡವಿರೋಧಿ ಚಟುವಟಿಕೆ ನಡೆಸುವ ಎಂಇಎಸ್ ಸಂಘಟನೆಯನ್ನು ನಿಷೇಧಿಸಲು ಸರ್ಕಾರ ಹಿಂದೇಟು ಹಾಕಲಾಗುತ್ತಿದೆ. ಇದು ಸರಿಯಾದ ನಡೆಯಲ್ಲ.– ಅಭಿಲಾಷ್ ಮುಖಂಡ, ಕರವೇ ಪ್ರವೀಣ ಶೆಟ್ಟಿ ಬಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.