ADVERTISEMENT

ಬೆಳಗಾವಿ: ಕ್ಷೇತ್ರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಿಂಚಿನ ಸಂಚಾರ

ವಿವಿಧ ಉದ್ಯಾನ ಅಭಿವೃದ್ಧಿ, ರಸ್ತೆ ಕಾಮಗಾರಿಗಳನ್ನು ಪರಿಶೀಲನೆ ಮಾಡಿದ ಲಕ್ಷ್ಮೀ ಹೆಬ್ಬಾಳಕರ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2025, 6:10 IST
Last Updated 11 ಸೆಪ್ಟೆಂಬರ್ 2025, 6:10 IST
ಬೆಳಗಾವಿಯ ಗಣೇಶಪುರದಲ್ಲಿ ಬುಧವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಫುಟ್‌ಪಾತ್‌ ಹಾಗೂ ಉದ್ಯಾನ ಕಾಮಗಾರಿಗಳ ಬಗ್ಗೆ ವಾಯು ವಿಹಾರಿಗಳಿಂದ ಮಾಹಿತಿ ಪ‍ಡೆದರು
ಬೆಳಗಾವಿಯ ಗಣೇಶಪುರದಲ್ಲಿ ಬುಧವಾರ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಫುಟ್‌ಪಾತ್‌ ಹಾಗೂ ಉದ್ಯಾನ ಕಾಮಗಾರಿಗಳ ಬಗ್ಗೆ ವಾಯು ವಿಹಾರಿಗಳಿಂದ ಮಾಹಿತಿ ಪ‍ಡೆದರು   

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಬುಧವಾರ ಬೆಳಿಗ್ಗೆ, ಗ್ರಾಮೀಣ ವಿಧಾನಸಭಾ ಕ್ಷೇತ್ರದ ವಿವಿಧೆಡೆ ಮಿಂಚಿನ ಸಂಚಾರ ನಡಸಿ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದರು.

ಗಣೇಶಪುರ ಗ್ರಾಮದಲ್ಲಿ ಸುಮಾರು ₹2.10 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾದ ಉದ್ಯಾನ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಸರಸ್ವತಿ ನಗರದ ಸಿದ್ಧಿ ವಿನಾಯಕ ದೇವಾಲಯ ಆವರಣದಲ್ಲಿ ನಡೆಯುತ್ತಿರುವ ಉದ್ಯಾನ ಕಾಮಗಾರಿಯನ್ನು ವೀಕ್ಷಿಸಿ ಗುತ್ತಿಗೆದಾರರಿಗೆ ಸಲಹೆ, ಸೂಚನೆ ಸೂಚನೆ ನೀಡಿದರು.  ಫ್ರೀಡಂ ಫೈಟರ್ಸ್ ಕಾಲೊನಿ ಹಾಗೂ ಇನ್ನುಳಿದ ಎರಡು ಉದ್ಯಾನ, ಪ್ರೆಸ್ ಕಾಲೊನಿಯ ಉದ್ಯಾನ ವೀಕ್ಷಿಸಿ, ಅಲ್ಲಿನ ನಾಗರಿಕರಿಗಾಗಿ ಹಸಿರಿನಿಂದ ಕೂಡಿದ ಸುಂದರ ಉದ್ಯಾನ ನಿರ್ಮಾಣ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಂತರ ಹಿಂಡಲಗಾ ಗ್ರಾಮದಲ್ಲಿ ₹2.15 ಕೋಟಿ ವೆಚ್ಚದಲ್ಲಿ ಕೈಗೊಳ್ಳಲಾದ ವಿವಿಧ ಉದ್ಯಾನಗಳ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ಗ್ರಾಮದಲ್ಲಿನ ಮರಾಠಾ ಕಾಲೊನಿ, ವಿನಾಯಕ ನಗರ, ವಿದ್ಯಾನಗರ ಹೌಸಿಂಗ್ ಕಾಲೊನಿ, ಎಂ.ಇ.ಎಸ್. ಕಾಲೊನಿ, ಡಿಫೆನ್ಸ್ ಕಾಲೊನಿ (ಸಿದ್ದಿ ವಿನಾಯಕ ಹೌಸಿಂಗ್ ಸೊಸೈಟಿ)ಗಳಲ್ಲಿ ನಡೆಯುತ್ತಿರುವ ಉದ್ಯಾನ ಕಾಮಗಾರಿಗಳನ್ನು ಶೀಘ್ರ ಮುಗಿಸುವಂತೆ ತಾಕೀತು ಮಾಡಿದರು.

ADVERTISEMENT

ಬಳಿಕ, ಸಹ್ಯಾದ್ರಿ ನಗರದ ಸಮಗ್ರ ಅಭಿವೃದ್ಧಿಯ ನಿಟ್ಟಿನಲ್ಲಿ ₹6.14 ಕೋಟಿ ಅನುದಾನದಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು. ರಸ್ತೆ ನಿರ್ಮಾಣ, ಚರಂಡಿ ಕಾಮಗಾರಿ ಹಾಗೂ ಪೇವರ್ಸ್ ಅಳವಡಿಕೆ ಕಾರ್ಯಗಳ ಪ್ರಗತಿ ಪರಿಶೀಲನೆ ನಡೆಸಿ ಸಂಪೂರ್ಣ ಮಾಹಿತಿ ಪಡೆದರು. ಗುಣಮಟ್ಟದ ಕಾಮಗಾರಿಗೆ ನಿಗಾ ವಹಿಸಬೇಕು ಎಂದು ಸ್ಥಳೀಯ ಜನರಿಗೆ ಮನವಿ ಕೂಡ ಮಾಡಿದರು.

ಇದೇ ವೇಳೆ ಮಹಾಬಳೇಶ್ವರ ದೇವಾಲಯದ ಜೀರ್ಣೋದ್ಧಾರ ಹಾಗೂ ಉದ್ಯಾನ ಅಭಿವೃದ್ಧಿ ಕಾಮಗಾರಿ, ಡಾ. ಬಿ.ಆರ್. ಅಂಬೇಡ್ಕರ್ ಭವನ ಆವರಣದಲ್ಲಿ ನಡೆಯುತ್ತಿರುವ ಉದ್ಯಾನ ಅಭಿವೃದ್ಧಿ ಕಾಮಗಾರಿಯ ಪ್ರಗತಿ ಪರಿಶೀಲನೆ ನಡೆಸಿದರು.

‘ಮನೆಪಟ್ಟಿ ಅಂಟಿಸುವ ಕಾರ್ಯಕ್ಕೆ ಸಹಕರಿಸಿ’

ಬೆಳಗಾವಿ: ರಾಜ್ಯದ ಹಿಂದುಳಿದ ವರ್ಗಗಳ ಆಯೋಗದಿಂದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು ಈ ಕಾರ್ಯದಲ್ಲಿ ಮನೆ ಪಟ್ಟಿ (ಹೌಸ್ ಲಿಸ್ಟಿಂಗ್ ಎಕ್ಷರ್ಸೈಜ್) ಮಾಡಲಾಗುತ್ತಿರುವ ಹಿನ್ನೆಲೆಯಲ್ಲಿ ಹೆಸ್ಕಾಂ ಅಧಿಕಾರಿಗಳು ಬುಧವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕಎ ಅವರ ಬೆಳಗಾವಿಯ ನಿವಾಸಕ್ಕೆ ಭೇಟಿ ನೀಡಿ ಸಮೀಕ್ಷೆಯ ಭಾಗವಾಗಿ ಮನೆಗಳಿಗೆ ಅಂಟಿಸಬೇಕಿರುವ ಸ್ಟಿಕರ್ ಕುರಿತು ಮಾಹಿತಿ ನೀಡಿದರು.

ರಾಜ್ಯದ ಪ್ರತಿ ಮನೆಗೆ ಸಿಬ್ಬಂದಿ ಭೇಟಿ ನೀಡಿ ಸ್ಟಿಕ್ಕರ್ ಅಂಟಿಸಿದ ಬಳಿಕ ಶಿಕ್ಷಕರು ಭೇಟಿ ನೀಡಿ ಸಮೀಕ್ಷೆ ಕೈಗೊಳ್ಳಲಿದ್ದಾರೆ. ಸಮೀಕ್ಷೆಯ ವೇಳೆ ಅವರಿಗೆ ಸೂಕ್ತ ಮಾಹಿತಿ ನೀಡಿ ಸಮೀಕ್ಷೆಯನ್ನು ಯಶಸ್ವಿಗೊಳಿಸಬೇಕು ಎಂದು ಸಚಿವೆ ಮನವಿ ಮಾಡಿದರು. ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಅಶ್ವಿನ್ ಶಿಂಧೆ ಶೀತಲ್ ಸನದಿ ಶಂಕರ ಕದಂ ಸೆಕ್ಷನ್ ಆಫೀಸರ್ ಹಂದಿಗುಂದ್ ಕಾಮತ್ ಛಾಯಾ ಸಂದೀಪ್ ಮಾರುತಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.