
ಬೆಳಗಾವಿ: ರೈತ ಬದುಕಿದ್ದಾಗಲೇ, ‘ನಿಧನರಾಗಿದ್ದಾರೆ’ ಎಂದು ದೃಢೀಕರಿಸಿ ಗ್ರಾಮ ಲೆಕ್ಕಾಧಿಕಾರಿ ಯಡವಟ್ಟು ಮಾಡಿದ್ದಾರೆ. ‘ನಾನು ಸತ್ತಿಲ್ಲ, ಬದುಕಿದ್ದೇನೆ’ ಎಂಬ ಅರ್ಜಿ ಹಿಡಿದು ರೈತ ಕಚೇರಿಗಳಿಗೆ ಅಲೆಯುವಂತಾಗಿದೆ.
ಸವದತ್ತಿ ತಾಲ್ಲೂಕಿನ ಸುತಗಟ್ಟಿ ಗ್ರಾಮದ ರೈತ ಈರಪ್ಪ ನಾಗಪ್ಪ ಅಬ್ಬಾಯಿ (53) ಅವರದು ಈಗ ‘ತಬರನ ಕಥೆ’ಯಾಗಿದೆ. ಗ್ರಾಮ ಲೆಕ್ಕಾಧಿಕಾರಿ ನೀಲಾ ಮುರಗೋಡ ಮಾಡಿದ ತಪ್ಪಿನಿಂದ ರೈತ ಹೈರಾಣಾಗಿದ್ದಾರೆ. ‘ಬದುಕಿದ್ದೇನೆ’ ಎಂಬ ಅರ್ಜಿ ಹಿಡಿದು ಸವದತ್ತಿ, ಬೆಳಗಾವಿ ಮತ್ತು ಬೆಂಗಳೂರು ಕಚೇರಿಗಳಿಗೆ ಓಡಾಡುತ್ತಿದ್ದಾರೆ.
ನಡೆದಿದ್ದೇನು?: ಕುಟುಂಬದ ಸದಸ್ಯರೊಬ್ಬರ ಮರಣ ದಾಖಲೆಗಾಗಿ 2021ರ ಜುಲೈ 8ರಂದು ಈರಪ್ಪ ಅರ್ಜಿ ಹಾಕಿದ್ದರು. ಆದರೆ, ‘ಈರಪ್ಪ ಅವರೇ ನಿಧನರಾಗಿದ್ದಾರೆ’ ಎಂದು ಗ್ರಾಮ ಲೆಕ್ಕಾಧಿಕಾರಿ ದಾಖಲಿಸಿದ್ದಾರೆ.
ಐದು ವರ್ಷ ಈ ಲೋಪವು ರೈತನ ಗಮನಕ್ಕೂ ಬಂದಿಲ್ಲ. ‘ಮರಣ ಪ್ರಮಾಣಪತ್ರ’ವನ್ನು ಐದು ತಿಂಗಳ ಹಿಂದೆ ಈರಪ್ಪ ಅವರ ಕೈಗೇ ನೀಡಲಾಗಿದೆ.
2025ರ ಜುಲೈನಲ್ಲಿ ಜಮೀನಿಗೆ ಹನಿ ನೀರಾವರಿ ಅಳವಡಿಸುವ ಸಂಬಂಧ ಈರಪ್ಪ ಅರ್ಜಿ ಸಲ್ಲಿಸಿದ್ದರು. ದಾಖಲೆಗಳಲ್ಲಿ ‘ನಿಧನರಾಗಿದ್ದಾರೆ’ ಎಂದು ದೃಢೀಕರಿಸಿದ ವಿಷಯ ಆಗಲೇ ಗೊತ್ತಾಗಿದೆ.
ಈ ಲೋಪದ ಪರಿಣಾಮವಾಗಿ ಅವರು ಹನಿ ನೀರಾವರಿ ಸಲಕರಣೆಗಳಿಂದಲೂ ವಂಚಿತರಾಗಿದ್ದಾರೆ. ‘ಈ ಯೋಜನೆಯಲ್ಲಿ ತಮಗೆ ₹3 ಲಕ್ಷ ರಿಯಾಯಿತಿ ಸಿಗಬೇಕಿತ್ತು’ ಎಂದು ಸಂಕಟ ತೋಡಿಕೊಂಡಿದ್ದಾರೆ.
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಮಲ್ಲಿಕಾರ್ಜುನ ಹೆಗ್ಗನವರ, ‘ತಪ್ಪು ಮಾಡಿದ ಗ್ರಾಮ ಲೆಕ್ಕಾಧಿಕಾರಿಗೆ ನೋಟಿಸ್ ನೀಡಲಾಗಿದೆ. ತನಿಖೆ ನಡೆಸಿ ಶಿಸ್ತು ಕ್ರಮ ಜರುಗಿಸಲಾಗುವುದು. ಇನ್ನೆರಡು ವಾರಗಳಲ್ಲಿ ಈ ಸಮಸ್ಯೆಯು ಸಮಸ್ಯೆ ಬಗೆಹರಿಯಲಿದೆ’ ಎಂದು ಹೇಳಿದರು.
ಈ ಸಮಸ್ಯೆಯನ್ನು ನಮ್ಮ ಕಚೇರಿ ವ್ಯಾಪ್ತಿಯಲ್ಲಿ ಬಗೆಹರಿಸಲು ಬರುವುದಿಲ್ಲ. ರೈತನನ್ನು ಸಂಕಷ್ಟದಿಂದ ಪಾರು ಮಾಡಲು ನಾವು ಬೆಂಗಳೂರು ಕಚೇರಿ ಜೊತೆ ಸಂಪರ್ಕ ಸಾಧಿಸಿದ್ದೇವೆಮಲ್ಲಿಕಾರ್ಜುನ ಹೆಗ್ಗನವರ ತಹಶೀಲ್ದಾರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.