ADVERTISEMENT

ಬೆಳಗಾವಿ: ಸ್ಥಾಯಿ ಸಮಿತಿ ಸದಸ್ಯರ ಅವಿರೋಧ ಆಯ್ಕೆ

ನಾಲ್ಕು ಸ್ಥಾಯಿ ಸಮಿತಿಗಳಿಗೆ ನಡೆದ ಚುನಾವಣೆ; ಬಿಜೆಪಿಯ ಐವರು, ಕಾಂಗ್ರೆಸ್‌ನ ಇಬ್ಬರು ಸೇರಿ ತಲಾ ಏಳು ಸದಸ್ಯರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 12 ಆಗಸ್ಟ್ 2025, 13:45 IST
Last Updated 12 ಆಗಸ್ಟ್ 2025, 13:45 IST
<div class="paragraphs"><p>ಬೆಳಗಾವಿ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರನ್ನು ಮಂಗಳವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆಯ್ಕೆಯಾದವರು ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ ಅವರೊಂದಿಗೆ ಚಿತ್ರ ತೆಗೆಸಿಕೊಂಡರು  </p></div>

ಬೆಳಗಾವಿ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರನ್ನು ಮಂಗಳವಾರ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಆಯ್ಕೆಯಾದವರು ಮೇಯರ್ ಮಂಗೇಶ ಪವಾರ, ಉಪಮೇಯರ್ ವಾಣಿ ಜೋಶಿ ಅವರೊಂದಿಗೆ ಚಿತ್ರ ತೆಗೆಸಿಕೊಂಡರು

   

ಪ್ರಜಾವಾಣಿ ಚಿತ್ರ

ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಸದಸ್ಯರನ್ನು ಮಂಗಳವಾರ ನಡೆದ ಚುನಾವಣೆ ವೇಳೆ, ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹಾಲಿ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಾಗಿನಿಂದ ಸ್ಥಾಯಿ ಸಮಿತಿಗಳ ಆಯ್ಕೆ ನಡೆದಿರಲಿಲ್ಲ. ಒಮ್ಮತ ಮೂಡದ ಕಾರಣ ಮೂರು ಬಾರಿ ಮುಂದೂಡಲಾಗಿತ್ತು. ಕೊನೆಗೂ ಅವಿರೋಧ ಆಯ್ಕೆ ಮಾಡುವಲ್ಲಿ ಮುಖಂಡರು ಯಶಸ್ವಿಯಾದರು.

ADVERTISEMENT

ಪ್ರತಿ ಸಮಿತಿಗೂ ಏಳು ಸದಸ್ಯರನ್ನು ಅಂತಿಮಗೊಳಿಸಲಾಯಿತು. ಇದರಲ್ಲಿ ಆಡಳಿತ ಪಕ್ಷವಾದ ಬಿಜೆಪಿಯಿಂದ ಐವರು ಹಾಗೂ ವಿರೋಧ ಪಕ್ಷವಾದ ಕಾಂಗ್ರೆಸ್‌ನಿಂದ ಇಬ್ಬರನ್ನು ಸೇರಿಸಲಾಗಿದೆ.

ಮಂಗಳವಾರ ಬೆಳಿಗ್ಗೆ ಚುನಾವಣೆ ಆರಂಭವಾದಾಗ, ತಮಗೆ ಕನಿಷ್ಠ ಮೂರು ಸ್ಥಾನಗಳನ್ನಾದರೂ ಮೀಸಲು ಕೊಡಬೇಕು ಎಂದು ಕಾಂಗ್ರೆಸ್‌ ಸದಸ್ಯರು ಪಟ್ಟು ಹಿಡಿದರು. ಬಿಜೆಪಿ ಪಾಳೆಯದ ಎಲ್ಲ ಸದಸ್ಯರು ಇದನ್ನು ಒಪ್ಪಲಿಲ್ಲ. ನಾಮಪತ್ರ ಸಲ್ಲಿಕೆ, ವಾಪಸ್‌ ಪಡೆಯುವ ಅವಧಿ ಮುಗಿದ ಬಳಿಕ ಮಧ್ಯಾಹ್ನನ 3ಕ್ಕೆ ಆಯ್ಕೆ ಪ್ರಕ್ರಿಯೆ ಆರಂಭವಾಯಿತು. ಆಗ ಯಾವೊಬ್ಬ ಸದಸ್ಯರೂ ವಿರೋಧ ವ್ಯಕ್ತಪಡಿಸದೇ ಅವಿರೋಧ ಆಯ್ಕೆಗೆ ಸಹಕರಿಸಿದರು.

ಶಾಸಕ ಅಭಯ ಪಾಟೀಲ ಹಾಗೂ ಮಾಜಿ ಶಾಸಕ ಅನಿಲ ಬೆನಕೆ ಮುಂದಾಳತ್ವದಲ್ಲಿ ಬಿಜೆಪಿ ಸದಸ್ಯರು ಮುಂಚಿತವಾಗಿಯೇ ಸಭೆ ಸೇರಿ ಚರ್ಚಿಸಿದರು. ಸಮಿತಿಗಳಿಗೆ ಅವಿರೋಧವಾಗಿ ಆಯ್ಕೆಯಾಗಬೇಕಾದ ಐವರ ಹೆಸರನ್ನು ಅಂತಿಮಗೊಳಿಸಿದರು. ನಂತರ ಶಾಸಕ ಆಸಿಫ್‌ ಸೇಠ್‌ ನೇತೃತ್ವದಲ್ಲಿ ಸಭೆ ಸೇರಿದ ಕಾಂಗ್ರೆಸ್‌ ಸದಸ್ಯರು ಕೂಡ ಪ್ರತಿ ಸಮಿತಿಗೆ ಇಬ್ಬರಂತೆ ಎಂಟು ಜನರ ಹೆಸರಿನ ಸಮೇತ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಅಧ್ಯಕ್ಷರ ಆಯ್ಕೆಗೆ ಕಸರತ್ತು:

ಸದ್ಯ ಸದಸ್ಯರನ್ನು ಮಾತ್ರ ಆಯ್ಕೆ ಮಾಡಲಾಗಿದ್ದು, ನಾಲ್ಕೂ ಸಮಿತಿಗಳಿಗೆ ಅಧ್ಯಕ್ಷ ಗಾದಿಗೂ ಪೈಪೋಟಿ ಏರ್ಪಟ್ಟಿದೆ. ಮುಂದಿನ ವಾರ ಅಧ್ಯಕ್ಷರ ಗಾದಿಗೂ ಭರ್ತಿಯಾಗುವ ನಿರೀಕ್ಷೆ ಇದೆ.

ಮೇಯರ್‌ ಮಂಗೇಶ ಪವಾರ, ಉಪಮೇಯರ್‌ ವಾಣಿ ವಿಲಾಸ ಜೋಶಿ, ಆಯುಕ್ತೆ ಬಿ.ಶುಭ ಕೂಡ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಯಾವ ಸಮಿತಿಗೆ ಯಾರು?

ತೆರಿಗೆ ನಿರ್ಧರಣೆ, ಹಣಕಾಸು ಹಾಗೂ ಅಪೀಲುಗಳ ಸ್ಥಾಯಿ ಸಮಿತಿ:

ಜಯಂತ ಜಾಧವ, ಸಾರಿಕಾ ಪಾಟೀಲ, ಸಂತೋಷ ಪೇಡ್ನೇಕರ, ರೇಖಾ ಮೋಹನ ಹೂಗಾರ, ರಮೇಶ ಶ್ರೀಕಾಂತ ಮೈಲ್ಯಾಗೋಳ, ಅಜೀಮ ಪಟವೇಗಾರ, ಅಫ್ರೋಜ ಮುಲ್ಲಾ.

ಸಾರ್ವಜನಿಕ ಆರೋಗ್ಯ ಶಿಕ್ಷಣ ಹಾಗೂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ:

ನಿತಿನ್ ನಾಮದೇವ ಜಾಧವ. ರೂಪಾ ಚಿಕ್ಕಲದಿನ್ನಿ, ಲಕ್ಷ್ಮೀ ಮಹಾದೇವ ರಾಠೋಡ, ಪ್ರೀತಿ ವಿನಾಯಕ ಕಾಮಕರ, ಅಭಿಜಿತ್ ಜವಳಕರ, ಮೋದಿನ್‌ಸಾಬ್‌ ಮತವಾಲೆ, ವೈಶಾಲಿ ಸಿದ್ಧಾರ್ಥ ಭಾತಖಾಂಡೆ.

ನಗರ ಯೋಜನ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ:

ಸಂದೀಪ ಅಶೋಕ ಜೀರಗ್ಯಾಳ, ಶ್ರೇಯಸ್ ಸೋಮಶೇಖರ ನಾಕಾಡಿ, ರಾಜು ಭಾತಖಾಂಡೆ, ದೀಪಾಲಿ ಸಂತೋಷ ಟೋಪಗಿ, ಮಾಧವಿ ಸಾರಂಗ ರಾಘೋಚಿ, ಜ್ಯೋತಿ ರಾಜು ಕಡೋಲ್ಕರ, ಶಾಹೀದಖಾನ್ ಗೌಸಖಾನ್ ಪಠಾಣ.

ಲೆಕ್ಕಗಳ ಸ್ಥಾಯಿ ಸಮಿತಿ:

ನಂದು ಮಿರಜಕರ, ರವಿರಾಜ ಸಾಂಬ್ರೆಕರ, ವೀಣಾ ಶ್ರೀಶೈಲ ವಿಜಾಪುರೆ, ನೇತ್ರಾವತಿ ವಿನೋದ ಭಾಗವತ, ಶಿವಾಜಿ ಪುಂಡಲೀಕ ಮಂಡೋಲ್ಕರ, ರವಿ ಕೃಷ್ಣಾ ಧೋತ್ರೆ, ಅಸ್ಮಿತಾ ಭೈರಗೌಡ ಪಾಟೀಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.