ADVERTISEMENT

ಬೆಳಗಾವಿ | ಖಾಸಗಿ ಮಾರುಕಟ್ಟೆ ಬಂದ್‌ ಮಾಡದಂತೆ ಆಗ್ರಹ: ರೈತರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 2:39 IST
Last Updated 18 ಸೆಪ್ಟೆಂಬರ್ 2025, 2:39 IST
ಬೆಳಗಾವಿಯ ಜೈ ಕಿಸಾನ್‌ ಮಾರುಕಟ್ಟೆ ಬಂದ್ ಮಾಡದಂತೆ ರೈತರು, ವ್ಯಾಪಾರಿಗಳು ಬುಧವಾರ ಪ್ರತಿಭಟನೆ ನಡೆಸಿದ ವೇಳೆ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ರೈತರನ್ನು ಸಮಾಧಾನ ಮಾಡಿದರು  ಪ್ರಜಾವಾಣಿ ಚಿತ್ರ
ಬೆಳಗಾವಿಯ ಜೈ ಕಿಸಾನ್‌ ಮಾರುಕಟ್ಟೆ ಬಂದ್ ಮಾಡದಂತೆ ರೈತರು, ವ್ಯಾಪಾರಿಗಳು ಬುಧವಾರ ಪ್ರತಿಭಟನೆ ನಡೆಸಿದ ವೇಳೆ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್‌ ರೈತರನ್ನು ಸಮಾಧಾನ ಮಾಡಿದರು  ಪ್ರಜಾವಾಣಿ ಚಿತ್ರ   

ಬೆಳಗಾವಿ: ಜೈ ಕಿಸಾನ್‌ ಖಾಸಗಿ ತರಕಾರಿ ಸಗಟು ಮಾರುಕಟ್ಟೆಯ ಪರವಾನಗಿ ರುದ್ದು ಮಾಡಿದ್ದನ್ನು ತೆರವುಗೊಳಿಸಬೇಕು, ಇಲ್ಲವೇ ಪ್ರತ್ಯೇಕ ಸ್ಥಳ ನೀಡಿ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಗ್ರಹಿಸಿ ಮಾರುಕಟ್ಟೆಯ ವ್ಯಾಪಾರಿಗಳು ಹಾಗೂ ರೈತರು ಬುಧವಾರ ಬೃಹತ್‌ ಪ್ರತಿಭಟನೆ ನಡೆಸಿದರು.

ಮಾರುಕಟ್ಟೆ ಬಂದ್‌ ಮಾಡುವಂತೆ ನಗರದಲ್ಲಿ ಮಂಗಳವಾರ ಭಾರತೀಯ ಕೃಷಿಕ ಸಮಾಜದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕೆ ವಿರುದ್ಧವಾಗಿ ಮಾರುಕಟ್ಟೆಯ ವ್ಯಾಪಾರಿಗಳ ಸಂಘದವರು ಹಾಗೂ ರೈತರು ಪ್ರತಿಭಟನೆ ನಡೆಸಿದರು.

ಬುಧವಾರ ಎಂದಿನಿಂತೆ ರದ್ದು ಮಾಡಲಾದ ಸ್ಥಳದಲ್ಲೇ ಸಗಟು ವ್ಯಾಪಾರ ಆರಂಭಿಸಿದರು. ಇದಕ್ಕೆ ಅಧಿಕಾರಿಗಳು ಆಸ್ಪದ ನೀಡಲಿಲ್ಲ. ಆಗ ಪ್ರತಿಭಟನೆ ನಡೆಸಿ, ಸರ್ಕಾರಕ್ಕೆ ಧಿಕ್ಕಾರ ಕೂಗಿದರು.

ADVERTISEMENT

10 ವರ್ಷಗಳ ವಾಣಿಜ್ಯ ಪರವಾನಗಿ ಪಡೆದಿದ್ದೇವೆ. ನಿಯಮದ ಪ್ರಕಾರ ವ್ಯಾಪಾರ ಮಾಡುತ್ತಿದ್ದೇವೆ. ಈಗ ಕುತಂತ್ರ ಬಳಸಿ ಮಾರುಕಟ್ಟೆಯನ್ನು ಏಕಾಏಕಿ ಬಂದ್‌ ಮಾಡುತ್ತಿದ್ದಾರೆ. ಇದಿರಂದ 300 ಮಳಿಗೆಗಳ ಕುಟುಂಬಗಳು ಬೀದಿಗೆ ಬೀಳುತ್ತವೆ ಎಂದು ಘೋಷಣೆ ಕೂಗಿದರು.

ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಮೊಹಮ್ಮದ್‌ ರೋಷನ್, ನಗರ ಪೊಲೀಸ್‌ ಕಮಿಷನರ್‌ ಭೂಷಣ ಬೊರಸೆ ರೈತರನ್ನು ಸಮಾಧಾನ ಮಾಡಲು ಯತ್ನಿಸಿದರು. ನ್ಯಾಯಾಲಯದ ನಿಯಮದಂತೆ ಈ ಮಾರುಕಟ್ಟೆ ಬಂದ್ ಮಾಡಬೇಕಾಗುತ್ತದೆ. ಪರ್ಯಾಯ ಮಾರ್ಗ ಏನು ಎಂದು ನಿಮಗೆ ತಿಳಿಸಲಾಗುವುದು. ರೈತರು, ವ್ಯಾಪಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಬಳಿಕ ಪ್ರತಿಭಟನೆ ಕೈಬಿಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.