
ಬೆಳಗಾವಿ: ಸುವರ್ಣ ವಿಧಾನಸೌಧದ ಸುತ್ತಲಿನ ಪ್ರದೇಶದಲ್ಲಿ ಗುರುವಾರವೂ ಸರಣಿ ಪ್ರತಿಭಟನೆಗಳು ನಡೆದವು. ಆದರೆ, ಪೊಲೀಸರು ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದ್ದರಿಂದ ಯಾವುದೇ ಗೊಂದಲಗಳಿಗೆ ಆಸ್ಪದ ಸಿಗಲಿಲ್ಲ.
ಮಾತ್ರವಲ್ಲ; ಸಚಿವರಾದ ಶಿವಾನಂದ ಪಾಟೀಲ, ಜಮೀರ್ ಅಹಮದ್ ಖಾನ್ ಸೇರಿದಂತೆ ಹಲವರು ಮಧ್ಯಾಹ್ನವೇ ಮನವಿ ಸ್ವೀಕರಿಸಿದರು. ಇದರಿಂದ ಬಹುಪಾಲು ಪ್ರತಿಭಟನಕಾರರು ಮಧ್ಯಾಹ್ನವೇ ಮನೆಗಳತ್ತ ತೆರಳಿದರು.
ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಮಾದಿಗ ಕ್ರಾಂತಿಕಾರಿ ಒಳ ಮೀಸಲಾತಿ ಹೋರಾಟ ಸಮಿತಿಯವರು ಪ್ರತಿಭಟನೆ ನಡೆಸಿದರು.
ಮಾದಿಗ ಮೀಸಲಾತಿ ಹೋರಾಟ ಸಮಿತಿ ಕಳೆದ 16 ತಿಂಗಳಿನಿಂದ ಮನವಿ ಪತ್ರಗಳನ್ನು ನೀಡಿದರೂ ಸರ್ಕಾರ ಕಿವಿಗೊಟ್ಟಿಲ್ಲ. ಇದೇ ನೆಪದಲ್ಲಿ ಸರ್ಕಾರ ಯಾವುದೇ ಬಡ್ತಿ ಹಾಗೂ ನೇಮಕಾತಿಗಳನ್ನು ಮಾಡುತ್ತಿಲ್ಲ. ಇದರಿಂದ ಯುವಜನರೂ, ವಿದ್ಯಾರ್ಥಿಗಳು ನಿರುದ್ಯೋಗಿ ಆಗುತ್ತಿದ್ದಾರೆ ಎಂದರು.
ಸಂಘಟನೆ ಅಧ್ಯಕ್ಷ ಆರ್.ಭಾಸ್ಕಾರ ಪ್ರಸಾದ, ಇಲಿಯಾಸ್ ರೆಡ್ಡಿ, ಪ್ರಭುರಾಜ ಕೊಡ್ಲಿ, ಹನುಮೇಶ್ ರಾವ್, ಪ್ರೇಮ ಕಲಕೇರಿ, ಲಕ್ಷ್ಮಣ ಭಂಡಾರಿ, ಟಿ.ಎಚ್.ಮೈಲಾರಪ್ಪ, ಕೆ.ಆರ್.ಉಮೇಶ ಇತರರು ಇದ್ದರು.
ರಾಜ್ಯದ ಗ್ರಾಮ ಅರಿವು ಕೇಂದ್ರ ಗ್ರಂಥಾಲಯಗಳ ಗ್ರಂಥಪಾಲಕರಿಗೆ ಕನಿಷ್ಠ ವೇತನ ಹಾಗೂ ತುಟ್ಟಿ ಭತ್ಯೆ ಸೇರಿ ₹19,201 ನೇರವಾಗಿ ಸರ್ಕಾರದಿಂದ ನೀಡುವಂತೆ ಒತ್ತಾಯಿಸಿ ಗ್ರಂಥಪಾಲಕರು ಪ್ರತಿಭಟನೆ ನಡೆಸಿದರು.
ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ ರಾಜ್ ಇಲಾಖೆಯಿಂದ 2023ರಂದು ಆದೇಶ ಜಾರಿ ಮಾಡಲಾಗಿದೆ. ಅದರಂತೆ ₹12 ಸಾವಿರ ಮಾಸಿಕ ಹಣ ನೀಡಲಾಗುತ್ತಿತ್ತು. ಹೊಸ ಆದೇಶದ ಪ್ರಕಾರ ಕನಿಷ್ಠ ವೇತನ ನಿಗದಿಯಾಗಿದೆ. ಅದರ ವ್ಯತ್ಯಾಸ ಮೊತ್ತ ₹7,210 ಹಾಗೂ ತುಟ್ಟಿಭತ್ಯೆಯನ್ನು ಪಾವತಿಸಲು ಆದೇಶವಿದ್ದರೂ ಸಂಬಂಧಪಟ್ಟವರು ನಿಯಮ ಪಾಲಿಸುತ್ತಿಲ್ಲ ಎಂದು ದೂರಿದರು.
ನಿವೃತ್ತಿ ಹೊಂದಿರುವವರಿಗೆ ₹10 ಲಕ್ಷ ಇಡಿಗಂಟು ನೀಡಬೇಕು. ಅರಿವು ಕೇಂದ್ರ ಗ್ರಂಥಪಾಲಕರಿಗೆ ಪಿ.ಎಫ್.,ಇ.ಎಸ್.ಐ ಭವಿಷ್ಯ ನಿಧಿ ನೀಡಬೇಕು. ಸೇವಾ ನಿಯಮಾವಳಿಯ ಪ್ರಕಾರ ಖಾಯಮಾತಿ ನೀಡಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಗೌರವ ಅಧ್ಯಕ್ಷ ಶಿವಶರಣಪ್ಪ ಕಾಳಗಿ, ರಾಜ್ಯ ಘಟಕದ ಅಧ್ಯಕ್ಷ ಪಂಪನಗೌಡ ಪಾಟೀಲ, ಪ್ರಧಾನ ಕಾರ್ಯದರ್ಶಿ ಎ.ನರಸಿಂಹಯ್ಯ, ಎಸ್.ಎಚ್.ಶಿವಮೂರ್ತಿ, ಜಿ.ಆರ್.ಬಸವರಾಜ, ಫಕ್ಕೀರಪ್ಪ ಸುಂಕದ, ವೀರೇಶ ಯಾದವ, ನಟರಾಜ ಚಿಕ್ಕಬಳ್ಳಾಪುರ, ಭೀಮಶಂಕರ ಬಿರಾದಾರ, ಮೋಹನಕುಮಾರಿ ಹಾಸನ ಮುಂತಾದವರು ಭಾಗವಹಿಸಿದ್ದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ₹15 ಸಾವಿರ, ಸಹಾಯಕಿಯರಿಗೆ ₹10 ಗೌರವ ಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಶನ್ ವತಿಯಿಂದ ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಬಿ.ಅಮ್ಜದ್, ಎಂ.ಜಯಮ್ಮ, ಬಿ.ಅಜದ,ರತ್ನ ಶಿರೂರ, ಮೇಘಾ ಮಿಠಾರೆ, ಲಕ್ಷ್ಮಿ, ಸುನಂದಾ ರೇವಣ್ಕರ್ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.