ಮೃತ ವ್ಯಕ್ತಿ
ಮೂಡಲಗಿ: ಮೂಡಲಗಿ ತಾಲ್ಲೂಕಿನ ಅವರಾದಿ ಗ್ರಾಮದಲ್ಲಿ ಮಂಗಳವಾರ ರಾತ್ರಿ, ಆರ್‌ಸಿಬಿ ವಿಜಯೋತ್ಸವದ ಸಂಭ್ರಮದಲ್ಲಿ ಹೃದಯಘಾತದಿಂದ ಯುವಕ ಸಾವಿಗೀಡಾಗಿದ್ದಾನೆ.
ಆರ್‌ಸಿಬಿ ಕಟ್ಟಾ ಅಭಿಮಾನಿಯಾಗಿದ್ದ ಮಂಜುನಾಥ ಈರಪ್ಪ ಕಂಬಾರ (28) ಸಾವಿಗೀಡಾದವರು. ಅವರಾದಿ ಗ್ರಾಮದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಗೆಲುವಿನ ಸಂಭ್ರಮಾಚರಣೆಯಲ್ಲಿ ಕುಣಿಯುತ್ತಲೇ ಅವರು ಕುಸಿದು ಬಿದ್ದಿರು. ಗೆಳೆಯರೆಲ್ಲ ಸೇರಿ ಹತ್ತಿರ ಮಹಾಲಿಂಗಪೂರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೂ ಅವರು ಬದುಕುಳಿಯಲಿಲ್ಲ ಎಂದು ಮೃತನ ಸಹೋದರರು ‘ಪ್ರಜಾವಾಣಿ’ಗೆ ತಿಳಿಸಿದರು.
ಎಲ್ಲ ಸಿದ್ಧತೆ ಮಾಡಿದ್ದ ಯುವಕ:
ಮಂಜುನಾಥ್‌ಗೆ ಕ್ರಿಕೆಟ್ ಎಂದರೆ ಅಭಿಮಾನ. ಆರ್‌ಸಿಬಿ ತಂಡವೆಂದರೆ ಹುಚ್ಚು ಅಭಿಮಾನ. ಫೈನಲ್ ಪಂದ್ಯ ವೀಕ್ಷಣೆಗೆ ಮಂಗಳವಾರ ಬೃಹತ್ ಎಲ್‌ಇಡಿ ಪರದೆಯ ವ್ಯವಸ್ಥೆಯನ್ನು ಅವರೇ ಮಾಡಿದ್ದರು. ಇದಕ್ಕಾಗಿ ನಾಲ್ಕು ದಿನಗಳಿಂದ ಊಟ, ನಿದ್ದೆ ಬಿಟ್ಟು ಓಡಾಡಿದ್ದರು. ಪಟಾಕಿ, ಗುಲಾಲು ಎಲ್ಲವನ್ನು ಖರೀದಿಸಿ ತಂದಿದ್ದರು.
ಗ್ರಾಮದಲ್ಲಿ ‘ಅವರಾದಿ ವಾರಿಯರ್ಸ್’ ಎಂಬ ತಂಡ ಕಟ್ಟಿಕೊಂಡು ಟೂರ್ನಿಗಳಲ್ಲಿ ಭಾಗವಹಿಸುತ್ತಿದ್ದರು. ನೆಚ್ಚಿನ ತಂಡ ಕಪ್ ಗೆದ್ದಿದ್ದನ್ನು ಕಂಡು ಯುವಕರು ಹುಚ್ಚೆದ್ದು ಕುಣಿದಾಡಿದರು. ಮಂಜುನಾಥ ಕೂಡ ಮೈ ಮರೆತು ಸಂಭ್ರಮಿಸುವಾಗಲೇ ಹೃದಯ ಸ್ತಂಭನವಾಗಿದೆ.
ಮಂಜುನಾಥಗೆ 6 ತಿಂಗಳ ಹೆಣ್ಣ ಮಗು ಇದೆ. ಪತ್ನಿ ಮತ್ತೆ ಗರ್ಭಿಣಿಯಾಗಿದ್ದಾರೆ. ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ತಂದೆ ಈರಪ್ಪ ಕೃಷಿ ಮಾಡಿಕೊಂಡಿದ್ಬಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.