ADVERTISEMENT

ಬೆಳಗಾವಿ | ರಾಯಣ್ಣನ ಪ್ರತಿಮೆಗೆ ಮಸಿ ಬಳಿದ ಕಿಡಿಗೇಡಿಗಳು: ಬಿಗುವಿನ ವಾತಾವರಣ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 18:47 IST
Last Updated 19 ಫೆಬ್ರುವರಿ 2026, 18:47 IST
   

ಬೆಳಗಾವಿ: ಸಮೀಪದ ಮಚ್ಚೆ ಗ್ರಾಮದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಗುರುವಾರ ರಾತ್ರಿ ಕಿಡಿಗೇಡಿಗಳು ಮಸಿ ಬಳಿದಿದ್ದಾರೆ. ಇದರಿಂದ ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಯಿತು.

ಮೊದಲಿದ್ದ ರಾಯಣ್ಣ ಮೂರ್ತಿಗೆ ಕಪ್ಪು ಬಣ್ಣವೇ ಇತ್ತು. ಅದರ ಮೇಲೆಯೇ ಮತ್ತೆ ಕರಿ ಮಸಿ ಸುರಿದಿದ್ದಾರೆ. ಹೀಗಾಗಿ, ಕೆಲಕಾಲ ಯಾರೂ ಇದನ್ನು ಗಮನಿಸಿರಲಿಲ್ಲ. ರಾತ್ರಿ ಗ್ರಾಮದ ಕೆಲವು ಯುವಕರ ಗಮನಕ್ಕೆ ಬಂದಿದೆ. ಕೆಲವೇ ನಿಮಿಷಗಳಲ್ಲಿ ಹಲವರು ಸ್ಥಳದಲ್ಲಿ ಸೇರಿ ಘೋಷಣೆ ಕೂಗಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಭದ್ರತಾ ಕ್ರಮ ಕೈಗೊಂಡರು.

ನಗರ ಪೊಲೀಸ್‌ ಕಮಿಷನರ್‌ ಭೂಷಣ ಬೊರಸೆ, ಡಿಸಿಪಿ ನಾರಾಯಣ ಭರಮನಿ ಕೂಡ ಸ್ಥಳಕ್ಕೆ ಧಾವಿಸಿದರು. ಅವರಿಗೆ ಸುತ್ತುವರಿದ ಜನ, ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.

ADVERTISEMENT

‘ರಾಯಣ್ಣ ಕೇವಲ ಐತಿಹಾಸಿಕ ವ್ಯಕ್ತಿಯಲ್ಲ. ನಮ್ಮ ಅಸ್ತಿತ್ವದ ಸಂಕೇತ. ಅವರ ಪ್ರತಿಮೆಗೆ ಅವಮಾನ ಮಾಡುವ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಕೂಡಲೇ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ಕನ್ನಡಪರ ಹೋರಾಟಗಾರರು ಘೋಷಣೆ ಕೂಗಿದರು.

ಮುಂಜಾಗೃತಾ ಕ್ರಮವಾಗಿ ಗ್ರಾಮದಲ್ಲಿ ಪೊಲೀಸ್‌ ಭದ್ರತೆ ಏರ್ಪಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.