ಬೆಳಗಾವಿಯ ನಾಥಪೈ ವೃತ್ತದಿಂದ ಖಾಸಬಾಗದ ಬಸವೇಶ್ವರ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ನಿರ್ಮಿಸಿದ ಹಾಕರ್ ಝೋನ್‌ನಲ್ಲಿನ ವ್ಯಾಪಾರಿ ಮಳಿಗೆಗಳು
–ಪ್ರಜಾವಾಣಿ ಚಿತ್ರ: ಏಕನಾಥ ಅಗಸಿಮನಿ
ಬೆಳಗಾವಿ: ‘ಇಲ್ಲಿ ಹೆಸರಿಗಷ್ಟ ಅಂಗಡಿಗೋಳ (ಮಳಿಗೆಗಳನ್ನು) ಕಟ್ಯಾರು. ಎರಡು ವರ್ಷವಾದ್ರೂ ಅವುಗಳನ್ನ ನಮಗ್ ಕೊಡವಾಲ್ರು. ನಾವ್ ಮಳಿ–ಬಿಸಿಲಾಗ್ ಕುಂತು– ನಿಂತು, ಉಳ್ಳಾಗಡ್ಡಿ, ಬಟಾಟಿ ಮಾರಾತೇವಿ. ಸರ್ಕಾರ ಎಷ್ಟ ಸ್ಕೀಮ್‌ಗೋಳ್ನ ತಂದ್ರೂ, ಮಾರಾಟಕ್ಕ ನಮಗ್ ನೆರಳು ಇಲ್ಲದಂಗ್ ಆಗೇತ್ರಿ...
ಇಲ್ಲಿನ ನಾಥಪೈ ವೃತ್ತದಲ್ಲಿ ಭಾನುವಾರ ಬೆಳಿಗ್ಗೆ ರಸ್ತೆಬದಿ ಈರುಳ್ಳಿ ಮಾರಾಟಕ್ಕೆ ಅಣಿಯಾಗುತ್ತಿದ್ದ ಬೈಲಹೊಂಗಲ ತಾಲ್ಲೂಕಿನ ನೇಸರಗಿಯ ನಬೀಸಾಬ್ ಬಾಗವಾನ್ ‘ಪ್ರಜಾವಾಣಿ’ ಮುಂದೆ ಅಳಲು ತೋಡಿಕೊಂಡಿದ್ದು ಹೀಗೆ. ಇದು ಇವರೊಬ್ಬರ ಸಂಕಷ್ಟವಲ್ಲ; ಪ್ರತಿ ಭಾನುವಾರ ನಡೆಯುವ ಇಲ್ಲಿನ ಸಂತೆಯಲ್ಲಿ ತರಕಾರಿ ಮಾರಾಟ ಮಾಡುವ ನೂರಾರು ಕಾರ್ಮಿಕರ ಗೋಳು.
ಜಿಲ್ಲೆಯ ವಿವಿಧೆಡೆಯಿಂದ ಬರುವ ವ್ಯಾಪಾರಿಗಳು, ಇಲ್ಲಿನ ಸಂತೆಯಲ್ಲಿ ತರಕಾರಿಗಳು, ದವಸ– ಧಾನ್ಯಗಳು, ಹಣ್ಣು–ಹಂಪಲು, ಮಸಾಲೆ ಪದಾರ್ಥಗಳು, ಕೃಷಿ ಪರಿಕರಗಳು, ಸಸಿಗಳು ಹೀಗೆ... ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿರದ ಕಾರಣ, ಅವರ ವ್ಯಾಪಾರಕ್ಕೆ ರಸ್ತೆಬದಿ ಸ್ಥಳವೇ ಆಸರೆ.
ಅವರಿಗೆ ನೆರವಾಗಲೆಂದು ಇಲ್ಲಿನ ನಾಥಪೈ ವೃತ್ತದಿಂದ ಖಾಸಬಾಗದ ಬಸವೇಶ್ವರ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ವಿಭಜಕಗಳಿದ್ದ ಸ್ಥಳದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ‘ಹೈಟೆಕ್ ಹಾಕರ್ ಝೋನ್’ ನಿರ್ಮಿಸಲಾಗಿದೆ. 2020ರ ಅಕ್ಟೋಬರ್‌ನಲ್ಲಿ ಆರಂಭಗೊಂಡ ಕಾಮಗಾರಿ, 2022ರ ಆಗಸ್ಟ್‌ನಲ್ಲಿ ಮುಗಿದಿದೆ. ಇಲ್ಲಿ 140 ಮಳಿಗೆಗಳಿವೆ. ಆದರೆ, ಅವುಗಳನ್ನು ವ್ಯಾಪಾರಿಗಳಿಗೆ ಹಂಚಿಕೆ ಮಾಡದ್ದರಿಂದ ಧೂಳು ಹಿಡಿಯುತ್ತಿವೆ. ವ್ಯಾಪಾರಿಗಳ ಪರದಾಟ ಮುಂದುವರಿದಿದೆ.
ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಕೈಗೊಂಡಿರುವ ಈ ಯೋಜನೆ ಸ್ಮಾರ್ಟ್ ವಾಟರ್ ಡ್ರೈನ್, ಆರ್‌ಸಿಸಿ ರೂಫಿಂಗ್, ವೈಟ್ ಟಾಪಿಂಗ್ ರಸ್ತೆ, ಪಾದಚಾರಿ ಮಾರ್ಗ ಮತ್ತು ವ್ಯಾಪಾರಿ ಮಳಿಗೆಗಳನ್ನು ಒಳಗೊಂಡಿದೆ. ಆದರೆ, ಕಾಮಗಾರಿ ಮುಗಿದು ಎರಡು ವರ್ಷವಾಗುತ್ತ ಬಂದರೂ ಇದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿಲ್ಲ.
ಸಂಚಾರ ಸಮಸ್ಯೆ: ನಾಥಪೈ ವೃತ್ತದಿಂದ ಬಸವೇಶ್ವರ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸದಾ ವಾಹನದಟ್ಟಣೆಯಿಂದ ಕೂಡಿರುತ್ತದೆ. ಭಾನುವಾರದ ಸಂತೆ ಕಾರಣಕ್ಕೆ, ಈ ಮಾರ್ಗದಲ್ಲಿ ಸಂಚಾರ ಸಮಸ್ಯೆ ತಲೆದೋರುತ್ತಿದೆ. ಆದರೆ, ಈ ಮಳಿಗೆಗಳನ್ನು ನಿರ್ವಹಣೆಗಾಗಿ ಮಹಾನಗರ ಪಾಲಿಕೆಗೆ ಹಸ್ತಾಂತರಿಸಿ ವ್ಯಾಪಾರಿಗಳಿಗೆ ಹಂಚಿಕೆ ಮಾಡುವತ್ತ ಅಧಿಕಾರಿಗಳು ಲಕ್ಷ್ಯ ಕೊಡುತ್ತಿಲ್ಲ. ಇದರಿಂದಾಗಿ ಮಹತ್ವಕಾಂಕ್ಷಿ ಯೋಜನೆಯೊಂದು ಹಳ್ಳ ಹಿಡಿಯುತ್ತಿದೆ.
ಬೆಳಗಾವಿಯ ನಾಥಪೈ ವೃತ್ತದಿಂದ ಖಾಸಬಾಗದ ಬಸವೇಶ್ವರ ವೃತ್ತಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದ ರಸ್ತೆಯಲ್ಲೇ ತರಕಾರಿ ಮಾರುತ್ತಿರುವುದು
ಅಂಕಿ–ಸಂಖ್ಯೆಹೈಟೆಕ್ ಹಾಕರ್ ಝೋನ್₹5.45 ಕೋಟಿ ಯೋಜನೆ ವೆಚ್ಚ 140 ನಿರ್ಮಾಣವಾದ ವ್ಯಾಪಾರಿ ಮಳಿಗೆಗಳು 700 ಮೀಟರ್ ಪಾದಚಾರಿ ಮಾರ್ಗದ ಉದ್ದ 40 ವಿದ್ಯುತ್ ಕಂಬಗಳ ಅಳವಡಿಕೆ
ಟೆಂಡರ್ ಕರೆದಿದ್ದೇವೆ’ ವಿವಿಧ ಕಾರಣಗಳಿಂದ ಮಳಿಗೆಗಳು ಹಂಚಿಕೆಯಾಗಿರಲಿಲ್ಲ. ಸ್ಮಾರ್ಟ್ ಸಿಟಿ ಅಭಿವೃದ್ಧಿ ಸಮಿತಿ ಮೂಲಕ ಟೆಂಡರ್ ಕರೆದಿದ್ದೇವೆ. ಈ ಪ್ರಕ್ರಿಯೆ ಮುಗಿದ ನಂತರ ಎಲ್ಲ ಮಳಿಗೆಗಳು ವ್ಯಾಪಾರಿಗಳಿಗೆ ಹಂಚಿಕೆಯಾಗಲಿವೆ–ಸೋಮಲಿಂಗ ಗೆಣ್ಣೂರ ವ್ಯವಸ್ಥಾಪಕ ನಿರ್ದೇಶಕ ಸ್ಮಾರ್ಟ್‌ಸಿಟಿ ಯೋಜನೆ
ನಾವು ದಿನವಿಡೀ ದುಡಿದು ಒಂದಿಷ್ಟು ಲಾಭ ಗಳಿಸುವುದೇ ಈಗ ಕಷ್ಟವಾಗಿದೆ. ಹಾಗಾಗಿ ಈ ಮಳಿಗೆಗಳ ಬಾಡಿಗೆಗೆ ವಿಧಿಸುವ ಶುಲ್ಕ ವ್ಯಾಪಾರಿಗಳಿಗೆ ಕೈಗೆಟುಕುವಂತಿರಬೇಕು- ಅನ್ನಪೂರ್ಣ ಗುಂಡ್ಲೂರ, ವ್ಯಾಪಾರಿ ಮಹಿಳೆ
ಏನೇ ತೊಡಕುಗಳಿದ್ದರೂ ತ್ವರಿತವಾಗಿ ಬಗೆಹರಿಸಿ ಮಳಿಗೆಗಳನ್ನು ವ್ಯಾಪಾರಿಗಳಿಗೆ ಹಂಚುವ ಕಾರ್ಯವಾಗಬೇಕು.–ನಬೀಸಾಬ್ ಬಾಗವಾನ್ ವ್ಯಾಪಾರಿ
‘ಬಿಸಿಲಲ್ಲಿ ಮಾರುವುದು ತಪ್ಪುತ್ತದೆ’ನಾನು ಹಲವು ವರ್ಷಗಳಿಂದ ರಸ್ತೆಬದಿಯೇ ತರಕಾರಿ ಮಾರುತ್ತಿದ್ದೇನೆ. ಈಗ ವಯಸ್ಸಾಗಿದೆ. ವಿವಿಧ ಪ್ರಕ್ರಿಯೆ ಮುಗಿಸಿ ಎಲ್ಲ ವ್ಯಾಪಾರಿಗಳಿಗೆ ಮಳಿಗೆಗಳನ್ನು ಹಂಚಿದರೆ ಬಿಸಿಲಿನಲ್ಲಿ ಕುಳಿತು ಮಾರಾಟ ಮಾಡುವುದು ತಪ್ಪುತ್ತದೆ.–ಸರಸ್ವತಿ ಯಳ್ಳೂರ ವ್ಯಾಪಾರಿ ಮಹಿಳೆ
ಹಂಚಿಕೆಯಾದರೆ ಅನುಕೂಲ’ ಐದು ವರ್ಷಗಳಿಂದ ಇಲ್ಲಿ ವಿವಿಧ ತಳಿಗಳ ಸಸಿ ಮಾರುತ್ತಿದ್ದೇನೆ. ಅದರಲ್ಲಿ ಬರುವ ಆದಾಯದಲ್ಲೇ ಬದುಕು ಸಾಗಿಸುತ್ತಿರುವೆ. ವ್ಯಾಪಾರಿ ಮಳಿಗೆಗಳು ಹಂಚಿಕೆಯಾದರೆ ಅನುಕೂಲ–ರಾಮಾ ಸಾತ್ಪುತೆ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.