ADVERTISEMENT

ಬೆಳಗಾವಿ | ವಿಧಾನಮಂಡಲ ಚಳಿಗಾಲದ ಅಧಿವೇಶನ: ಕಾಂಗ್ರೆಸ್‌ ವಲಯದಲ್ಲಿ ಹುರುಪು

ಒಂದು ದಿನ ಮುಂಚಿತವಾಗಿಯೇ ಬಂದ ಸಿ.ಎಂ; ಬೆಳಗಾವಿಗೆ ಅಧಿಕಾರಿಗಳ ದಂಡು

ಇಮಾಮ್‌ಹುಸೇನ್‌ ಗೂಡುನವರ
Published 8 ಡಿಸೆಂಬರ್ 2025, 2:19 IST
Last Updated 8 ಡಿಸೆಂಬರ್ 2025, 2:19 IST
ಬೆಳಗಾವಿಯ ಸುವರ್ಣ ವಿಧಾನಸೌಧ ಆವರಣದಲ್ಲಿ ಮಹಿಳಾ ಕಾರ್ಮಿಕರು ಭಾನುವಾರ ತಮ್ಮ ಕೆಲಸದಲ್ಲಿ ತೊಡಗಿದ್ದರುಪ್ರಜಾವಾಣಿ ಚಿತ್ರ: ರಂಜು ಪಿ.
ಬೆಳಗಾವಿಯ ಸುವರ್ಣ ವಿಧಾನಸೌಧ ಆವರಣದಲ್ಲಿ ಮಹಿಳಾ ಕಾರ್ಮಿಕರು ಭಾನುವಾರ ತಮ್ಮ ಕೆಲಸದಲ್ಲಿ ತೊಡಗಿದ್ದರುಪ್ರಜಾವಾಣಿ ಚಿತ್ರ: ರಂಜು ಪಿ.   

ಬೆಳಗಾವಿ: ಇಲ್ಲಿ ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಒಂದು ದಿನ ಮುಂಚಿತವಾಗಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದ್ದು, ಜಿಲ್ಲಾ ಕಾಂಗ್ರೆಸ್‌ ವಲಯದಲ್ಲಿ ಹುರುಪು ಮೂಡಿಸಿತು.

ಜಿಲ್ಲಾ ಕಾಂಗ್ರೆಸ್‌ನಲ್ಲಿ ಈಗ ಎಲ್ಲವೂ ಸರಿಯಲ್ಲ. ಆದರೆ, ಪಕ್ಷದ ಎಲ್ಲ ಮುಖಂಡರು ತಮ್ಮ ಮನಸ್ತಾಪ ಬದಿಗೊತ್ತಿ, ಸಿ.ಎಂ ಸ್ವಾಗತಕ್ಕೆ ಆಗಮಿಸಿದರು.

ಸಿದ್ದರಾಮಯ್ಯ ಬೆಂಬಲಿಗರು, ಪಕ್ಷದ ನಾಯಕರು ಮೂರ್ನಾಲ್ಕು ದಿನ ಮುಂಚೆಯೇ ಬೆಳಗಾವಿಗೆ ಬಂದು ಠಿಕಾಣಿ ಹೂಡಿದ್ದರು. ಈಗ ರಾಜ್ಯ ರಾಜಕಾರಣದಲ್ಲಿನ ವಿದ್ಯಮಾನ ಮರೆತು, ಅಧಿವೇಶನದಲ್ಲಿ ಭಾಗವಹಿಸಲು ಸಿ.ಎಂ ಕೂಡ ಒಂದು ದಿನ ಮೊದಲೇ ಬಂದಿದ್ದು ಗಮನ ಸೆಳೆಯಿತು.

ADVERTISEMENT

ಕೊನೇ ಹಂತದ ತಯಾರಿ ಜೋರು

ಅಧಿವೇಶನದ ಸಿದ್ಧತೆಗಾಗಿ 130ಕ್ಕೂ ಅಧಿಕ ಕಾರ್ಮಿಕರು ಕಳೆದ 15 ದಿನಗಳಿಂದ ಸೌಧದ ಅಂಗಳದಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾನುವಾರವೂ ಕಾರ್ಮಿಕರು  ತರಾತುರಿಯಲ್ಲೇ ಅಂತಿಮ ಹಂತದ ಕೆಲಸದಲ್ಲಿ ತೊಡಗಿರುವುದು ಕಂಡುಬಂತು. ಕೊನೇ ಹಂತದ ತಯಾರಿ ಜೋರಾಗಿತ್ತು. ಭಾನುವಾರ ರಾತ್ರಿಯವರೆಗೂ ನಗರ ಸೌಂದರ್ಯೀಕರಣ ಕೆಲಸ ಭರದಿಂದ ಸಾಗಿದ್ದವು. 

ರಾರಾಜಿಸಿದ ಕಟೌಟುಗಳು

ಮುಖ್ಯಮಂತ್ರಿ, ಸಚಿವರಿಗೆ ಸ್ವಾಗತ ಕೋರಿ, ಸ್ಥಳೀಯ ನಾಯಕರು ಅಳವಡಿಸಿದ ಕಟೌಟುಗಳು ರಾರಾಜಿಸುತ್ತಿವೆ. ಸುವರ್ಣ ವಿಧಾನಸೌಧಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಮತ್ತು ರಾಜಕಾರಣಿಗಳು ಹೆಚ್ಚಾಗಿ ಸಂಚರಿಸುವ ನಗರದ ಮುಖ್ಯರಸ್ತೆಗಳಲ್ಲಿ ಕಟೌಟುಗಳ ಅಬ್ಬರ ಜೋರಾಗಿದೆ.

ಝಗಮಗಿಸುತ್ತಿದೆ ಶಕ್ತಿಸೌಧ

ಕತ್ತಲಾಗುತ್ತಿದ್ದಂತೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿದರೆ ಸಾಕು; ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿರುವ ಶಕ್ತಿಸೌಧ ಎಲ್ಲರನ್ನೂ ಸೆಳೆಯುತ್ತಿದೆ.

‘ಕಳೆದ ಬಾರಿ ಸುವರ್ಣ ವಿಧಾನಸೌಧವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಿದ್ದೆವು. ಪ್ರತಿ ಶನಿವಾರ ಮತ್ತು ಭಾನುವಾರ ಅದು ಝಗಮಗಿಸುತ್ತಿತ್ತು. ಈಗ ಅಧಿವೇಶನ ಮುಗಿಯುವವರೆಗೂ ವಿದ್ಯುದ್ದೀಪಗಳ ಅಲಂಕಾರದಿಂದ ಕಣ್ಮನ ಸೆಳೆಯಲಿದೆ’ ಎಂದು ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಬಸವರಾಜ ಹಲಗಿ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದ ವಿಧಾನಸಭೆ ಸಭಾಂಗಣದಲ್ಲಿ ಕಾರ್ಮಿಕರು ಅಂತಿಮ ಹಂತದ ಸಿದ್ಧತೆಯಲ್ಲಿ ತೊಡಗಿರುವುದು  ಪ್ರಜಾವಾಣಿ ಚಿತ್ರ: ರಂಜು ಪಿ.

300ರಿಂದ 500 ವಿದ್ಯಾರ್ಥಿಗಳಿಂದ ವೀಕ್ಷಣೆ

‘ನಿತ್ಯ 300ರಿಂದ 500 ವಿದ್ಯಾರ್ಥಿಗಳಿಗೆ ಅಧಿವೇಶನ ವೀಕ್ಷಣೆಗೆ ಅವಕಾಶ ಕಲ್ಪಿಸಲು ತಯಾರಿ ಮಾಡಿಕೊಂಡಿದ್ದೇವೆ. ಆರಂಭದಲ್ಲಿ ವಿಜ್ಞಾನ ಪಾರ್ಕ್‌ ಅನ್ನು ವಿದ್ಯಾರ್ಥಿಗಳು ವೀಕ್ಷಿಸಿದ ನಂತರ ಸೌಧದಲ್ಲಿನ ಆಡಿಟೋರಿಯಂಗೆ ತೆರಳುತ್ತಾರೆ. ಅಲ್ಲಿ ಸಂವಿಧಾನದ ಮಹತ್ವ ಮತ್ತಿತರ ವಿಷಯ ಅರಿಯುತ್ತಾರೆ. ನಂತರ ಹಂತ–ಹಂತವಾಗಿ ಕಲಾಪ ವೀಕ್ಷಿಸುತ್ತಾರೆ’ ಎಂದು ಬೆಳಗಾವಿ ಡಿಡಿಪಿಐ ಲೀಲಾವತಿ ಹಿರೇಮಠ ‘ಪ್ರಜಾವಾಣಿ’ಗೆ ತಿಳಿಸಿದರು.

ನಾನಾ ಕಲಾ ಪ್ರಕಾರಗಳ ಪ್ರದರ್ಶನ 

‘ಸೌಧದ ಮುಂಭಾಗದಲ್ಲಿ ಹಾಕಿರುವ ವೇದಿಕೆಯಲ್ಲಿ ನಿತ್ಯ ಬೆಳಿಗ್ಗೆ 9ರಿಂದ 10ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯಮಟ್ಟದಲ್ಲಿ ಖ್ಯಾತಿ ಗಳಿಸಿದ ಕಲಾವಿದರು ಭರತನಾಟ್ಯ ಕೊಳಲು ವಾದನ ಉತ್ತಮ ಆರೋಗ್ಯಕ್ಕಾಗಿ ಸಂಗೀತದೊಂದಿಗೆ ಯೋಗ ಯಕ್ಷಗಾನ ಡೊಳ್ಳಿನ ಗಾನ ಮತ್ತಿತರ ಕಲಾ ಪ್ರಕಾರ ಪ್ರದರ್ಶಿಸುವರು. ಲೈವ್‌ ಪೇಂಟಿಂಗ್‌ ಕೂಡ ಜನರನ್ನು ಸೆಳೆಯಲಿದೆ’ ಎನ್ನುತ್ತಾರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.