
ಬೆಳಗಾವಿ: ‘ಭಗವಾನ್ ಮಹಾವೀರ ಮತ್ತು ಬಸವಣ್ಣನ ಸಂದೇಶಗಳು ಮೌಢ್ಯತೆ ಹೊಗಲಾಡಿಸಿ, ಸಮ ಸಮಾಜ ನಿರ್ಮಾಣಕ್ಕೆ ಪ್ರೇರಣೆ ತುಂಬಿದವು. ಅವರಿಬ್ಬರೂ ವಿಶ್ವದ ವಿಭೂತಿಪುರುಷರು ಮತ್ತು ಲೋಕಮಾನ್ಯರು’ ಎಂದು ಸಾಹಿತಿ ಪಿ.ಜಿ.ಕೆಂಪಣ್ಣವರ ಹೇಳಿದರು.
ಇಲ್ಲಿನ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಗುರುವಾರ ಆಯೋಜಿಸಿದ್ದ ಅಮಾವಾಸ್ಯೆ ಅನುಭಾವ ಗೋಷ್ಠಿಯಲ್ಲಿ ‘ಮಹಾವೀರರು ಮತ್ತು ಬಸವಣ್ಣನವರ ತೌಲನಿಕ ವಿವೇಚನೆ’ ವಿಷಯ ಕುರಿತು ಉಪನ್ಯಾಸ ನೀಡಿದರು.
‘ಬಸವಣ್ಣನ ಪೂರ್ವದಲ್ಲೇ ಸಮಾಜದಲ್ಲಿನ ಮೌಢ್ಯತೆ, ಹಿಂಸೆಯನ್ನು ಮಹಾವೀರರು ವಿರೋಧಿಸಿದರು. ಬಸವಣ್ಣ ಕೂಡ ಮಾನವನ ಬದುಕಿನ ದರ್ಶನ, ಅಂತರಂಗ ಹಾಗೂ ಬಹಿರಂಗದ ಶುದ್ಧತೆ ವ್ಯಾಖ್ಯಾನಿಸಿದರು. ದಯವೇ ಧರ್ಮದ ಮೂಲ ಎಂದು ತಿಳಿದು, ಧರ್ಮದ ತಿರುಳು ಮನವರಿಕೆ ಮಾಡಿದರು. ಇಬ್ಬರೂ ಮಾನವತೆ ಬೀಜ ಬಿತ್ತಿ ಬೆಳೆದರು. ಆದರೆ, ಇಂದು ನಾವು ಮಹಾತ್ಮರ ಹೆಸರಿನಲ್ಲಿ ಧರ್ಮದ ಧ್ವಜ ಹಾರಿಸಿ ವಿಕೃತಿ ಮೆರೆಯುತ್ತಿರುವುದು ಬೇಸರದ ಸಂಗತಿ’ ಎಂದು ವಿಷಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ‘ಲೋಕೋದ್ಧಾರಕರಾಗಿದ್ದ ಇಬ್ಬರೂ ಮಹಾತ್ಮರು ಜನರಿಗೆ ಬದುಕಿನ ಸತ್ಯ ಮನವರಿಕೆ ಮಾಡಿಕೊಟ್ಟವರು’ ಎಂದರು.
ಸಾನ್ನಿಧ್ಯ ವಹಿಸಿದ್ದ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, ‘ಈ ಜಗತ್ತಿನ ಎಲ್ಲ ಧರ್ಮಗಳ ದಾರ್ಶನಿಕರನ್ನು ಅರಿತುಕೊಳ್ಳುವ ಮನಸ್ಥಿತಿ ನಮ್ಮದಾಗಬೇಕು. ಮಹಾವೀರರು ವಿಶ್ವಕ್ಕೆ ನೀಡಿದ ಕೊಡುಗೆ ಅಪಾರ. ಅಂತೆಯೇ ಬಸವಣ್ಣನ ದರ್ಶನವೂ ಮೇರುಶಿಖರ. ಆದರೆ, ನಾವು ಮಹಾತ್ಮರ ದರ್ಶನ ಸಾರ ಅರಿಯುತ್ತಿಲ್ಲ. ಧರ್ಮ ಧರ್ಮಗಳ ಮಧ್ಯೆ ಸಂಘರ್ಷ ಹುಟ್ಟುಹಾಕುತ್ತಿದ್ದೇವೆ’ ಎಂದು ಕಳವಳ ವ್ಯಕ್ತಪಡಿಸಿದರು.
ಎಫ್.ವಿ.ಮಾನ್ವಿ, ಎಚ್.ಬಿ.ರಾಜಶೇಖರ, ಆರ್.ಪಿ.ಪಾಟೀಲ, ಜ್ಯೋತಿ ಬದಾಮಿ, ಎಂ.ವೈ.ಮೆಣಸಿನಕಾಯಿ, ಶಂಕರ ಪಟ್ಟೇದ, ಪ್ರಸಾದ ಹಿರೇಮಠ, ವಿ.ಕೆ.ಪಾಟೀಲ, ರಮೇಶ ಕಳಸಣ್ಣವರ, ಪ್ರಕಾಶ ಬಾಳೇಕುಂದ್ರಿ, ಮಹೇಶ ಗುರನಗೌಡರ ಉಪಸ್ಥಿತರಿದ್ದರು
ವಿದ್ಯಾ ಸವದಿ ಅತಿಥಿ ಪರಿಚಯಿಸಿದರು. ಸುನಂದಾ ಹಾಲಬಾವಿ ವಚನ ವಿಶ್ಲೇಷಿಸಿದರು. ಶೈಲಾ ಸಂಸುದ್ದಿ ಸ್ವಾಗತಿಸಿದರು. ಗಾಯತ್ರಿ ಕೆಂಪಣ್ಣವರ ನಿರೂಪಿಸಿದರು. ಸರೋಜನಿ ನಿಶಾನದಾರ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.