ADVERTISEMENT

ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರ್ಣಯ

‘ಲಕ್ಷ ಹಳ್ಳಿಗಳಲ್ಲಿ ಸಾವಯವ ಜಾಗೃತಿ ಅಭಿಯಾನ’

​ಪ್ರಜಾವಾಣಿ ವಾರ್ತೆ
Published 30 ಜನವರಿ 2023, 15:52 IST
Last Updated 30 ಜನವರಿ 2023, 15:52 IST
   

ಬೆಳಗಾವಿ: ‘ಸಾವಯವ ಕೃಷಿಗೆ ಆದ್ಯತೆ ನೀಡಲು ದೇಶದ ಒಂದು ಲಕ್ಷ ಹಳ್ಳಿಗಳಲ್ಲಿ ಜಾಗೃತಿ ಅಭಿಯಾನ ನಡೆಸಬೇಕು ಎಂಬುದೂ ಸೇರಿದಂತೆ, ಹಲವು ಮಹತ್ವದ ನಿರ್ಣಯಗಳನ್ನು ಬಿಜೆಪಿ ರೈತ ಮೋರ್ಚಾ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ’ ಎಂದು ಪಕ್ಷದ ರೈತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ರಾಜಕುಮಾರ ಚಾಹರ್ ಹೇಳಿದರು.

ಕಾರ್ಯಕಾರಿಣಿ ಸಭೆ ಮುಗಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಎರಡು ದಿನ ನಡೆದ ಕಾರ್ಯಕಾರಿಣಿ ಸಭೆ ಯಶಸ್ವಿಯಾಗಿದೆ. ರೈತರ ಕಲ್ಯಾಣಕ್ಕಾಗಿ ಹಲವು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ’ ಎಂದರು.

‘ರಾಸಾಯನಿಕ ಗೊಬ್ಬರ ಹಾಗೂ ಕ್ರಿಮಿನಾಶಕ ಬಳಸುವುದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು 2023ನೇ ವರ್ಷವನ್ನು ‘ಸಿರಿಧಾನ್ಯಗಳ ವರ್ಷ’ ಎಂದು ಘೋಷಿಸಿದ್ದಾರೆ. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸಲಾಗುವುದು’ ಎಂದರು.

ADVERTISEMENT

‘ರೈತ ಮೋರ್ಚಾ ಪದಾಧಿಕಾರಿಗಳಿಗೆ ದೆಹಲಿಯಲ್ಲಿ ಸಾವಯವ ಕೃಷಿ ಹಾಗೂ ಸಿರಿಧಾನ್ಯಗಳನ್ನು ಬೆಳೆಯುವ ಬಗ್ಗೆ ತರಬೇತಿ ನೀಡಲಾಗುವುದು. ಉತ್ತರ ಪ್ರದೇಶದ ಗಂಗಾ ನದಿಯ ದಡದಲ್ಲಿರುವ ಶುಕ್ರತಾಲ್ ಎಂಬಲ್ಲಿ ಫೆಬ್ರುವರಿ ಕೊನೆಯ ವಾರದಲ್ಲಿ ಅಭಿಯಾನಕ್ಕೆ ಪ್ರಧಾನಿ ಚಾಲನೆ ನೀಡುವರು’ ಎಂದರು.

‘ಕೇಂದ್ರ ಸರ್ಕಾರದ ರೈತ ಪರ ಯೋಜನೆಗಳನ್ನು ಹಳ್ಳಿಯ ಜನರಿಗೆ ತಲುಪಿಸಲಾಗುವುದು. 2024ರ ಮೇ ಅಂತ್ಯಕ್ಕೆ ದೇಶದ ಪ್ರತಿ ರೈತರಿಗೂ ಯೋಜನೆಗಳ ಮಾಹಿತಿ ತಲುಪಿಸುವ ಗುರಿ ಇದೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಜತೆಜತೆಗೇ, ವಿಷರಹಿತ ಆಹಾರದ ಬಗ್ಗೆಯೂ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ’ ಎಂದೂ ಹೇಳಿದರು.

ಕೃಷಿ ಸಚಿವ ಬಿ.ಸಿ. ‍ಪಾಟೀಲ ಮಾತನಾಡಿ, ‘ರಾಜ್ಯದಲ್ಲಿ ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ ₹15 ಸಾವಿರ ಧನ ಸಹಾಯ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತರಲಾಗುವುದು’ ಎಂದರು.

‘ರಾಜ್ಯದಲ್ಲಿ ₹383 ಕೋಟಿ ಡಿಸೇಲ್‌ ನೆರವು ಧನ ನೀಡಲಾಗುತ್ತಿದೆ. ಧಾರವಾಡದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದನ್ನು ವಿತರಣೆ ಮಾಡುವರು’ ಎಂದರು.

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ, ಕೃಷಿ ಸಚಿವ ಬಿ.ಸಿ. ಪಾಟೀಲ, ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯ ಎನ್.ರವಿಕುಮಾರ, ದೇಶದ ವಿವಿಧ ರಾಜ್ಯಗಳ ರೈತ ಮೋರ್ಚಾ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.