ಬಿಜೆಪಿಯಿಂದ ಜನಾಕ್ರೋಶ ಯಾತ್ರೆ
ಬೆಳಗಾವಿ: ಅಗತ್ಯ ವಸ್ತುಗಳ ಬೆಲೆ ಏರಿಕೆ, ಮುಸ್ಲಿಂ ಓಲೈಕೆ ಹಾಗೂ ಪರಿಶಿಷ್ಟರ ಹಣ ಲೂಟಿ ಆರೋಪದಡಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಗರದಲ್ಲಿ ಬಿಜೆಪಿಯವರು ಬುಧವಾರ ಎರಡನೇ ಹಂತದ ಜನಾಕ್ರೋಶ ಯಾತ್ರೆ ನಡೆಸಿದರು.
ಮೊದಲ ಹಂತದ ಯಾತ್ರೆ ಸಫಲವಾದ ಹಿನ್ನೆಲೆಯಲ್ಲಿ ಎರಡನೇ ಹಂತದ ಯಾತ್ರೆಗೆ ಪಕ್ಷದ ನಾಯಕರು ಹುಮ್ಮಸ್ಸಿನಿಂದ ಧುಮುಕಿದರು.
ಇಲ್ಲಿನ ಬಸವೇಶ್ವರ ವೃತ್ತದ ಬಳಿ ಇರುವ ವೇದಿಕೆಯಿಂದ ಆರಂಭಗೊಂಡ ಯಾತ್ರೆ, ಶಹಾಪುರದ ನಾಥಪೈ ವೃತ್ತದ ಮಾರ್ಗವಾಗಿ ಸಾಗಿ ಶಿವಾಜಿ ಉದ್ಯಾನ ತಲುಪಿತು.
ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಕಾರ್ಯಕರ್ತರು, ಬಿಸಿಲಲ್ಲೂ ಉತ್ಸಾಹದಿಂದ ಹೆಜ್ಜೆಹಾಕಿದರು. ‘ಕಾಂಗ್ರೆಸ್ ಸರ್ಕಾರ 50ಕ್ಕೂ ಅಧಿಕ ಅಗತ್ಯ ವಸ್ತುಗಳ ಬೆಲೆ ಹೆಚ್ಚಿಸಿ, ಬಡವರು ಮತ್ತು ಮಧ್ಯಮ ವರ್ಗದ ಜನರ ಗಾಯದ ಮೇಲೆ ಬರೆ ಎಳೆದಿದೆ’ ಎಂದು ದೂರಿದರು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ, ಸಂಸದರಾದ ಜಗದೀಶ ಶೆಟ್ಟರ್, ಗೋವಿಂದ ಕಾರಜೋಳ, ಶಾಸಕರಾದ ಅಭಯ ಪಾಟೀಲ, ಬಾಲಚಂದ್ರ ಜಾರಕಿಹೊಳಿ, ನಿಖಿಲ್ ಕತ್ತಿ, ದುರ್ಯೋಧನ ಐಹೊಳೆ, ಮುಖಂಡರಾದ ಬಿ.ಶ್ರೀರಾಮುಲು, ಅನಿಲ ಬೆನಕೆ, ಪಿ.ರಾಜೀವ್ ಮತ್ತಿತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.