ADVERTISEMENT

ಖೇಮಲಾಪುರ ಸುತ್ತಮುತ್ತಲಿನ ನಿವಾಸಿಗಳಿಗೆ ಆಸರೆಯಾದ ಸಿಹಿನೀರಿನ ಬೋರ್‌ವೆಲ್‌

​ಪ್ರಜಾವಾಣಿ ವಾರ್ತೆ
Published 15 ಮೇ 2019, 9:14 IST
Last Updated 15 ಮೇ 2019, 9:14 IST
ಖೇಮಲಾಪುರದಲ್ಲಿರುವ ಕೊಳವೆಬಾವಿಯಲ್ಲಿ ನೀರಿಗಾಗಿ ಸ್ಥಳೀಯರು ಮುಗಿಬೀಳುವ ದೃಶ್ಯ ಸಾಮಾನ್ಯವಾಗಿರುತ್ತದೆ
ಖೇಮಲಾಪುರದಲ್ಲಿರುವ ಕೊಳವೆಬಾವಿಯಲ್ಲಿ ನೀರಿಗಾಗಿ ಸ್ಥಳೀಯರು ಮುಗಿಬೀಳುವ ದೃಶ್ಯ ಸಾಮಾನ್ಯವಾಗಿರುತ್ತದೆ   

ಖೇಮಲಾಪುರ: ಕೃಷ್ಣಾ ನದಿ ತೀರದಲ್ಲಿರುವ ಖೇಮಲಾಪುರ ಗ್ರಾಮದಲ್ಲಿರುವ ಸಿಹಿ ನೀರಿನ ಕೊಳವೆಬಾವಿ ಜನರಿಗೆ ಕುಡಿಯುವ ನೀರಿನ ಪ್ರಮುಖ ಆಸರೆಯಾಗಿದೆ.

ಬೇಸಿಗೆ ಕಾಲದಲ್ಲಿ ಕೃಷ್ಣಾ ನದಿ ಬತ್ತಿದ ಸಂದರ್ಭದಲ್ಲಿ ನೀರಿಗೆ ಹಾಹಾಕಾರ ಉಂಟಾಗುತ್ತದೆ. ಈ ಭಾಗದ ಬಾವಿ, ಕೊಳವೆಬಾವಿಗಳು ಬತ್ತಿ ಹೋಗುತ್ತವೆ. ಅಂತರ್ಜಲ ಮಟ್ಟ ತೀವ್ರ ಕುಸಿತ ಕಾಣುತ್ತದೆ. ಆದರೆ, ಈ ಕೊಳವೆಬಾವಿ ಬರಗಾಲದ ನಡುವೆಯೂ ಸಾವಿರಾರು ಜನರ ದಾಹ ನೀಗಿಸುತ್ತಿದೆ. ಖೇಮಲಾಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳಾದ ಸಿದ್ದಾಪುರ, ಯಲ್ಪಾರಟ್ಟಿ, ಪರಮಾನಂದವಾಡಿ, ಶಿರಗೂರ, ಅಥಣಿ ತಾಲ್ಲೂಕಿನ ಕಿತ್ತೂರ, ಸಪ್ತಸಾಗರದವರೂ ಈ ನೀರಿಗಾಗಿ ಕೊಡಗಳೊಂದಿಗೆ ಬರುತ್ತಾರೆ.

ಈ ಭಾಗದಲ್ಲಿ ಕೊರೆದಿರುವ ಬೋರ್‌ವೆಲ್‌ಗಳಲ್ಲಿ ದೊರೆಯುವ ನೀರು ಸಾಮಾನ್ಯವಾಗಿ ಸಪ್ಪೆಯಾಗಿರುತ್ತದೆ. ಆದರೆ, ಈ ಕೊಳವೆಬಾವಿಯಲ್ಲಿ ಸಿಹಿ ನೀರು ದೊರೆಯುತ್ತಿರುವುದು ವಿಶೇಷ. ಸಿದ್ಧಾರೂಢ ಮಠ ಹಾಗೂ ಯಮನೂರಪ್ಪನ ದರ್ಗಾ ಆವರಣದಲ್ಲಿ ಇದ್ದು, ಎರಡೂ ಧರ್ಮೀಯರಿಗೂ ನೀರುಣಿಸುತ್ತಿದೆ.

ADVERTISEMENT

ಸರ್ಕಾರದಿಂದ ಗ್ರಾಮದ ವಿವಿಧ ಮೂರು ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಶೇ 75ರಷ್ಟು ಮಂದಿ ಕುಡಿಯುವ ನೀರಿಗಾಗಿ ಈ ಕೊಳವೆಬಾವಿಗೇ ಬರುತ್ತಾರೆ. ಸಿಹಿ ನೀರು ದೊರೆಯುತ್ತದೆ ಎನ್ನುವುದು ಇದಕ್ಕೆ ಕಾರಣ. ಬೇಸಿಗೆಯಲ್ಲಿ ಮಾತ್ರವಲ್ಲದೇ, ಎಲ್ಲ ಋತುಗಳಲ್ಲೂ ಜನರು ಇಲ್ಲಿಂದ ನೀರು ತೆಗೆದುಕೊಂಡು ಹೋಗುತ್ತಾರೆ. ಇದನ್ನು ಕುಡಿದರಷ್ಟೇ ಅವರಿಗೆ ಸಂತೃಪ್ತಿಯಂತೆ. ಇದು ನಿತ್ಯ 18 ತಾಸುಗಳವರೆಗೆ ಜನರು ನೀರು ಒಯ್ಯುತ್ತಲೇ ಇರುತ್ತಾರೆ.

‘ಈ ಕೊಳವೆಬಾವಿ ನಮ್ಮೂರಿನ ಹಿರಿಮೆ ಎತ್ತರಕ್ಕೇರಿಸಿದೆ. ಶುದ್ಧ ಕುಡಿಯುವ ನೀರಿನ ಘಟಕಗಳು ಬರುವುದಕ್ಕಿಂತ ಪೂರ್ವದಿಂದಲೂ ಒಳ್ಳೆಯ ನೀರು ಕೊಡುತ್ತಿದೆ. ಇದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ಜನರ ಮೇಲಿದೆ’ ಎನ್ನುತ್ತಾರೆ ನಿವಾಸಿ ಎ.ಕೆ. ಜಯವೀರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.