ADVERTISEMENT

ರೈತ ಕುಲದ ಅಸ್ತಿತ್ವಕ್ಕಾಗಿ ನಡೆಯುತ್ತಿದೆ ಹೋರಾಟ: ಚುಕ್ಕಿ ನಂಜುಂಡಸ್ವಾಮಿ

ರೈತ ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2021, 9:38 IST
Last Updated 13 ಮಾರ್ಚ್ 2021, 9:38 IST
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಶನಿವಾರ ರೈತ ಸಂಘದ ಪದಾಧಿಕಾರಿಗಳ ಸಭೆ ನಡೆಯಿತು
ಬೆಳಗಾವಿಯ ಪ್ರವಾಸಿ ಮಂದಿರದಲ್ಲಿ ಶನಿವಾರ ರೈತ ಸಂಘದ ಪದಾಧಿಕಾರಿಗಳ ಸಭೆ ನಡೆಯಿತು   

ಬೆಳಗಾವಿ: ‘ಕೃಷಿಗೆ ಸಂಬಂಧಿಸಿದ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟ ದೇಶದಾದ್ಯಂತ ರೈತ ಕುಲದ ಅಸ್ತಿತ್ವ ಉಳಿಸಿಕೊಳ್ಳುವ ಉದ್ದೇಶದ್ದೇ ಹೊರತು, ಸರ್ಕಾರದ ವಿರುದ್ಧದ ಅಥವಾ ಕಾಂಗ್ರೆಸ್‌ ಪರವಾದುದಲ್ಲ’ ಎಂದು ರೈತ ಸಂಘದ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಸ್ಪಷ್ಟಪಡಿಸಿದರು.

ಇಲ್ಲಿನ ಪ್ರವಾಸಿಮಂದಿರದಲ್ಲಿ ರೈತ ಸಂಘದ ಮುಖಂಡರ ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಇದು ಕೇವಲ ರೈತ ಸಂಘದ ಹೋರಾಟವಲ್ಲ. ಇಡೀ ಸಮಾಜದ ಚಳವಳಿಯಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಎಲ್ಲರಿಗೂ ತೊಂದರೆಯಾಗಿಲ್ಲವೇ?’ ಎಂದು ಕೇಳಿದರು.

‘ಉತ್ತರ ಭಾರತದಲ್ಲಿ ರೈತರು ನಡೆಸುತ್ತಿರುವ ಚಳವಳಿಗೆ ಸರ್ಕಾರ ಎಷ್ಟರ ಮಟ್ಟಿಗೆ ಸ್ಪಂದಿಸಿದೆ ಎನ್ನುವುದು ದೇಶದ ಜನರಿಗೆ ಗೊತ್ತಾಗಿದೆ. ಕೊರೆಯುವ ಚಳಿಯಲ್ಲೂ ದೆಹಲಿಯ ಗಡಿಗಳಲ್ಲಿ ಅವರು ಚಳವಳಿ ಮಾಡುತ್ತಿದ್ದಾರೆ. 230 ಮಂದಿ ಅಲ್ಲಿನ ವಾತಾವರಣ ತಾಳಲಾರದೆ ಪ್ರಾಣ ತ್ಯಾಗ ಮಾಡಿದ್ದಾರೆ. ಬೇರೆ ಬೇರೆ ಸ್ವರೂಪದಲ್ಲಿ ಹೋರಾಟ ಮುಂದುವರಿದರೂ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಆದರೆ, ಹತ್ತಿಕ್ಕುವ ಪ್ರಯತ್ನವನ್ನು ಮಾಡುತ್ತಲೇ ಬಂದಿದೆ’ ಎಂದು ದೂರಿದರು.

ADVERTISEMENT

ನೇರ ಹೊಡೆತ ಕೊಟ್ಟಿದೆ:

‘ಕೃಷಿಗೆ ಸಂಬಂಧಿಸಿದ ಕಾಯ್ದೆಗಳಿಗೆ ತಿದ್ದುಪಡಿ ತಂದು ರೈತರಿಗೆ ನೇರ ಹೊಡೆತವನ್ನು ಸರ್ಕಾರ ನೀಡಿದೆ. ರೈತರೊಂದಿಗೆ ಕಾರ್ಮಿಕ ಸೇರಿದಂತೆ ವಿವಿಧ ಸಂಘಟನೆಗಳು ದನಿ ಎತ್ತುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಚಳವಳಿ ನಡೆಸುತ್ತಿರುವವರ ರೈತರಲ್ಲ, ಅವರಿಗೆ ಹಣ ಎಲ್ಲಿಂದ ಬರುತ್ತಿದೆ ಎಂಬಿತ್ಯಾದಿ ಮಾತುಗಳ ಮೂಲಕ ಅಪಪ್ರಚಾರ ಮಾಡಲಾಗುತ್ತಿದೆ. ಚಳವಳಿ ಹತ್ತಿಕ್ಕಲು ಪ್ರಯತ್ನಿಸಿ, ವಿಫಲವಾಗಿದೆ. ದೇಶದ ವಿವಿಧೆಡೆ ನಡೆಯುತ್ತಿರುವ ಕಿಸಾನ್ ಮಹಾಪಂಚಾಯತ್‌ಗಳಲ್ಲಿ ಲಕ್ಷಾಂತರ ಮಂದಿ ಪಾಲ್ಗೊಳ್ಳುತ್ತಿರುವುದು ಚಳವಳಿಯ ಗಟ್ಟಿತನವನ್ನು ತೋರಿಸುತ್ತಿದೆ’ ಎಂದರು.

‘ಇದು ಕೇವಲ ಉತ್ತರ ಭಾರತದ ಚಳವಳಿ ಮಾತ್ರವಲ್ಲ; ಇಡೀ ದೇಶದ ರೈತರ ಹಿತಾಸಕ್ತಿಯ ಹೋರಾಟವಾಗಿದೆ. ರೈತರ ಆತ್ಮಹತ್ಯೆ ಸರಣಿ ನಡೆಯುತ್ತಿದ್ದರೂ ಸರ್ಕಾರ ನಾಟಕೀಯ ಮಾತುಗಳನ್ನಾಡುತ್ತಾ ದುರಹಂಕಾರದ ನಡವಳಿಕೆ ಪ್ರದರ್ಶಿಸುತ್ತಿದೆ. ಇದಕ್ಕಾಗಿ ರೈತ ಸಂಘ ಸೇರಿದಂತೆ ಹಲವು ಸಂಘಗಳು ಸೇರಿ ದಕ್ಷಿಣ ಭಾರತಕ್ಕೂ ಚಳವಳಿಯನ್ನು ವಿಸ್ತರಿಸುತ್ತಿದ್ದೇವೆ. ಮೊದಲಿಗೆ ರಾಜ್ಯದ ಮೂರು ಕಡೆಗಳಲ್ಲಿ ರೈತರ ಮಹಾಪಂಚಾಯತ್‌ಗಳನ್ನು ನಡೆಸಲಾಗುತ್ತಿದೆ. ರೈತರ ಉಳಿವಿಗಾಗಿ ಈ ಹೋರಾಟ ಅನಿವಾರ್ಯವಾಗಿದೆ’ ಎಂದು ತಿಳಿಸಿದರು.

ಸಂಘದ ಉತ್ತರ ಕರ್ನಾಟಕದ ಗೌರವ ಅಧ್ಯಕ್ಷ ಶಶಿಕಾಂತ ಪಡಿಸಲಗಿ, ‘ಜಿಲ್ಲಾಡಳಿತ ಯಾವುದೇ ಸ್ಥಳ ನೀಡುತ್ತಿಲ್ಲ. ಚನ್ನಮ್ಮ ವೃತ್ತದಲ್ಲೂ ಅವಕಾಶ ಕೊಡದಿದ್ದರೆ ಜೈಲ್ ಭರೋ ಚಳವಳಿ ಆಗಬಹುದು. ರೈತ ಸಂಘದ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡುತ್ತೇವೆ’ ಎಂದರು.

ಸಮನ್ವಯ ಸಮಿತಿ ಸದಸ್ಯ ಶಿವರಾಯಪ್ಪ ಜೋಗಿನ, ಮುಖಂಡರಾದ ಸಿದಗೌಡ ಮೋದಗಿ, ಮಂಜು ಕಿರಣ್, ಚೂನಪ್ಪ ಪೂಜಾರಿ, ಜಯಶ್ರೀ ಗುರನ್ನವರ, ಶಿವಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.