ADVERTISEMENT

ಟಿವಿ, ಮೊಬೈಲ್‌ನಿಂದ ಮಕ್ಕಳು ದೂರವಿರಲಿ: ಚಂದ್ರಶೇಖರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 6:15 IST
Last Updated 14 ಫೆಬ್ರುವರಿ 2026, 6:15 IST
ರಾಮದುರ್ಗ ತಾಲ್ಲೂಕಿನ ಚಿಕ್ಕತಡಸಿ ಗ್ರಾಮದಲ್ಲಿ ನಿರ್ಮಿಸಿದ ನೂತನ ಸಮುದಾಯ ಭವನ ಕಟ್ಟಡವನ್ನು ಮುಳ್ಳೂರು ಮಠದ ಚಂದ್ರಶೇಖರ ಸ್ವಾಮೀಜಿ ಉದ್ಘಾಟಿಸಿದರು
ರಾಮದುರ್ಗ ತಾಲ್ಲೂಕಿನ ಚಿಕ್ಕತಡಸಿ ಗ್ರಾಮದಲ್ಲಿ ನಿರ್ಮಿಸಿದ ನೂತನ ಸಮುದಾಯ ಭವನ ಕಟ್ಟಡವನ್ನು ಮುಳ್ಳೂರು ಮಠದ ಚಂದ್ರಶೇಖರ ಸ್ವಾಮೀಜಿ ಉದ್ಘಾಟಿಸಿದರು   

ರಾಮದುರ್ಗ: ಮುಂಚಿನ ದಿನಗಳಲ್ಲಿ ಮನೆಗೆ ನೆಂಟರು ಬಂದರೆ ಆತ್ಮೀಯವಾಗಿ ಸ್ವಾಗತಿಸಿ ಕುಶಲೋಪರಿ ವಿಚಾರಿಸುತ್ತಿದ್ದರು. ಈಗೀಗ ಮನೆಗೆ ನೆಂಟರು, ಸ್ನೇಹಿತರು ಬಂದರೆ ಟಿವಿ ಇಲ್ಲವೇ ಮೊಬೈಲ್‌ ನೋಡುವಲ್ಲಿಯೇ ಮಗ್ನರಾಗಿರುತ್ತಾರೆ. ಮಕ್ಕಳು ಇದರಿಂದ ಹೊರತಾಗಿಲ್ಲ. ಈ ಗೀಳಿನಿಂದ ಎಲ್ಲರೂ ಹೊರಬರಬೇಕಿದೆ ಎಂದು ಮುಳ್ಳೂರು ಮಠದ ಚಂದ್ರಶೇಖರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಚಿಕ್ಕತಡಸಿ ಗ್ರಾಮದಲ್ಲಿ ದ್ಯಾಮವ್ವದೇವಿ ಸಮುದಾಯ ಭವನ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಟಿವಿ, ಮೊಬೈಲ್‌ ನೋಡುವಲ್ಲಿ ಸಮಯ ಕಳೆಯುತ್ತಿದ್ದಾರೆ. ಟಿವಿ, ಮೊಬೈಲ್‌ ತೊರೆದು ಉತ್ತಮ ಶಿಕ್ಷಣ, ಸಂಸ್ಕಾರ ನೀಡಲು ಮುತುವರ್ಜಿ ವಹಿಸಬೇಕು ಎಂದು ತಿಳಿಸಿದರು.

ಗ್ರಾಮದ ದೈವ ಮಂಡಳಿಯ ಹಣ, ಸಂಸದರ ಅನುದಾನ ಬಳಕೆ ಮಾಡಿಕೊಂಡು ಸುಂದರ ಸಮುದಾಯ ಭವನ ನಿರ್ಮಾಣ ಮಾಡಿರುವುದು ಶ್ಲಾಘನೀಯವಾಗಿದೆ. ಸಮುದಾಯ ಭವನ ಉತ್ತಮ ಕಾರ್ಯಗಳಿಗೆ ಬಳಕೆಯಾಗಬೇಕು. ದ್ಯಾಮಮ್ಮದೇವಿ ದೇವಸ್ಥಾನ, ಸಮುದಾಯ ಭವನದ ಸುತ್ತಮುತ್ತ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.

ADVERTISEMENT

ಬಿಜೆಪಿ ಮುಖಂಡ ಬಸವರಾಜ ಸೋಮಗೊಂಡ ಮಾತನಾಡಿ, ಇಲ್ಲಿನ ಸದ್ಭಕ್ತ ಮಂಡಳಿ ಮತ್ತು ಗ್ರಾಮಸ್ಥರು ತನು, ಮನ, ಧನದಿಂದ ಸೇವೆ ಸಲ್ಲಿಸಿದ ಪ್ರಯುಕ್ತ ಭವ್ಯ ಸಮುದಾಯ ಭವನ ನಿರ್ಮಾಣವಾಗಿದೆ ಎಂದರು.

ಗ್ರಾಮದ ಹಿರಿಯ ಮುಖಂಡ ಭೀಮಪ್ಪ ಹರನಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಬೈಲಪ್ಪ ಮುಳ್ಳೂರ, ಗೌಡಪ್ಪಗೌಡ ಪಾಟೀಲ ಮಾತನಾಡಿದರು.

ಭೀರದೇವರ ಪೂಜಾರಿ ಭೀಮಪ್ಪ ಮುರಗನ್ನವರ ಮುಖಂಡರಾದ ಐ.ಎಸ್. ಹರನಟ್ಟಿ, ಶಿವಯೋಗಿ ಗೊಂದಿ, ಹಣಮರಡ್ಡಿ ಗೊಂದಿ, ಹಣಮಂತ ಹಳ್ಳಿ, ಬಸವರಾಜ ಹಳ್ಳಿ, ನಾಗನಗೌಡ ಕುಲಕರ್ಣಿ, ಬಾಳನಗೌಡ ಕುಲಕರ್ಣಿ, ಮಂಜು ಬುಳ್ಳನ್ನವರ, ಬಸಪ್ಪ ಮುಳ್ಳೂರ, ಶಿವಪ್ಪ ಮುಳ್ಳೂರ ಇದ್ದರು.

ರವಿ ಮಿಲಾನಟ್ಟಿ ಸ್ವಾಗತಿಸಿದರು. ಈರಣ್ಣ ಹರನಟ್ಟಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.