ADVERTISEMENT

ಮಹದಾಯಿ: ಜಂಟಿ ಸಮಿತಿಯಿಂದ ವರದಿ ಸಿದ್ಧ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2021, 14:38 IST
Last Updated 26 ಮಾರ್ಚ್ 2021, 14:38 IST
ಮಹದಾಯಿ ಯೋಜನೆ ನಕ್ಷೆ
ಮಹದಾಯಿ ಯೋಜನೆ ನಕ್ಷೆ   

ಖಾನಾಪುರ (ಬೆಳಗಾವಿ): ಮಹದಾಯಿ ನದಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ ಸೂಚನೆಯಂತೆ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದ ನೀರಾವರಿ ಇಲಾಖೆಗಳ ಮೂವರು ಅಧಿಕಾರಿಗಳ ಜಂಟಿ ಪರಿಶೀಲನಾ ಸಮಿತಿಯು ಕಳಸಾ ಬಂಡೂರಿ ಯೋಜನಾ ಪ್ರದೇಶವಾದ ತಾಲ್ಲೂಕಿನ ಕಣಕುಂಬಿಗೆ ಶುಕ್ರವಾರ 2ನೇ ಬಾರಿಗೆ ಭೇಟಿ ನೀಡಿತು. ರಾಜ್ಯ ಸರ್ಕಾರದಿಂದ ಕೈಗೊಂಡಿರುವ ಕಳಸಾ ಕಾಲುವೆಯ ಸದ್ಯದ ಪರಿಸ್ಥಿತಿಯ ಕುರಿತು ವರದಿ ಸಿದ್ಧಪಡಿಸಿತು.

ಕರ್ನಾಟಕವು ಈಗಾಗಲೇ ಕಳಸಾ ನೀರನ್ನು ತಿರುಗಿಸಿಕೊಂಡಿದೆ ಎಂಬ ಗೋವಾದ ಆರೋಪದ ಹಿನ್ನೆಲೆಯಲ್ಲಿ ಜಂಟಿ ಸಮಿತಿ ರಚಿಸಿ ಪರಿಶೀಲಿಸಲು ಮತ್ತು 4 ವಾರಗಳಲ್ಲಿ ವರದಿ ಸಲ್ಲಿಸಬೇಕು ಎಂಬ ಸುಪ್ರೀಂ ಕೋರ್ಟ್‌ ಆದೇಶದ ಪ್ರಕಾರ ಈ ಪ್ರಕ್ರಿಯೆ ನಡೆಯಿತು.

ಎಸ್‌ಇಗಳಾದ ಕರ್ನಾಟಕದ ನವಿಲುತೀರ್ಥ ಜಲಾಶಯದ ಕೃಷ್ಣೋಜಿರಾವ್, ಗೋವಾದ ಎಂ.ಕೆ. ಪ್ರಸಾದ್‌ ಮತ್ತು ಮಹಾರಾಷ್ಟ್ರದ ವಿಜಯಕುಮಾರ ಥೋರಟ್ ಅವರಿದ್ದ ಸಮಿತಿಯು ಹೋದ ವಾರವೂ ಭೇಟಿ ನೀಡಿತ್ತು. ಆದರೆ, ಗೋವಾ ಪ್ರತಿನಿಧಿಸಿದ್ದ ಎಸ್‌ಇ ಎಂ.ಕೆ ಪ್ರಸಾದ್‌ ಮತ್ತು ಅವರ ಬೆಂಬಲಿಗರು ಎನ್ನಲಾದ ಕೆಲವರು ಕಣಕುಂಬಿಯಲ್ಲಿ ಕರ್ನಾಟಕ ಪೊಲೀಸರು ಮತ್ತು ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದರು. ಪರಿಣಾಮ ಗೊಂದಲ ಉಂಟಾಗಿ ಸಭೆ ಅಪೂರ್ಣಗೊಂಡಿತ್ತು. ಹೀಗಾಗಿ ಸದಸ್ಯರು ಮತ್ತೊಮ್ಮೆ ಭೇಟಿ ಕೊಟ್ಟರು.

ADVERTISEMENT

‘ಸಮಿತಿಗೆ ಮಹದಾಯಿ, ಕಳಸಾ ಯೋಜನೆಯ ಕಾಮಗಾರಿ ಬಗ್ಗೆ ಅಗತ್ಯ ಮಾಹಿತಿ ನೀಡಲಾಗಿದೆ. ನ್ಯಾಯಾಲಯದ ಸೂಚನೆಯಂತೆ ಸಮಿತಿಯ ಭೇಟಿ ಮತ್ತು ಅವರ ಸ್ಥಳ ಪರಿಶೀಲನೆಯ ವರದಿ ಸಿದ್ಧಪಡಿಸಲು ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿ ನೀಡಲು ಆಗುವುದಿಲ್ಲ’ ಎಂದು ಸ್ಥಳದಲ್ಲಿದ್ದ ನೀರಾವರಿ ನಿಗಮದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಿಗ್ಗೆ 11ಕ್ಕೆ ಪ್ರವಾಸಿ ಮಂದಿರಕ್ಕೆ ಬಂದ ಸದಸ್ಯರು ಚರ್ಚೆ ನಡೆಸಿದರು. ಮಧ್ಯಾಹ್ನದ ಬಳಿಕ ವರದಿ ಸಿದ್ಧಪಡಿಸಿ ಸಂಜೆ ಮರಳಿದರು.

‘ಮಾಧ್ಯಮದವರು, ಇತರ ಅಧಿಕಾರಿಗಳು ಮತ್ತು ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸುವಂತೆ ಸಮಿತಿಯಿಂದ ಸೂಚನೆ ಇತ್ತು. ಅದನ್ನು ಪಾಲಿಸಿದ್ದೇವೆ. ಭಧ್ರತೆ ಒದಗಿಸಿದ್ದೇವೆ’ ಎಂದು ಖಾನಾಪುರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.