ADVERTISEMENT

ಕಾಂಗ್ರೆಸ್‌ ಅಭ್ಯರ್ಥಿ ವಯಸ್ಸಾದ ಎತ್ತು: ಕಾರಜೋಳ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 15:44 IST
Last Updated 8 ಜೂನ್ 2022, 15:44 IST
ಗೋವಿಂದ ಕಾರಜೋಳ
ಗೋವಿಂದ ಕಾರಜೋಳ   

ಬೆಳಗಾವಿ: ‘ಎತ್ತಿಗೆ ವಯಸ್ಸಾದ ಮೇಲೆ ರೈತರು ಅದರ ಹೆಗಲು ತೊಳೆದು ಹೊರಗೆ ಬಿಟ್ಟು ಬಿಡುತ್ತಾರೆ. ಮುಂದೆ ಅದನ್ನು ದುಡಿಸಲು ಸಾಧ್ಯವಿಲ್ಲ. ಆದರೆ, ವಾಯವ್ಯ ಶಿಕ್ಷಕರ ಕ್ಷೇತ್ರದಲ್ಲಿ ಕಾಂಗ್ರೆಸ್ಸಿಗರು ವಯಸ್ಸಾದ ಎತ್ತನ್ನೇ ಮತ್ತೆ ದುಡಿಯಲು ದೂಡಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಲೇವಡಿ ಮಾಡಿದರು.

ನಗರದಲ್ಲಿ ಬುಧವಾರ ಚುನಾವಣಾ ಭಾಷಣ ಮಾಡಿದ ಅವರು, ಕಾಂಗ್ರೆಸ್‌ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರನ್ನು ಕಾಲೆಳೆದರು. ‘ಕಾಂಗ್ರೆಸ್ಸಿಗೆ ಯಾರೂ ಅಭ್ಯರ್ಥಿ ಸಿಕ್ಕಿಲ್ಲ. ಹೀಗಾಗಿ, ಹಳೆಯ ಎತ್ತನ್ನು ಎಳೆದುತಂದು ನಿಲ್ಲಿಸಿದ್ದಾರೆ. ಮೂರು ಹೆಜ್ಜೆ ಕೂಡ ನಡೆಯಲಾಗದ ಎತ್ತು ಮೂರು ಜಿಲ್ಲೆಗಳನ್ನು ಪ್ರತಿನಿಧಿಸಲು ಸಾಧ್ಯವಿಲ್ಲ’ ಎಂದರು.

‘ತಿಳಿಯದೇ ಚುನಾವಣೆಗೆ ನಿಂತ ಸಂಕ’

ADVERTISEMENT

‘ಪದವೀಧರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುನೀಲ ಸಂಕ ನಮ್ಮ ಅಥಣಿಯವರು. ಮೊನ್ನೆ ಸಿಕ್ಕಾಗ ಯಾಕಪ್ಪ ಚುನಾವಣೆಗೆ ನಿಂತಿದ್ದೀ ಎಂದು ಕೇಳಿದೆ. ನನಗೇನೂ ಗೊತ್ತಿಲ್ಲ ಅಣ್ಣ, ಕರೆದು ಸಹಿ ಮಾಡು ಎಂದರು ಮಾಡಿಬಿಟ್ಟೆ. ಈ ಕ್ಷೇತ್ರದಲ್ಲಿ ಮೂರು ಜಿಲ್ಲೆಗಳು ಬರುತ್ತವೆ ಎಂಬುದೂ ನನಗೆ ಗೊತ್ತಿರಲಿಲ್ಲ ಅಂದ’ ಎಂದು ವಿಧಾನ ಪರಿಷತ್‌ ಸದಸ್ಯ ಲಕ್ಷ್ಮಣ ಸವದಿ ಕುಟುಕಿದರು.

ಬೆಳಗಾವಿಯಲ್ಲಿ ಬುಧವಾರ ಚುನಾವಣಾ ಪ್ರಚಾರ ಭಾಷಣ ಮಾಡಿದ ಅವರು, ‘ಹಣಮಂತಣ್ಣ ಸಾಕಷ್ಟು ಕೆಲಸ ಮಾಡಿದ್ದಾರೆ. ಅವರೇ ಗೆಲ್ಲಲಿ ಎಂದು ಸ್ವತಃ ಸುನೀಲ ಸಂಕ ಹೇಳಿದ್ದಾನೆ. ಪ್ರಚಾರ ಕೈಬಿಟ್ಟು ಮನೆಯಲ್ಲಿ ಕುಳಿತಿದ್ದಾನೆ’ ಎಂದೂ ಹೇಳಿದರು.

‘ಹಿಂದೆ ಕರಾಡ– ಸತಾರ ಕ್ಷೇತ್ರದಿಂದ ಒಬ್ಬ ಅಂಗವಿಕಲ ವ್ಯಕ್ತಿ ಸಂಸದರಾಗಿ ಆಯ್ಕೆಯಾಗಿ ಬಂದಿದ್ದರು. ಅವರಿಗೆ ಮಾತನಾಡಲೂ ಬರುತ್ತಿರಲಿಲ್ಲ, ಸರಿಯಾಗಿ ನಡೆಯಲೂ ಬರುತ್ತಿರಲಿಲ್ಲ. ಹಾಗಿದ್ದ ಮೇಲೆ ಜನ ಏಕೆ ಆರಿಸಿ ಕಳುಹಿಸಿದ್ದಾರೆ ಎಂದು ಸ್ಪೀಕರ್‌ ಪ್ರಶ್ನೆ ಮಾಡಿದ್ದರು. ನಡೆಯಲೂ ಬಾರದ, ಮಾತನಾಡಲೂ ಬಾರದ ವ್ಯಕ್ತಿಯನ್ನು ಆಯ್ಕೆ ಮಾಡಿದರೆ ಹೀಗೇ ಆಗುತ್ತದೆ’ ಎಂದು ಅವರು ಪ್ರಕಾಶ ಹುಕ್ಕೇರಿ ಅವರ ಹೆಸರು ಹೇಳದೇ ಮೂದಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.