ಬೆಳಗಾವಿ: ‘ಅಲ್ಪಸಂಖ್ಯಾತರನ್ನು ತುಷ್ಟೀಕರಣ ಮಾಡುವ ಭರದಲ್ಲಿ ಕಾಂಗ್ರೆಸ್ ಸರ್ಕಾರ, ರಾಜ್ಯದ ಸಾಮರಸ್ಯವನ್ನೇ ಹಾಳು ಮಾಡುತ್ತಿದೆ. ಮದ್ದೂರು, ನಾಗಮಂಗಲ ಗಲಭೆಗಳೂ ಸೇರಿದಂತೆ ರಾಜ್ಯದ ಬೇರೆಬೇರೆ ಕಡೆ ನಡೆಯುತ್ತಿರುವ ಗಲಭೆಗಳಿಗೆ ಸರ್ಕಾರವೇ ಹೊಣೆ’ ಎಂದು ಶಾಸಕ ಮಹೇಶ ತೆಂಗಿನಕಾಯಿ ಆರೋಪಿಸಿದರು.
‘ಹಿಂದೂ ಮೆರವಣಿಗೆಗಳು ನಡೆಯಬೇಕಾದರೆ ಯಾರ ಅನುಮತಿ ಪಡೆಯಬೇಕು ಎಂಬ ಗೊಂದಲ ರಾಜ್ಯದಲ್ಲಿ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಸಂಪೂರ್ಣವಾಗಿ ಕಾನೂನು– ವ್ಯವಸ್ಥೆ ಹಾಳಾಗಲು ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕೀಯ ಹಾಗೂ ಅನ್ಯ ಕೋಮಿನವರ ರಕ್ಷಣೆಯೇ ಕಾರಣ’ ಎಂದು ಅವರು ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ಭದ್ರಾವತಿಯಲ್ಲಿ ಸಾರ್ವಜನಿಕವಾಗಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳದೆ, ಪರಿಶೀಲಿಸುವ ಹಂತದಲ್ಲಿದೆ. ಹಾಗಾದರೆ ಗುಪ್ತಚರ ಇಲಾಖೆ ಏನು ಮಾಡುತ್ತಿದೆ? ಬೇರೆಯವರ ಮೆರವಣಿಗಳು ನಡೆದಾಗ ನಿಮಗೆ ವರದಿ ಸಿಗುತ್ತದೆ. ಆದರೆ, ಹಿಂದೂಗಳ ಮೆರವಣಿಗೆಯಲ್ಲಿ ಏಕೆ ಮಾಹಿತಿ ಸಿಗುವುದಿಲ್ಲ’ ಎಂದೂ ಪ್ರಾಶ್ನಿಸಿದರು.
‘ಗೃಹ ಸಚಿವರು ಒಳ್ಳೆಯವರಿದ್ದಾರೆ. ಆದರೆ, ಗೃಹ ಸಚಿವರ ಹಿಡಿತದಲ್ಲಿ ಗೃಹ ಇಲಾಖೆ ಇದೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಯಾವುದೇ ಘಟನಾವಳಿಗಳ ಬಗ್ಗೆ ಮಾಹಿತಿ ಕೇಳಿದಾಗ ಮಾಹಿತಿ ಬರಬೇಕು ಎಂಬ ಹಾರಿಕೆ ಉತ್ತರ ನೀಡುತ್ತಾರೆ. ಮುಂದಿನ ಜನ್ಮ ಇದ್ದರೆ ನಾನು ಮುಸ್ಲಿಮನಾಗಿ ಹುಟ್ಟುವೆ ಎಂಬ ಭದ್ರಾವತಿ ಶಾಸಕ ಕೆ. ಸಂಗಮೇಶ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ತೆಂಗಿನಕಾಯಿ; ಮುಂದಿನ ಜನ್ಮ ತಡವಾಗಬಹುದು, ತಕ್ಷಣ ನಿಮ್ಮ ನಿಮ್ಮ ಆಸೆ ಈಡೇರಿಸಿಕೊಳ್ಳಿ’ ಎಂದು ಲೇವಡಿ ಮಾಡಿದರು.
ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ್ ಪಾಟೀಲ, ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಗೀತಾ ಸುತಾರ, ಎಂ.ಬಿ.ಝಿರಲಿ, ಹನುಮಂತ ಕೊಂಗಾಲಿ, ಸಚಿನ ಕಡಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.