ADVERTISEMENT

ಕಾಂಗ್ರೆಸ್ ಪಾತಾಳಕ್ಕೆ ಹೋಗಲಿದೆ: ಜಗದೀಶ ಶೆಟ್ಟರ್

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2021, 15:31 IST
Last Updated 31 ಮಾರ್ಚ್ 2021, 15:31 IST
ಬೆಳಗಾವಿಯ ಸದಾಶಿವ ನಗರದ ಲಕ್ಷ್ಮಿ ಕಾಂಪ್ಲೆಕ್ಸ್‌ನಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರ ಚುನಾವಣಾ ಕಾರ್ಯಾಲಯವನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬುಧವಾರ ಉದ್ಘಾಟಿಸಿದರು. ಸಚಿವರಾದ ಜಗದೀಶ ಶೆಟ್ಟರ್, ಉಮೇಶ ಕತ್ತಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಇದ್ದಾರೆ
ಬೆಳಗಾವಿಯ ಸದಾಶಿವ ನಗರದ ಲಕ್ಷ್ಮಿ ಕಾಂಪ್ಲೆಕ್ಸ್‌ನಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರ ಚುನಾವಣಾ ಕಾರ್ಯಾಲಯವನ್ನು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಬುಧವಾರ ಉದ್ಘಾಟಿಸಿದರು. ಸಚಿವರಾದ ಜಗದೀಶ ಶೆಟ್ಟರ್, ಉಮೇಶ ಕತ್ತಿ, ಶಾಸಕರಾದ ಅಭಯ ಪಾಟೀಲ, ಅನಿಲ ಬೆನಕೆ, ನವದೆಹಲಿಯಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಶಂಕರಗೌಡ ಪಾಟೀಲ, ವಿಧಾನಪರಿಷತ್ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಇದ್ದಾರೆ   

ಬೆಳಗಾವಿ: ‘ಆರು ವರ್ಷದ ಹಿಂದೆ ಹೇಳಿದ್ದ ಕಾಂಗ್ರೆಸ್ ಮುಕ್ತ ಭಾರತ ಸಾಕಾರಗೊಳ್ಳುವ ಕಾಲ ಬಂದಿದೆ. ವಿಳಾಸ ಕಳೆದುಕೊಂಡಿರುವ ಆ ಪಕ್ಷ ಇನ್ನಷ್ಟು ಪಾತಾಳಕ್ಕೆ ಹೋಗಲಿದೆ’ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಇಲ್ಲಿನ ಸದಾಶಿವ ನಗರದ ಲಕ್ಷ್ಮಿ ಕಾಂಪ್ಲೆಕ್ಸ್‌ನಲ್ಲಿ, ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಅಂಗವಾಗಿ ಬಿಜೆಪಿ ಚುನಾವಣಾ ಕಚೇರಿ ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಬೆಲೆ ಏರಿಕೆ ತಾತ್ಕಾಲಿಕ. ಹಾಗೆಯೇ ಹೊಸದೂ ಅಲ್ಲ. ಕಾಂಗ್ರೆಸ್‌ ಸರ್ಕಾರ ಇದ್ದಾಗಲೂ ಇತ್ತು. ಆದರೆ, ಆ ಸಮಸ್ಯೆಯನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಸಮರ್ಥವಾಗಿ ನಿರ್ವಹಿಸಲಿದೆ’ ಎಂದು ಪ್ರತಿಕ್ರಿಯಿಸಿದರು.

ADVERTISEMENT

ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿ, ‘ಕಾಂಗ್ರೆಸ್ ಮುಕ್ತ ಭಾರತ ಆಗುತ್ತದೆ ಎಂದು ಆರು ವರ್ಷಗಳ ಹಿಂದೆ ನರೇಂದ್ರ ಮೋದಿ ಹೇಳಿದ್ದರು. ಈಗ 23 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿಯೂ ಬಿಜೆಪಿ ಅತ್ಯುತ್ತಮ ಸಾಧನೆ ಮಾಡಲಿದೆ. ಕಾಂಗ್ರೆಸ್ ಒಂದು ರಾಜ್ಯದಲ್ಲೂ ಆಡಳಿತಕ್ಕೆ ಬರಲು ಸಾಧ್ಯವಿಲ್ಲ’ ಎಂದು ಭವಿಷ್ಯ ನುಡಿದರು.

‘ಅಭಿವೃದ್ಧಿ ಕಾರ್ಯಸೂಚಿ ಮುಂದಿಟ್ಟುಕೊಂಡು ಉಪ ಚುನಾವಣೆಯಲ್ಲಿ ಮತ ಕೇಳುತ್ತಿದ್ದೇವೆ’ ಎಂದರು.

ಅಭ್ಯರ್ಥಿ ಮಂಗಲಾ ಅಂಗಡಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಒಳ್ಳೆಯ ಕೆಲಸ ನೋಡಿ ನಿಮ್ಮನ್ನು ಆಯ್ಕೆ ಮಾಡುತ್ತೇವೆ ಎಂದು ಜನರು ಭರವಸೆ ನೀಡುತ್ತಿದ್ದಾರೆ. ಎಲ್ಲ ಕಡೆಯೂ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ’ ಎಂದು ತಿಳಿಸಿದರು.

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಉಮೇಶ ಕತ್ತಿ ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಕೊಟ್ಟರೂ ಅಥವಾ ಕೊಡದಿದ್ದರೂ ಕೆಲಸ ಮಾಡುತ್ತೇನೆ. ಉಪ ಚುನಾವಣೆ ಉಸ್ತುವಾರಿ ನಿರ್ವಹಿಸಲು ಸಿದ್ಧವಾಗೇ ಇದ್ದೇನೆ. ಜವಾಬ್ದಾರಿ ಹೊತ್ತಿದ್ದೇನೆ’ ಎಂದು ಪ್ರತಿಕ್ರಿಯಿಸಿದರು.

ಪಕ್ಷದ ರಾಜ್ಯ ಘಟಕದ ವಕ್ತಾರ ಎಂ.ಬಿ. ಝಿರಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.