ಬೆಳಗಾವಿಯ ವೀರಸೌಧದಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್
ಬೆಳಗಾವಿ: ಇಲ್ಲಿನ ವೀರಸೌಧದಲ್ಲಿ ನಡೆಯಲಿರುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಗೆ ಕ್ಷಗಣಗಣನೆ ಶುರುವಾಗಿದೆ. ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರು ಪಥಸಂಚಲನ ಮಾಡಲಿದ್ದಾರೆ. ಸಂಪ್ರದಾಯದಂತೆ ಕಾಂಗ್ರೆಸ್ ಸೇವಾದಳದ ಕಾರ್ಯಕರ್ತರು ಮುಂದೆ ಸಾಗಲಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ ಹೇಳಿದರು.
ಮಾಧ್ಯಮಗಳಿಗೆ ಮಾಹಿತಿ ನೀಡಿದ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯರು 100 ಮೀಟರ್ ಹಿಂದಿನಿಂದ ಪಥಸಂಚಲನ ಮಾಡಲಿದ್ದಾರೆ ಎಂದರು.
ವೀರಸೌಧ ಆವರಣ ಪ್ರವೇಶಿಸಿದ ಬಳಿಕ ಒಳಗೆ ಕಾಂಗ್ರೆಸ್ ಧ್ವಜಾರೋಹಣವನ್ನು ಮಲ್ಲಿಕಾರ್ಜುನ ಖರ್ಗೆ ನೆರವೇರಿಸಲಿದ್ದಾರೆ. ಬಳಿಕ ಖರ್ಗೆ, ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮೂವರು ಒಂದೊಂದು ಸಸಿ ನೆಡಲಿದ್ದಾರೆ. ಒಳಗೆ ಹೋದ ತಕ್ಷಣ ಪ್ರತಿಯೊಬ್ಬರಿಗೂ ನಾನು ವಿಶೇಷ ರೇಷ್ಮೆ ಶಾಲು ಹಾಕಿ ಸ್ವಾಗತಿಸಲಿದ್ದೇನೆ. ಕರ್ನಾಟಕದ ಪರವಾಗಿ ಎಲ್ಲರಿಗೂ ಗಾಂಧಿ ಭಾರತ ಇತಿಹಾಸದ ಪುಸ್ತಕ ಕೊಡುತ್ತೇವೆ. ಸ್ಥಳೀಯ ಮಹತ್ವಕ್ಕಾಗಿ ಕುಂದಾ, ಕುರದಂಟು ಮತ್ತು ಮೈಸೂರು ಶ್ರೀಗಂಧದ ಮಾದರಿ ಕಾಣಿಕೆ ನೀಡುತ್ತೇವೆ ಎಂದರು.
ಮಧ್ಯಾಹ್ನ 3ಕ್ಕೆ ಆರಂಭವಾಗುವ ಕಾರ್ಯಕಾರಿ ಸಮಿತಿ ಸಭೆ ಸತತ 4 ಗಂಟೆಗಳ ಕಾಲ ನಡೆಯಲಿದೆ. ರಾತ್ರಿ ಮಲ್ಲಿಕಾರ್ಜುನ ಖರ್ಗೆ ಅವರು ಬೆಲಗಾಮ್ ಕ್ಲಬ್ ನಲ್ಲಿ ಎಲ್ಲ ನಾಯಕರಿಗೂ ಔತಣಕೂಟ ಏರ್ಪಡಿಸಿದ್ದಾರೆ ಎಂದರು.
ಶುಕ್ರವಾರ ಬೆಳಿಗ್ಗೆ ಸುವರ್ಣ ವಿಧಾನಸೌಧ ಮುಂದೆ ಗಾಂಧೀಜಿ ಪ್ರತಿಮೆ ಅನಾವರಣ ನಡೆಯಲಿದೆ. ಇದಕ್ಕೆ ಎಲ್ಲ ಪಕ್ಷಗಳ ಸಂಸದರು, ಶಾಸಕರನ್ನು ಆಹ್ವಾನಿಸಲಾಗಿದೆ. ಮಧ್ಯಾಹ್ನ ಅಲ್ಲಿಯೇ ಸೌಧ ಬ್ಯಾಂಕ್ವೆಂಟ್ ಹಾಲ್‌ನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಡಿ.ಕೆ.ಶಿವಕುಮಾರ ತಿಳಿಸಿದರು.
ನಕ್ಷೆ ವಿರೂಪ: ಕಾಂಗ್ರೆಸ್ ಶಾಸಕರು ಕಟೌಟುಗಳಲ್ಲಿ ಭಾರತದ ನಕ್ಷೆ ತಿರುಚಿ, ಜಮ್ಮು ಕಾಶ್ಮೀರ ಅರ್ಧಮಾತ್ರ ಭಾರತದಲ್ಲಿ ಕಾಣಿಸುವಂತೆ ಬ್ಯಾನರ್ ಹಾಕಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, 'ಮಾಹಿತಿ ಕೊರತೆಯಿಂದ ಯಾರೋ ಹಾಗೆ ಅದನ್ನು ಮಾಡಿದ್ದಾರೆ. ಈಗ ಅದನ್ನು ತೆರವುಗೊಳಿಸಿದ್ದೇವೆ. ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಬಿಜೆಪಿ ಮಾಡಬಾರದು. ಬಿಜೆಪಿ ನಾಯಕರ ಹೊಟ್ಟೆ ಕಿಚ್ಚಿಗೆ ನಮ್ಮಲ್ಲಿ ಮದ್ದಿಲ್ಲ' ಎಂದು ತಿರುಗೇಟು ಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.