ADVERTISEMENT

ಇ–ಕೆವೈಸಿ ಪ್ರಕ್ರಿಯೆಗೆ ಅಡ್ಡಿ: ಸಂಕಷ್ಟದ ವೇಳೆ ಪಡಿತರ ಕಳೆದುಕೊಳ್ಳುವ ಭೀತಿ!

ಎಂ.ಮಹೇಶ
Published 3 ಆಗಸ್ಟ್ 2021, 14:59 IST
Last Updated 3 ಆಗಸ್ಟ್ 2021, 14:59 IST
ಬೆಳಗಾವಿ ತಾಲ್ಲೂಕಿನ ಸುಳೇಭಾವಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ‘ಇ–ಕೆವೈಸಿ’ಗಾಗಿ ಚೀಟಿದಾರರು ಕೋವಿಡ್ ಮಾರ್ಗಸೂಚಿ ಪಾಲಿಸದೆ ನಿಂತಿದ್ದಾರೆ
ಬೆಳಗಾವಿ ತಾಲ್ಲೂಕಿನ ಸುಳೇಭಾವಿ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ‘ಇ–ಕೆವೈಸಿ’ಗಾಗಿ ಚೀಟಿದಾರರು ಕೋವಿಡ್ ಮಾರ್ಗಸೂಚಿ ಪಾಲಿಸದೆ ನಿಂತಿದ್ದಾರೆ   

ಬೆಳಗಾವಿ: ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಒಂದೆಡೆ ಪ್ರವಾಹ–ಅತಿವೃಷ್ಟಿ ಮತ್ತು ಭೂಕುಸಿತದಿಂದ ನೋವು. ಇನ್ನೊಂದೆಡೆ ಕೋವಿಡ್ ಆತಂಕ ಮತ್ತು ಉದ್ಯೋಗವಿಲ್ಲದೆ ಸಂಕಷ್ಟ. ಹೀಗಿರುವಾಗ, ಉಚಿತವಾಗಿ ದೊರೆಯುವ ಆಹಾರ ಧಾನ್ಯ ಕಳೆದುಕೊಳ್ಳುವ ಭೀತಿಯನ್ನು ಸರ್ಕಾರವು ಪಡಿತರ ಚೀಟಿದಾರರಿಗೆ ತಂದೊಡ್ಡಿದೆ.

ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲ ರೀತಿಯ ಪಡಿತರ ಚೀಟಿಗಳಲ್ಲಿ ಹೆಸರಿರುವ ಪ್ರತಿ ಸದಸ್ಯರು ಕೂಡ ಆ.10ರ ಒಳಗೆ ಚೀಟಿಗಳಲ್ಲಿ ನಮೂದಿಸಿದ ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ಇ–ಕೆವೈಸಿ (ವಿದ್ಯುನ್ಮಾನ–ನಿಮ್ಮ ಗ್ರಾಹಕರನ್ನು ಅರಿಯಿರಿ) ಕೊಡಬೇಕಿದೆ. ಪ್ರತಿಯೊಬ್ಬರೂ ಬೆರಳಚ್ಚು ನೀಡುವುದು, ಮಾಹಿತಿ ತಪ್ಪಾಗಿದ್ದರೆ ದಾಖಲೆ ನೀಡಿ ಸರಿಪಡಿಸುವುದು, ಆಧಾರ್‌ ಸಂಖ್ಯೆ, ದೂರವಾಣಿ ಸಂಖ್ಯೆ, ಅಡುಗೆ ಅನಿಲ ಸಿಲಿಂಡರ್ ಸಂಪರ್ಕ ಹೊಂದಿರುವ ಮಾಹಿತಿ ನೀಡುವುದು ಮೊದಲಾದ ಅಪ್‌ಡೇಟ್ ಮಾಡಿಸುವಂತೆ ಸರ್ಕಾರ ಆದೇಶ ಹೊರಡಿಸಿದೆ. ತಪ್ಪಿದಲ್ಲಿ ಅಂತಹ ಪಡಿತರ ಚೀಟಿದಾರರ ಪಡಿತರ ಹಂಚಿಕೆಯನ್ನು ಈ ತಿಂಗಳಿನಿಂದಲೇ ಸ್ಥಗಿತಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಇದಕ್ಕೆ ಪಡಿತರ ಚೀಟಿದಾರರು ಮತ್ತು ನ್ಯಾಯಬೆಲೆ ಅಂಗಡಿಗಳ ಮಾಲೀಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

‘ಈಗಿನ ಅಸಹಾಯಕ ಮತ್ತು ಕಂಗಾಲಾಗಿರುವ ಪರಿಸ್ಥಿತಿಯಲ್ಲಿ ಚೀಟಿದಾರರಿಗೆ ನಿರ್ಬಂಧ ವಿಧಿಸುವುದು ಸರಿಯಲ್ಲ’ ಎನ್ನುವುದು ಅವರ ಅಭಿಪ್ರಾಯವಾಗಿದೆ.

ADVERTISEMENT

ಕೆಲವೇ ದಿನಗಳಲ್ಲಿ:ಜಿಲ್ಲೆಯೊಂದರಲ್ಲೇ ಅಂತ್ಯೋದಯ- 68,908, ಆದ್ಯತೆ– 10,67,855 ಹಾಗೂ ನೋಂದಾಯಿಸಿದ ಆದ್ಯತೇತರ-71,859 ಪಡಿತರ ಚೀಟಿಗಳಿವೆ. ಅವುಗಳಲ್ಲಿನ ಪ್ರತಿ ಸದಸ್ಯರೂ ನಿಗದಿತ ನ್ಯಾಯಬೆಲೆ ಅಂಗಡಿಗಳಲ್ಲಿ ಕಡ್ಡಾಯವಾಗಿ ಇ-ಕೆವೈಸಿ ಮಾಡಿಕೊಳ್ಳಬೇಕು. ಜ.1ರಿಂದ ಆ.1ರವರೆಗೆ ಶೇ 63ರಷ್ಟು ಮಂದಿಯಷ್ಟೇ ಇ–ಕೆವೈಸಿ ಮಾಡಿಸಿದ್ದಾರೆ. ಉಳಿದವರು ಕೆಲವೇ ದಿನಗಳಲ್ಲಿ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಕೋವಿಡ್ ಲಾಕ್‌ಡೌನ್‌ನಿಂದಾಗಿ ಉದ್ಯೋಗವಿಲ್ಲದೆ, ಗಳಿಕೆ ಇಲ್ಲದೆ ಕಂಗಾಲಾಗಿರುವ ಬಡವರಿಗೆ ಕೇಂದ್ರ ಸರ್ಕಾರವೂ ಉಚಿತವಾಗಿ ಹಂಚಿಕೆ ಮಾಡಿದೆ. ನವೆಂಬರ್‌ವರೆಗೂ ನೀಡುವುದಾಗಿಯೂ ತಿಳಿಸಿದೆ. ಯಾವ ನ್ಯಾಯಬೆಲೆ ಅಂಗಡಿಗಳಲ್ಲಿ ಬೇಕಾದರೂ ಪಡೆದುಕೊಳ್ಳುವುದಕ್ಕೆ ಅವಕಾಶ ಕಲ್ಪಿಸಿದೆ. ಹೀಗಿರುವಾಗ ಸರ್ಕಾರವೇ ನಿರ್ಬಂಧ ಹೇರಿರುವುದು ಸರಿಯೇ ಎಂಬ ಪ್ರಶ್ನೆ ಮೂಡಿದೆ.

ಬೆಳಗಾವಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಪ್ರವಾಹ, ಭೂಕುಸಿತದಿಂದ ಜನರು ಮನೆಗಳೊಂದಿಗೆ ದಾಖಲೆಗಳನ್ನೂ ಕಳೆದುಕೊಂಡಿದ್ದಾರೆ. ಬದುಕು ಕಟ್ಟಿಕೊಳ್ಳಲು ಪರದಾಡುತ್ತಿದ್ದಾರೆ. ಹೀಗಿರುವಾಗ, ಇ–ಕೆವೈಸಿ ನೀಡಲು ನ್ಯಾಯಬೆಲೆ ಅಂಗಡಿಗಳಿಗೆ ಅಲೆಯುವ ಪರಿಸ್ಥಿತಿಯನ್ನು ಸರ್ಕಾರ ತಂದೊಡ್ಡಿದೆ. ಆಧಾರ್ ಚೀಟಿಯಲ್ಲಿ ಅಪ್‌ಡೇಟ್‌ ಮಾಡಿಸಿಲ್ಲದವರು ಪಡಿತರ ಚೀಟಿಯಲ್ಲಿ ಮಾಹಿತಿ ಅಪ್‌ಡೇಟ್ ಮಾಡಿಸಲು ತೊಂದರೆ ಎದುರಾಗಿದೆ. ಆಧಾರ್‌ ಅಪ್‌ಡೇಟ್‌ಗೆ ಅರ್ಜಿ ಸಲ್ಲಿಸಿದರೆ ಕಾರ್ಡ್‌ ಸಿಗಲು 21 ದಿನಗಳು ಬೇಕು. ಹೀಗಿರುವಾಗ, ಆ ಸಮಸ್ಯೆ ಎದುರಿಸುತ್ತಿರುವವರು ಆ.10ರೊಳಗೆ ಇ–ಕೆವೈಸಿ ಪ್ರಕ್ರಿಯೆ ಮುಗಿಸುವುದು ಸಾಧ್ಯವಾಗುವುದಿಲ್ಲ. ಅವರು ಪಡಿತರದಿಂದ ವಂಚಿತವಾಗಬೇಕಾಗುತ್ತದೆ. ಇಂಥವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿದೆ.

ಅಲ್ಲಲ್ಲಿ ಪಡಿತರ ಚೀಟಿದಾರರು ಮುಗಿಬೀಳುತ್ತಿರುವುದರಿಂದ ನ್ಯಾಯಬೆಲೆ ಅಂಗಡಿಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಸಾಧ್ಯವಾಗುತ್ತಿಲ್ಲ. ಇದರಿಂದ ಸೋಂಕು ಹರಡುವ ಭೀತಿಯೂ ಎದುರಾಗಿದೆ. ಸರ್ವರ್‌ ಸಮಸ್ಯೆಯೂ ಕಾಡುತ್ತಿದೆ ಎನ್ನುತ್ತಾರೆ ಅಂಗಡಿಕಾರರು.

***

ಮುಂದೂಡಿದರೆ ಅನುಕೂಲ
ಸರ್ಕಾರವು ಇ–ಕೆವೈಸಿ ಪಡೆಯುವುದು ಕಡ್ಡಾಯಗೊಳಿಸಿರುವುದನ್ನು ಸದ್ಯಕ್ಕೆ ಮುಂದೂಡುವುದು ಅತ್ಯಗತ್ಯವಾಗಿದೆ. ಕೋವಿಡ್ ಸಂಕಷ್ಟ ಕಳೆದ ನಂತರ ಪಡೆಯಲು ಅವಕಾಶ ಕೊಡಬೇಕು. ಸೋಂಕಿನ ಸಂದರ್ಭದಲ್ಲಿ ಜನರಿಗೆ ತೊಂದರೆ ಕೊಡುವುದು ಸರಿಯಲ್ಲ.
–ರಾಜಶೇಖರ ತಳವಾರ, ಉಪಾಧ್ಯಕ್ಷ, ರಾಜ್ಯ ಸರ್ಕಾರಿ ಪಡಿತರ ವಿತರಕರ ಕ್ಷೇಮಾಭಿವೃದ್ಧಿ ಸಂಘ

***

ಪೂರ್ಣಗೊಳಿಸಬೇಕು
ನ್ಯಾಯಬೆಲೆ ಅಂಗಡಿಕಾರರು ಸಂಪೂರ್ಣವಾಗಿ ಎಲ್ಲ ಪಡಿತರ ಚೀಟಿಗಳ ಇ-ಕೆವೈಸಿ ಕಾರ್ಯವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು. ಇದು ಸರ್ಕಾರದ ಆದೇಶ. ಇಲ್ಲವಾದಲ್ಲಿ ಅಂತಹ ಅಂಗಡಿಯವರು ಪಡಿತರ ದುರುಪಯೋಗ ಮಾಡಿದ್ದಾರೆಂದು ಪರಿಗಣಿಸಲಾಗುತ್ತದೆ.
–ಚನ್ನಬಸಪ್ಪ ಕೊಡ್ಲಿ, ಜಂಟಿ ನಿರ್ದೇಶಕ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.