ADVERTISEMENT

ಮಗನ ಅಂತಿಮ ದರ್ಶನ‌ ಸಾಧ್ಯವಾಗದ ನೋವಲ್ಲಿ ಸುರೇಶ ಅಂಗಡಿ ತಾಯಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2020, 6:10 IST
Last Updated 24 ಸೆಪ್ಟೆಂಬರ್ 2020, 6:10 IST
ಸುರೇಶ ಅಂಗಡಿ ಅವರ ತಾಯಿಯನ್ನು ಸಂತೈಸುತ್ತಿರುವ ಕುಟುಂಬದವರು
ಸುರೇಶ ಅಂಗಡಿ ಅವರ ತಾಯಿಯನ್ನು ಸಂತೈಸುತ್ತಿರುವ ಕುಟುಂಬದವರು   

ಬೆಳಗಾವಿ: ಇಲ್ಲಿನ ಸಂಸದ, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಸಾಧ್ಯವಾಗದೆ ತಾಯಿ ಸೋಮವ್ವ ಅಂಗಡಿ ನೋವಿನ ಕಡಲಲ್ಲಿ ಮುಳುಗಿದ್ದಾರೆ. ಅವರಿಗೆ ಸಾಂತ್ವನ ಹೇಳುವ ಕೆಲಸವನ್ನು ಬಂಧುಗಳು ಮಾಡುತ್ತಿದ್ದಾರಾದರೂ ಸಮಾಧಾನಪಡಿಸಲು ಸಾಧ್ಯವಾಗುತ್ತಿಲ್ಲ. ಅವರೊಂದಿಗೆ ತಾವೂ ಕಣ್ಣೀರಾಗುತ್ತಿದ್ದಾರೆ.

ತಾಲ್ಲೂಕಿಕ ಕೆ‌.ಕೆ. ಕೊಪ್ಪದಲ್ಲಿದ್ದ ಸೋಮವ್ವ ಅವರನ್ನು ಇಲ್ಲಿನ ವಿಶ್ವೇಶ್ವರಯ್ಯ ನಗರದ ಸಂಪಿಗೆ ರಸ್ತೆಯಲ್ಲಿರುವ ಸುರೇಶ ಅಂಗಡಿ ಅವರ ನಿವಾಸಕ್ಕೆ ಕರೆ ತರಲಾಗಿದೆ. ವಯಸ್ಸಾದ ಅವರನ್ನು ದೆಹಲಿಗೆ ಕರೆದುಕೊಂಡು ‌ಹೋಗುವುದಕ್ಕೆ ಕುಟುಂಬದವರಿಗೆ ಸಾಧ್ಯವಾಗಿಲ್ಲ. ಪುತ್ರನ ಹಠಾತ್ ನಿಧನದಿಂದ ಅವರು ದಿಗ್ಭ್ರಮೆಗೆ ಒಳಗಾಗಿದ್ದಾರೆ.

'ಪಾರ್ಲಿಮೆಂಟ್ನ್ಯಾಗ ರೊಕ್ಕಿಲ್ಲ, ನಾ ಹೋಗ್ಬೇಕು. ತಿಂಗಳಾದ್ಮ್ಯಾಲ ಬರ್ತೀನಂತ ಹೋಗಿದ್ದ ನನ್ಮಗ. ಹ್ಯಾಂಗ್ ಹೋದ್ಯೋ... ಎಲ್ ಹೋದ್ಯೋ...' ಎಂದು ಕಣ್ಣೀರಿಡುತ್ತಿದ್ದಾರೆ.

ADVERTISEMENT

'ನನ್ನ ಮಗ ಸಾಲಿ ಕಟ್ಟಿಸ್ದಾ, ಬಸವಣ್ಣನ ಗುಡಿ ಕಟ್ಟಿಸ್ದಾ. ಊರಾಗಾ ಇರ್ತಿದ್ದ. ಬಹಳ ಕಷ್ಟಪಟ್ಟು ಅವನ್ನ ಬೆಳ್ಸಿದ್ನಿ. ಮಗ ಜನಕ್ಕಾಗಿ ಸಾಕಷ್ಟ ಮಾಡ್ದ. ನನ್ನ ಮಗ ಪಾರ್ಲಿಮೆಂಟ್ಗೆ ಹೋಗ್ಯಾನೂ'... ಎನ್ನುತ್ತಾ ಮಗ ಹಿಂದಿರುಗಬಹುದು ಎಂಬ ನಿರೀಕ್ಷೆಯ ಕಂಗಳಲ್ಲಿ ಕುಳಿತಿದ್ದಾರೆ.

'ನನ್ನ ಹೆಸರ್ ಮ್ಯಾಗ ಸಾಲಿ ಕಟ್ಟಿಸ್ದಾ... ಎಲ್ಲಿ ಹೋದ್ಯೊ ಮಗ...' ಎಂದು ಕಣ್ಣೀರಿಡುತ್ತಾ ಕುಳಿತಿರುವ ಆ ಹಿರಿಯ ಜೀವವನ್ನು ಸಮಾಧಾನಪಡಿಸಲು ಬಂಧುಗಳಿಗೆ ಸಾಧ್ಯವಾಗುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.