ADVERTISEMENT

ಜಮೀನು ವಿವಾದ: ಗ್ರಾಮದ ಹಿರಿಯನ ಕೊಲೆ

ಬೈಕಿನಲ್ಲಿ ಹೊರಟಿದ್ದ ಮೂವರಿಗೆ ಕಾರ್‌ ಡಿಕ್ಕಿ ಹೊಡೆಸಿ ಅಪಘಾತದಂತೆ ಬಿಂಬಿಸಲು ಯತ್ನ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2024, 16:20 IST
Last Updated 21 ಸೆಪ್ಟೆಂಬರ್ 2024, 16:20 IST
ವಿಠ್ಠಲ ಜೋತಪ್ಪ ರಾಮಗೋನಟ್ಟಿ
ವಿಠ್ಠಲ ಜೋತಪ್ಪ ರಾಮಗೋನಟ್ಟಿ   

ಯಮಕನಮರಡಿ: ಹುಕ್ಕೇರಿ ತಾಲ್ಲೂಕಿನ ಹೊಸೂರು ಗ್ರಾಮದ ಹದ್ದಿಯಲ್ಲಿ ಶುಕ್ರವಾರ ತಡರಾತ್ರಿ, ವ್ಯಕ್ತಿಯೊಬ್ಬರನ್ನು ಕೊಲೆ ಮಾಡಿ ಅಪಘಾತ ಎಂಬಂತೆ ಬಿಂಬಿಸಲಾಗಿದೆ. ತಡರಾತ್ರಿಯೇ ಕಾರ್ಯಪ್ರವೃತ್ತರಾದ ಇಲ್ಲಿನ ಪೊಲೀಸರು ನಾಲ್ಕೇ ತಾಸಿನಲ್ಲಿ ಪ್ರಕರಣ ಭೇದಿಸಿ ಮೂವರನ್ನು ಬಂಧಿಸಿದ್ದಾರೆ.

ಬೈಕ್ ಮೇಲೆ ತೆರಳುತ್ತಿದ್ದ, ಗ್ರಾಮದ ಹಿರಿಯ ವಿಠ್ಠಲ ಜೋತಪ್ಪ ರಾಮಗೋನಟ್ಟಿ (60) ಕೊಲೆಯಾದವರು. ಬೈಕ್‌ ಓಡಿಸುತ್ತಿದ್ದ  ಭೀಮಪ್ಪ ಅವರ ಹಿಂದಿದ್ದ ಬಾಬು ಗಾಯಗೊಂಡಿದ್ದಾರೆ. ಭೀಮಪ್ಪ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಬೈಕಿಗೆ ಕಾರು ಡಿಕ್ಕಿ ಹೊಡೆಸಲಾಗಿದೆ. ಆದರೆ, ಭೀಮಪ್ಪ ಬೈಕ್‌ ಓಡಿಸುತ್ತಿದ್ದರು. ಬಾಬು ಮಧ್ಯದಲ್ಲಿ, ವಿಠ್ಠಲ ಕೊನೆಯಲ್ಲಿ ಕುಳಿತಿದ್ದರು. ಕಾರು ನೇರವಾಗಿ ವಿಠ್ಠಲ ಅವರಿಗೆ ಗುದ್ದಿ, 50 ಮೀಟರ್‌ ದೂರ ಎಳೆದುಕೊಂಡು ಹೋಗಿದ್ದರಿಂದ ಅವರು ಸ್ಥಳದಲ್ಲೇ ಸಾನ್ನಪ್ಪಿದ್ದಾರೆ. ಜಮೀನು ವಿವಾದವೇ ಘಟನೆಗೆ ಕಾರಣ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದ್ದಾರೆ.

ಇಂಗಳಗಿ ಗ್ರಾಮದ ಲಾಜ್ಮಿ, ಯಾಸ್ಮಿನ್, ಮೊಹಮ್ಮದ್‌ ಎಂಬ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ADVERTISEMENT

ಘಟನೆ ಏನು: ಹೊಸೂರು ಗ್ರಾಮದ ಹದ್ದಿಯಲ್ಲಿ ಭೀಮಪ್ಪ ಅವರಿಗೆ ಸೇರಿದ 2.35 ಎಕರೆ ಜಮೀನು ಇತ್ತು. ಅವರ ಮನೆಯ ಹೆಣ್ಣುಮಕ್ಕಳಿಂದ ಸಹಿ ಪಡೆದ ಲಾಜ್ಮಿ ಗಜಬರಖಾನ್‌ ಅವರ ಕುಟುಂಬದ ಅನಧಿಕೃತವಾಗಿ ಉಳುಮೆ ಮಾಡುತ್ತಿತ್ತು. ಈ ಬಗ್ಗೆ ಹೈಕೋರ್ಟ್‌ನಲ್ಲಿ ಪ್ರಕರಣ ಇತ್ಯರ್ಥವಾಗಿ, ಜಮೀನು ಭೀಮಪ್ಪ ಅವರದು ಎಂದು ಆದೇಶ ಬಂದಿತ್ತು. ಅದಾಗಿಯೂ ಆರೋಪಿಗಳು ಬೆದರಿಕೆ ಹಾಕಿ ಜಮೀನು ತಮ್ಮ ವಶದಲ್ಲಿ ಇಟ್ಟುಕೊಂಡಿದ್ದರು. ಕಳೆದ ಆಗಸ್ಟ್‌ 20ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಭೀಮಪ್ಪ ಪರವಾಗಿ ಮರು ಆದೇಶ ಮಾಡಿ ಅವರಿಗೆ ಬಿಡಿಸಿಕೊಡಲಾಗಿತ್ತು.

ಈ ಸಂಬಂಧ ಪದೇಪದೇ ಜಗಳ ನಡೆಯುವುದನ್ನು ತಡೆಯಲು ಗ್ರಾಮದ ಹಿರಿಯರು ಹೊಸೂರು ಲಕ್ಷ್ಮಿ ದೇವಸ್ಥಾನದಲ್ಲಿ ಸಭೆ ನಡೆಸಿ ಸಂಧಾನ ಮಾಡಿಸಿದ್ದರು. ಅಲ್ಲಿಂದ ಮರಳುವಾಗ ಹಿಂಬಾಲಿಸಿ ಬಂದ ಆರೋಪಿಗಳು ಕಾರಿನಿಂದ ಬೈಕಿಗೆ ಡಿಕ್ಕಿ ಹೊಡರೆಸಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.

‘ಬಂಧಿತ ಆರೋಪಿಗಳು ಈ ಹಿಂದೆ ಕೊಲೆಯಲ್ಲಿ ಜೈಲು ಸೇರಿದ್ದರು. ಅವರ ಮೇಲೆ ರೌಡಿಶೀಟರ್‌ ಕೂಡ ಇದೆ. ಬೇಲ್‌ ಮೇಲೆ ಬಂದಿದ್ದರೂ ಮತ್ತೊಂದು ಕೊಲೆ ಮಾಡಿದ್ದಾರೆ. ಪ್ರತಿಬಂಧಕ ಕಾಯ್ದೆ ಅಡಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಾಗುವುದು’ ಎಂದೂ ಅವರು ವಿವರಿಸಿದರು.

ಅತ್ಯಂತ ಜಾಣ್ಮೆಯಿಂದ ಪ್ರಕರಣ ಭೇದಿಸುವಯಲ್ಲಿ ಯಮಕನಮರಡಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅವರಿಗೆ ಅಭಿನಂದನೆ ತಿಳಿಸುವುದಾಗಿ ಡಾ.ಭೀಮಾಶಂಕರ ಹೇಳಿದರು.

ಯುವಕನಿಗೆ ಚಾಕು ಇರಿತ: ಇಬ್ಬರ ಬಂಧನ

ಯರಗಟ್ಟಿ: ಸಮೀಪದ ಸೊಪ್ಪಡ್ಡ ಗ್ರಾಮದಲ್ಲಿ ಯುವಕನಿಗೆ ಚಾಕು ಇರಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಮುರಗೋಡ ಠಾಣೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಯರಗಟ್ಟಿಯ ಹನುಮಂತ ಭಜಂತ್ರಿ ಸೊಪ್ಪಡ್ಲದ ಮನೀಷ ಗೌಡರ ಬಂಧಿತರು. ಬೈಲಹೊಗಲದ ಸಚಿನ್‌ ಪುರಾಣಿಕಮಠ (36) ಗಾಯಗೊಂಡವರು. ‘ಬೈಲಹೊಂಗಲದಿಂದ ಬಾಗಲಕೋಟೆಗೆ ತೆರಳುತ್ತಿದ್ದ ಸಚಿನ್‌ ಯರಗಟ್ಟಿ ಬಸ್‌ ನಿಲ್ದಾಣದಲ್ಲಿ ನಿಂತಿದ್ದರು. ಅಲ್ಲಿಗೆ ಬಂದ ವ್ಯಕ್ತಿಯೊಬ್ಬ ಸಚಿನ್‌ ಮೊಬೈಲ್‌ ಕಸಿದುಕೊಂಡು ಹೋದ. ಮೊಬೈಲ್‌ ಕೊಡಿಸುವುದಾಗಿ ಇನ್ನಿಬ್ಬರು ಸೊಪ್ಪಡ್ಲಕ್ಕೆ ಅವರನ್ನು ಕರೆದೊಯ್ದರು. ಅಲ್ಲಿ ಮೊಬೈಲ್‌ ವಾಪಸ್‌ ಕೊಡುವ ವಿಚಾರವಾಗಿ ಗಲಾಟೆಯಾಗಿದ್ದು ಸಚಿನ್‌ ಅವರಿಗೆ ಚಾಕು ಇರಿಯಲಾಗಿದೆ. ತನಿಖೆ ನಡೆದಿದೆ’ ಎಂದು ಮುರಗೋಡ ಸಿಪಿಐ ಈರಯ್ಯ ಮಠಪತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.