ADVERTISEMENT

ಖಾನಾಪುರ | ಕಾಡಾನೆ ಹಿಂಡು ದಾಳಿ: ಅಪಾರ ಬೆಳೆ ಹಾನಿ

4 ಮರಿ, 12 ದೊಡ್ಡ ಆನೆಗಳ ದಾಳಿ: ಕಬ್ಬು, ಬಾಳೆ ತಿಂದು, ಭತ್ತದ ಗದ್ದೆ ತುಳಿದು ನಾಶ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2022, 10:46 IST
Last Updated 11 ಡಿಸೆಂಬರ್ 2022, 10:46 IST
ಖಾನಾಪುರ ತಾಲ್ಲೂಕು ಭೂರಣಕಿ ಗ್ರಾಮದ ಬಳಿ ಕಾಡಾನೆಗಳ ದಾಳಿಯಿಂದ ಹಾನಿಗೀಡಾದ ಕಬ್ಬು
ಖಾನಾಪುರ ತಾಲ್ಲೂಕು ಭೂರಣಕಿ ಗ್ರಾಮದ ಬಳಿ ಕಾಡಾನೆಗಳ ದಾಳಿಯಿಂದ ಹಾನಿಗೀಡಾದ ಕಬ್ಬು   

ಖಾನಾಪುರ: ತಾಲ್ಲೂಕಿನ ಭೂರಣಕಿ ಮತ್ತು ಕರೀಕಟ್ಟಿ ಗ್ರಾಮಗಳ ಸುತ್ತಲಿನ ಕೃಷಿ ಜಮೀನುಗಳಲ್ಲಿ ಶನಿವಾರ ನಸುಕಿನಜಾವ 16 ಕಾಡಾನೆಗಳ ಹಿಂಡು ದಾಳಿ ಮಾಡಿದ್ದು, ಅಪಾರ ಪ್ರಮಾಣದ ಬೆಳೆ ತಿಂದು, ತುಳಿದು ನಾಶ ಮಾಡಿವೆ. ಇದರಿಂದ ಗ್ರಾಮಗಳಲ್ಲಿ ಆತಂಕದ ವಾತಾವರಣ ಮನೆ ಮಾಡಿದೆ.

ಶುಕ್ರವಾರ ರಾತ್ರಿಯೇ ದಾಂಡೇಲಿ ಅರಣ್ಯದಿಂದ ಬಂದ ನಾಲ್ಕು ಮರಿ ಹಾಗೂ 12 ದೊಡ್ಡ ಆನೆಗಳು ತಾವರಗಟ್ಟಿ, ಚುಂಚವಾಡ ಮಾರ್ಗವಾಗಿ ಭೂರಣಕಿ ಗ್ರಾಮದ ಕಡೆ ಬಂದವು. ಮಧ್ಯರಾತ್ರಿಯಿಂದ ಶನಿವಾರ ನಸುಕಿನಜಾವದವರೆಗೆ ಭೂರಣಕಿ ಮತ್ತು ಕರೀಕಟ್ಟಿ ಗ್ರಾಮಗಳ ಹೊರವಲಯದ ಕೃಷಿ ಭೂಮಿಗಳಿಗೆ ಲಗ್ಗೆ ಇಟ್ಟವು.

ಹೊಲದಲ್ಲಿದ್ದ ಕಬ್ಬು ತುಳಿದು ತಿಂದಿರುವ ಆನೆಗಳು, ಬಳಿಕ ಭತ್ತದ ಜಮೀನುಗಳಿಗೆ ನುಗ್ಗಿ ರಾಶಿ ಮಾಡಲು ಸಂಗ್ರಹಿಸಿ ಇಟ್ಟಿದ್ದ ಭತ್ತದ ಬಣವೆಯನ್ನು ತುಳಿದಿವೆ. ಹೊಲಗಳಲ್ಲಿದ್ದ ಬಾಳೆ ಮತ್ತು ತೆಂಗಿನ ಗಿಡಗಳನ್ನು ಕಿತ್ತಿವೆ. ಇತರೆ ತೋಟಗಾರಿಕೆ ಬೆಳೆಗಳಿಗೂ ಹಾನಿ ಉಂಟು ಮಾಡಿವೆ ಎಂದು ರೈತರು ಹೇಳಿದ್ದಾರೆ.

ADVERTISEMENT

ಭೂರಣಕಿ ಮತ್ತು ಕರೀಕಟ್ಟಿ ಗ್ರಾಮಗಳ ರೈತರಾದ ಹಣಮಂತ ಅಮರಾಪುರ, ತಿಮ್ಮಣ್ಣ ಅಮರಾಪುರ, ರಾಮ ಅಮರಾಪುರ, ಮನೋಹರ ಪಾಟೀಲ, ಮುರಳೀಧರ ಪಾಟೀಲ, ಅರ್ಜುನ ವಡ್ಡರ, ಗುಡೂಸಾಬ್ ಸಾಹುಕಾರ, ಮಾರುತಿ ಪಾಟೀಲ, ಕಲ್ಲಪ್ಪ ಪಾಟೀಲ ಮತ್ತು ಇತರೆ ರೈತರಿಗೆ ಸೇರಿದ 30 ಎಕರೆ ಪ್ರದೇಶದಲ್ಲಿ ಕಾಡಾನೆಗಳು ಬೆಳೆಹಾನಿ ಮಾಡಿವೆ.

ಘಟನೆಯ ಬಗ್ಗೆ ಅರಣ್ಯ ಇಲಾಖೆಗೆ ಶನಿವಾರ ಮುಂಜಾನೆ ಮಾಹಿತಿ ನೀಡಲಾಗಿದೆ. ಕೇವಲ ಅರಣ್ಯ ರಕ್ಷಕರೊಬ್ಬರು ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿದ್ದು, ಎರಡು ದಿನ ಕಚೇರಿಗೆ ರಜೆ ಇರುವ ಕಾರಣ ಸೋಮವಾರ ಮತ್ತೆ ಬರುವುದಾಗಿ ಹೇಳಿಹೋಗಿದ್ದಾರೆ. ಮೇಲಧಿಕಾರಿಗಳು ಇತ್ತ ಗಮನಹರಿಸಿಲ್ಲ. ಕೂಡಲೇ ಆನೆಗಳಿಂದ ಹಾನಿಗೀಡಾದ ಪ್ರದೇಶದ ಪರಿಶೀಲನೆ ನಡೆಸಬೇಕು ಮತ್ತು ರೈತರಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಭೂರಣಕಿ ಗ್ರಾಮದ ಮಹೇಶ ಪಾಟೀಲ, ಎಂ.ಎಂ ಸಾಹುಕಾರ ಆಗ್ರಹಿಸಿದರು.

ಈ ವಿಷಯವಾಗಿ ಹೆಚ್ಚಿನ ಮಾಹಿತಿ ಪಡೆಯಲು ‘ಪ್ರಜಾವಾಣಿ’ ಗೋಲಿಹಳ್ಳಿ ವಲಯ ಅರಣ್ಯಾಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.