ADVERTISEMENT

ತುರ್ತು ಪರಿಸ್ಥಿತಿ ನಿರ್ವಹಣೆಗೆ ಸಿದ್ಧತೆ: ಜಿಲ್ಲಾಧಿಕಾರಿ ಸೂಚನೆ

ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ

​ಪ್ರಜಾವಾಣಿ ವಾರ್ತೆ
Published 26 ಮೇ 2020, 7:11 IST
Last Updated 26 ಮೇ 2020, 7:11 IST
 ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿದರು
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಮಾತನಾಡಿದರು   

ಬೆಳಗಾವಿ: ಮಳೆಗಾಲ ಆರಂಭಗೊಳ್ಳಲಿರುವುದರಿಂದ ಪ್ರವಾಹ, ಅತಿವೃಷ್ಟಿ ಸೇರಿದಂತೆ ಎಲ್ಲ ಬಗೆಯ ತುರ್ತು ಸಂದರ್ಭಗಳ ನಿರ್ವಹಣೆಗೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಳೆದ ಬಾರಿಯ ಭೀಕರ ಪ್ರವಾಹ ಹಾಗೂ ಅತಿವೃಷ್ಟಿ ಸಂದರ್ಭದಲ್ಲಿ ಎದುರಾದ ಸವಾಲುಗಳನ್ನು ಗಮನದಲ್ಲಿರಿಸಿಕೊಂಡು ಜನರ ತುರ್ತು ರಕ್ಷಣೆಗೆ ಬೋಟ್ ಹಾಗೂ ಪುನರ್ವಸತಿಗೆ ಪರಿಹಾರ ಕೇಂದ್ರಗಳ ಸ್ಥಾಪನೆ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.

ADVERTISEMENT

ಉಪ ವಿಭಾಗ ಮಟ್ಟದಲ್ಲೂ ಇದೇ ವಾರದಲ್ಲಿ ಪೊಲೀಸ್, ಅಗ್ನಿಶಾಮಕ ಸೇರಿದಂತೆ ಎಲ್ಲ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸಿ ಎಲ್ಲ ವಿಷಯಗಳ ಬಗ್ಗೆ ವಿಸ್ತ್ರೃತವಾಗಿ ಚರ್ಚೆ ನಡೆಸಬೇಕು ಎಂದು ಉಪ ವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು.

ಚರಂಡಿ, ನಾಲಾ ಸ್ವಚ್ಛಗೊಳಿಸಿ; ಸೇತುವೆ ಪರಿಶೀಲಿಸಿ:ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿರುವ ಚರಂಡಿ ಮತ್ತು ನಾಲಾಗಳನ್ನು ಸ್ವಚ್ಛಗೊಳಿಸಬೇಕು. ಲೋಕೋಪಯೋಗಿ ಇಲಾಖೆಯು ರಸ್ತೆ, ಸಿ.ಡಿ ಹಾಗೂ ಸೇತುವೆಗಳ ಬಗ್ಗೆ ಪರಿಶೀಲನೆ ಕೈಗೊಳ್ಳಬೇಕು.
ಮಳೆ ನೀರಿನಿಂದ ಸಿ‌.ಡಿ. ಮತ್ತು ಸಣ್ಣ ಸೇತುವೆಗಳು ಬ್ಲಾಕ್ ಆಗದಂತೆ ನೋಡಿಕೊಳ್ಳಬೇಕು. ಆರೋಗ್ಯ ಇಲಾಖೆಯು ತುರ್ತು ವೈದ್ಯಕೀಯ ಸೇವೆಯನ್ನು ಒದಗಿಸಲು ಸೂಕ್ತ ಸಿದ್ಧತೆ ಮಾಡಿಕೊಳ್ಳಬೇಕು. ಪಶು ಪಾಲನಾ ಇಲಾಖೆಯು ಅಗತ್ಯ ಮೇವು ಸಂಗ್ರಹ ಮತ್ತು ಲಸಿಕೆ ಬಗ್ಗೆ ಪೂರ್ವ ಸಿದ್ಧತೆ ಮಾಡಿಟ್ಟುಕೊಳ್ಳಬೇಕು ಎಂದರು.

ಎನ್‌ಡಿಆರ್‌ಎಫ್‌ ತಂಡದಿಂದ ಪರಿಶೀಲನೆ:ಶೀಘ್ರದಲ್ಲೇ ಜಿಲ್ಲೆಗೆ ಎನ್‌ಡಿಆರ್‌ಎಫ್ ತಂಡ ಕೂಡ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ಮಾಡಲಿದೆ. ಜಿಲ್ಲೆಗೆ ಅಗತ್ಯವಿರುವ ಬೋಟ್ ಗಳ ಬಗ್ಗೆ ಪ್ರಸ್ತಾವ ಸಿದ್ಧಪಡಿಸಬೇಕು. ಅದೇ ರೀತಿ ತಕ್ಷಣಕ್ಕೆ ಬೋಟ್ ಪಡೆಯಲು ಮುಂಚಿತವಾಗಿಯೇ ಎಲ್ಲ ಎಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದಲ್ಲದೇ ಜಿಲ್ಲೆಯಾದ್ಯಂತ ಈಗಾಗಲೇ ಲಭ್ಯವಿರುವ ಬೋಟ್‌ಗಳ ಮಾಹಿತಿಯನ್ನು ಪಡೆದುಕೊಂಡು ಬೋಟ್ ಗಳ ದುರಸ್ತಿ ಮಾಡಿಸಬೇಕು ಹಾಗೂ ಬೋಟ್ ಬಳಕೆಗೆ ಸಂಬಂಧಿಸಿದಂತೆ ತರಬೇತಿಯನ್ನು ನೀಡಬೇಕು ಎಂದರು.

ನದಿ ದಂಡೆಯಲ್ಲಿ ಇರುವ ಗ್ರಾಮಗಳಲ್ಲಿ ಜನರ ತುರ್ತು ರಕ್ಷಣೆಗೆ ಅಗತ್ಯವಿರುವ ಬೋಟ್ ಮತ್ತು ಅವುಗಳ ಆಪರೇಟರ್ ಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಜಲಾಶಯದಿಂದ ನೀರು ಬಿಡುಗಡೆ; ಮಹಾರಾಷ್ಟ್ರಕ್ಕೆ ಪತ್ರ:ಮಹಾರಾಷ್ಟ್ರದ ಜಲಾಶಯಗಳಿಂದ ಹಂತ ಹಂತವಾಗಿ ನೀರು ಬಿಡುಗಡೆ ಮಾಡಬೇಕು. ಜಲಾಶಯಗಳಿಂದ ನೀರು ಬಿಡುವಾಗ ಜಿಲ್ಲಾಡಳಿತಕ್ಕೆ ಮುಂಚಿತವಾಗಿಯೇ ಅಗತ್ಯ ಮಾಹಿತಿಯನ್ನು ನೀಡಬೇಕು ಎಂದು ಮಹಾರಾಷ್ಟ್ರದ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಮತ್ತು ಜಲಸಂಪನ್ಮೂಲ ಇಲಾಖೆಗೆ ತಕ್ಷಣವೇ ಪತ್ರವನ್ನು ಬರೆಯಲಾಗುವುದು ಎಂದು ತಿಳಿಸಿದರು.

ವಿದ್ಯುತ್ ಮೀಟರ್ ಸ್ಥಳಾಂತರಕ್ಕೆ ನೋಟಿಸ್:ನಗರ ಪ್ರದೇಶಗಳಲ್ಲಿ ಬಹುತೇಕ ಕಟ್ಟಡಗಳಲ್ಲಿ ತಳಮಹಡಿ ಹಾಗೂ ಸೆಲ್ಲರ್ ಭಾಗದಲ್ಲಿ ವಿದ್ಯುತ್ ಮೀಟರ್ ಗಳಿದ್ದು, ಕಟ್ಟಡ ಅಥವಾ ಬಡಾವಣೆ ಜಲಾವೃತಗೊಂಡಾಗ ಮೀಟರ್ ಗಳು ಮುಳುಗಡೆಗೊಂಡು ವಿದ್ಯುತ್ ಸಂಪರ್ಕ ಕಲ್ಪಿಸುವುದು ಕಷ್ಟವಾಗುತ್ತಿದೆ. ಆದ್ದರಿಂದ ಎಲ್ಲ ಕಟ್ಟಡ ಮಾಲೀಕರು ವಿದ್ಯುತ್ ಮೀಟರ್ ಗಳನ್ನು ಮೇಲಿನ ಮಹಡಿಗೆ ಸ್ಥಳಾಂತರಿಸಬೇಕು ಎಂದು ತಿಳಿಸಿದರು.

ಈ ರೀತಿಯಲ್ಲಿ ಕಟ್ಟಡದ ಸೆಲ್ಲರ್ ಭಾಗದಲ್ಲಿ ಮೀಟರ್ ಅಳವಡಿಸಿರುವವರಿಗೆ ತಕ್ಷಣವೇ ನೋಟಿಸ್ ನೀಡಬೇಕು. ಒಂದು ವೇಳೆ ಮೀಟರ್ ಸ್ಥಳಾಂತರಿಸದಿದ್ದರೆ ವಿದ್ಯುತ್ ಸಂಪರ್ಕ ಕಡಿತಹೊಳಿಸುವಂತೆ ಹೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.

ವಿದ್ಯುತ್ ಕಂಬಗಳ ನಿರ್ವಹಣೆ ಬಗ್ಗೆ ಹೆಸ್ಕಾಂ ಅಧಿಕಾರಿಗಳು ಅಗತ್ಯ ಸಾಮಗ್ರಿಗಳನ್ನು ಮತ್ತು ಸಿಬ್ಬಂದಿಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಬೇಕು ಎಂದು ನಿರ್ದೇಶನ ನೀಡಿದರು.

ಉಪ ವಿಭಾಗಾಧಿಕಾರಿ ಶಿವಾನಂದ ಭಜಂತ್ರಿ ಮಾತನಾಡಿ, ಮುನ್ನೆಚ್ಚರಿಕೆ ಕ್ರಮವಾಗಿ ನದಿ ದಂಡೆಯ ಗ್ರಾಮಗಳಿಗೆ ಬೋಟ್ ಗಳನ್ನು ಒದಗಿಸಬೇಕು ಎಂದರು.

ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪಾಲಿಕೆ ಆಯುಕ್ತ ಕೆ.ಎಚ್. ಜಗದೀಶ್, ಉಪ ವಿಭಾಗಾಧಿಕಾರಿ ಅಶೋಕ ತೇಲಿ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಜಿಲಾನಿ ಮೊಖಾಶಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ. ಮುನ್ಯಾಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.