ADVERTISEMENT

‘ಕೃಷ್ಣೆಗೆ ನೀರು ಬಿಡಿಸದಿದ್ದರೆ ತೀವ್ರ ಹೋರಾಟ’

ಉಗಾರ ಬುದ್ರುಕ ಗ್ರಾಮದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಮೇ 2019, 13:04 IST
Last Updated 12 ಮೇ 2019, 13:04 IST
ಉಗಾರ ಬುದ್ರುಕ ಗ್ರಾಮದಲ್ಲಿ ಕೃಷ್ಣಾ ನದಿಗೆ ನೀರು ಬಿಡುವಂತೆ ಒತ್ತಾಯಿಸಿ ಕಾಗವಾಡ ಉಪ ತಹಶೀಲ್ದಾರ್‌ಗೆ ಸ್ಥಳೀಯರು ಮನವಿ ಸಲ್ಲಿಸಿದರು
ಉಗಾರ ಬುದ್ರುಕ ಗ್ರಾಮದಲ್ಲಿ ಕೃಷ್ಣಾ ನದಿಗೆ ನೀರು ಬಿಡುವಂತೆ ಒತ್ತಾಯಿಸಿ ಕಾಗವಾಡ ಉಪ ತಹಶೀಲ್ದಾರ್‌ಗೆ ಸ್ಥಳೀಯರು ಮನವಿ ಸಲ್ಲಿಸಿದರು   

ಮೋಳೆ: ‘ಮಹಾರಾಷ್ಟ್ರದ ಕೋಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 4 ದಿನಗಳಲ್ಲಿ ನೀರು ಬಿಡಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ನದಿ ತೀರದ ಗ್ರಾಮಗಳ ಜನರು ರಸ್ತೆಗಿಳಿದು ತೀವ್ರ ಹೋರಾಟ ಆರಂಭಿಸಬೇಕಾಗುತ್ತದೆ’ ಎಂದು ಉಗಾರ ಬುದ್ರುಕ ಗ್ರಾಮದ ವಿಕಾಸ ವೇದಿಕೆ ಮುಖಂಡರು ಎಚ್ಚರಿಕೆ ನೀಡಿದರು.

ಉಗಾರ ಬುದ್ರುಕ ಗ್ರಾಮದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಶೀತಲಗೌಡ ಪಾಟೀಲ, ‘2 ತಿಂಗಳುಗಳಿಂದ ಕೃಷ್ಣಾ ನದಿಯು ಸಂಪೂರ್ಣ ಬತ್ತಿ ಹೋಗಿದೆ. ಈ ಭಾಗದಲ್ಲಿ ನೀರಿನ ಹಾಹಾಕಾರ ಉಂಟಾಗಿದೆ. ಆದರೂ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರ, ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಪ್ರಾಮಾಣಿಕವಾಗಿ ಸ್ಪಂದಿಸಿಲ್ಲ. ಇದೇ ಧೋರಣೆ ಮುಂದುವರಿದರೆ ಆಡಳಿತವು ಜನರ ಆಕ್ರೋಶಕ್ಕೆ ಗುರಿಯಾಗಬೇಕಾಗುತ್ತದೆ’ ಎಂದು ಹೇಳಿದರು.

ತಾಲ್ಲೂಕು ಪಂಚಾಯ್ತಿ ಸದಸ್ಯ ವಸಂತ ಖೋತ ಮಾತನಾಡಿ, ‘ಸರ್ಕಾರವು ಇಲ್ಲಿನ ಜನರ ತಾಳ್ಮೆ ಪರೀಕ್ಷಿಸಬಾರದು. ಸಹನೆಯ ಕಟ್ಟೆ ಒಡೆಯುವ ಮುನ್ನವೇ ಕೃಷ್ಣಾ ನದಿಗೆ ನೀರು ಹರಿಸಿ ಜನರು ಹಾಗೂ ಜಾನುವಾರಗಳ ಪ್ರಾಣ ರಕ್ಷಿಸಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಮಹಾರಾಷ್ಟ್ರದ ರಾಜಾಪುರ ಡ್ಯಾಂನಿಂದ ನೀರು ಬಿಡುತ್ತಿರುವುದು ಮಹಾರಾಷ್ಟ್ರದ ಗ್ರಾಮಗಳಿಗೇ ಹೊರತು ಕರ್ನಾಟಕಕ್ಕಲ್ಲ. ಆ ನೀರು ಕರ್ನಾಟಕಕ್ಕೆ ಬಂದು ಸೇರುತ್ತಿಲ್ಲ. ಕೋಯ್ನಾ ಡ್ಯಾಂದಿಂದ ನೀರು ಬಿಟ್ಟಾಗ ಮಾತ್ರ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಜನರಿಗೆ ನೀರಿ ಸಿಗುತ್ತದೆ’ ಎಂದರು.

ವಿಕಾಸ ವೇದಿಕೆ ಸದಸ್ಯ ಬಂಡು ತಮದಡ್ಡಿ ಕಾಗವಾಡ ಉಪ ತಹಶೀಲ್ದಾರ್‌ ವಿಜಯಕುಮಾರ ಚೌಗಲಾ, ಕಂದಾಯ ಅಧಿಕಾರಿ ಬಸವರಾಜ ಬೋರಗಲ್ ಅವರಿಗೆ ಮನವಿ ಸಲ್ಲಿಸಿದರು.

ಮುಖಂಡರಾದ ಉದಯ ಉಮರಾಣಿ, ಶೀತಲ ಕುಂಬಾರ, ಅಭಿನಂದನ ಸದಲಗೆ, ಅಪ್ಪು ಸಲಗರೆ, ಮುರಗೇಶ ಕುಂಬಾರ, ರಾಹುಲ ಕಬಾಡಗೆ, ಅಣ್ಣಾಸಾಬ ಖೋತ, ಸುರೇಶ ಸಮಾಜಗೆ, ಶಾಂತಿನಾಥ ವಸವಾಡೆ, ಮನೋಹರ ದೇವಮೂರೆ, ಶೀತಲ ಶಹಾ, ದಾದಾಪೀರ್‌ ನೇಜಕರ, ಕಲ್ಲು ಕುರಬರ, ಸಾಗರ ಪೂಜಾರಿ, ಸಚಿನ ಪೂಜಾರಿ, ಶಂಭು ಜೋಶಿ, ಸತೀಶ ಕಾಂಬಳೆ, ಸುಕುಮಾರ ಕಾಂಬಳೆ, ಶೇಖರ ಕಾಟಕರ, ಅಮಿತ ಶೇಖ, ಬಾಳು ಹವಲೆ, ಕನ್ನಡ ಬಳಗ, ಗೋಮಟೇಶ ಗೆಳೆಯರ ಬಳಗದವರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.