ADVERTISEMENT

ಬೆಳಗಾವಿ | ದೊಡ್ಡ ಜಿಲ್ಲೆಗೆ ಹಂಚಿಕೆಯಾಗುತ್ತಿರುವ ಲಸಿಕೆ ಪ್ರಮಾಣ ಕಡಿಮೆ: ಅಸಮಾಧಾನ

ಎಂ.ಮಹೇಶ
Published 13 ಜೂನ್ 2021, 19:30 IST
Last Updated 13 ಜೂನ್ 2021, 19:30 IST
ಕೋವಿಡ್‌ ಲಸಿಕೆ (ಸಾಂದರ್ಭಿಕ ಚಿತ್ರ)
ಕೋವಿಡ್‌ ಲಸಿಕೆ (ಸಾಂದರ್ಭಿಕ ಚಿತ್ರ)   

ಬೆಳಗಾವಿ: ಜಿಲ್ಲೆಯಲ್ಲಿ ಕೋವಿಡ್–19 ಲಸಿಕಾಕರಣ ಕುಂಟುತ್ತಾ ಸಾಗಿದೆ.

ಇಲ್ಲಿನ ಜನಸಂಖ್ಯೆಗೆ ತಕ್ಕಂತೆ ಸರ್ಕಾರದಿಂದ ಸಮರ್ಪಕವಾಗಿ ಲಸಿಕೆ ಪೂರೈಕೆ ಆಗದಿರುವುದು ಇದಕ್ಕೆ ಕಾರಣ.

ದೊರೆಯುತ್ತಿರುವ ಲಸಿಕೆಯು ‘ಬಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ’ ಎನ್ನುವಂತಾಗಿದೆ. ಜನರು ಪಡೆಯುವುದಕ್ಕೆ ಸಿದ್ಧವಾಗಿದ್ದರೂ, ಪೂರೈಕೆ ಇಲ್ಲವಾಗಿದೆ.

ADVERTISEMENT

ಜಿಲ್ಲೆಯಲ್ಲಿ 18 ವರ್ಷ ಮೇಲಿನ 38,99,400 ಮಂದಿಗೆ ಕೋವಿಡ್ ರೋಗ ನಿರೋಧಕ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ಶುಕ್ರವಾರದವರೆಗೆ ದೊರೆತಿರುವುದು 7.74 ಲಕ್ಷ ಮಂದಿಗೆ ಮಾತ್ರವೇ. ಮೊದಲನೇ ಡೋಸ್ ಪಡೆದವರು 6.39 ಲಕ್ಷ. ಎರಡೂ ಡೋಸ್ ಹಾಕಿಸಿಕೊಂಡವರು 1.42 ಲಕ್ಷ ಜನರಷ್ಟೆ. ಇನ್ನೂ 4.95 ಲಕ್ಷ ಜನರು 2ನೇ ಡೋಸ್‌ಗಾಗಿ ಕಾಯುತ್ತಿದ್ದಾರೆ.

ಪ್ರಸ್ತುತ 8,690 ವಯಲ್ ಕೋವ್ಯಾಕ್ಸಿನ್ ಹಾಗೂ 5,120 ವಯಲ್ ಕೋವಿಶೀಲ್ಡ್‌ ಲಭ್ಯವಿದೆ. ಜಿಲ್ಲೆಯಲ್ಲಿ ನಿತ್ಯ 30ಸಾವಿರ ಮಂದಿಗೆ ಲಸಿಕೆ ನೀಡುವ ಗುರಿಯನ್ನು ಜಿಲ್ಲಾಡಳಿತ ಹೊಂದಿದೆ. ಪೂರೈಕೆ ಪ್ರಮಾಣ ಕಡಿಮೆ ಇರುವುದು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ವೇಗಕ್ಕೆ ‘ಬ್ರೇಕ್’ ಹಾಕುತ್ತಿದೆ. ಜನರ ಅಸಮಾಧಾನಕ್ಕೂ ಕಾರಣವಾಗುತ್ತಿದೆ.

ಭೀತಿಯ ಕಾರಣದಿಂದಾಗಿ 18ರಿಂದ 44 ವಯಸ್ಸಿನವರ ಗುರಿಯು 22,95,517 ಇದೆ. ಇದರಲ್ಲಿ ಈವರೆಗೆ 39ಸಾವಿರ ಮಂದಿಗೆ ಮಾತ್ರವೇ (ಮೇ 11ರಿಂದ ಆರಂಭವಾಗಿದೆ) ಲಸಿಕೆ ನೀಡಲಾಗಿದೆ. ‘ಆಸ್ಪತ್ರೆಗೆ ಹೋಗಿದ್ದೆವು. ಲಸಿಕೆ ಸಂಗ್ರಹವಿಲ್ಲ. ಬಂದಾಗ ತಿಳಿಸುತ್ತೇವೆ. ಆಗ ಬನ್ನಿ ಎಂದು ಹೇಳಿದರು’ ಎನ್ನುವ ದೂರುಗಳು ಗ್ರಾಮೀಣ ಪ್ರದೇಶದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿವೆ. ಕೋವಿಡ್ ಪ್ರಕರಣಗಳ ಸಂಖ್ಯೆಯು ಹೆಚ್ಚುತ್ತಿರುವುದರಿಂದ ಉಂಟಾಗಿರುವ ಭೀತಿಯ ಕಾರಣದಿಂದಾಗಿ ಲಸಿಕೆಗೆ ಹೆಚ್ಚಿನ ಬೇಡಿಕೆ ಬಂದಿದೆ.

ಜಿಲ್ಲಾಸ್ಪತ್ರೆಯಲ್ಲಿ ಲಭ್ಯತೆ ಕಡಿಮೆ ಇರುವುದರಿಂದ, ನಗರ ವಾಸಿಗಳು ಆನ್‌ಲೈನ್‌ನಲ್ಲಿ ಹಳ್ಳಿಗಳ ಲಸಿಕಾ ಕೇಂದ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ. ಕೆಲವರು ಹೊರವಲಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ದೌಡಾಯಿಸುತ್ತಿದ್ದಾರೆ.

ಆಸ್ಪತ್ರೆಗಳ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ‘ತಮಗೆ ಬೇಕಾದವರಿಗೆ’ ಆದ್ಯತೆ ಕೊಡುತ್ತಿರುವ ಬಗ್ಗೆಯೂ ದೂರುಗಳಿವೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ನೀಡಿಕೆಯಲ್ಲೂ ತಾರತಮ್ಯ ಅನುಸರಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.

‘ಬೇಡಿಕೆಗೆ ತಕ್ಕಂತೆ ಲಸಿಕೆ ಪೂರೈಕೆ ಇಲ್ಲದಿರುವುದು ಹಿನ್ನಡೆಯಾಗಿದೆ. 18 ವರ್ಷ ಮೇಲಿನವರಿಗೆ ಜೂನ್‌ 21ರಿಂದ ಉಚಿತವಾಗಿ ಲಸಿಕೆ ದೊರೆಯುವಂತೆ ಮಾಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಹೆಚ್ಚಿನ ಪ್ರಮಾಣದಲ್ಲಿ ದೊರೆತರೆ ಅನುಕೂಲವಾಗಲಿದೆ’ ಎನ್ನುತ್ತಾರೆ ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ.

ಶಿಫಾರಸು ಪತ್ರ ತಂದವರಿಗೆ
ಮೂಡಲಗಿ:
‘ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ಲಸಿಕಾ ಕೇಂದ್ರದಲ್ಲಿ ನಿತ್ಯ ಸರಾಸರಿ 50ರಿಂದ 100 ಮಂದಿಗೆ ಲಸಿಕೆ ನೀಡಲಾಗುತ್ತಿದೆ. 18 ವಯಸ್ಸು ದಾಟಿದ ಕೊರೊನಾ ಸೇನಾನಿಗಳಿಗೆ ಮೂರು ವಾರಗಳ ಹಿಂದಿನಿಂದ ಆರಂಭಿಸಲಾಗಿದೆ. ಬ್ಯಾಂಕ್‌, ಸಹಕಾರಿ ಪತ್ತಿನ ಸಂಸ್ಥೆ, ಔಷಧಿ ಅಂಗಡಿಕಾರರು, ವ್ಯಾಪಾರಸ್ಥರು, ಬೀದಿಬದಿ ವ್ಯಾಪಾರಿಗಳು ಸೇರಿದಂತೆ ಸಾರ್ವಜನಿಕರೊಂದಿಗೆ ಹೆಚ್ಚು ಸಂಪರ್ಕದಲ್ಲಿರುವವರಿಗೆ ಆದ್ಯತೆ ನೀಡಲಾಗುತ್ತಿದೆ’ ಎಂದು ಮುಖ್ಯ ವೈದ್ಯಾಧಿಕಾರಿ ಡಾ.ಭಾರತಿ ಕೋಣಿ ತಿಳಿಸಿದರು.

‘ಪುರಸಭೆ ಮುಖ್ಯಾಧಿಕಾರಿಯಿಂದ ಶಿಫಾರಸು ಪತ್ರ ತರುವವ್ಯಾಪಾರಿಗಳು, ಬೀದಿ ಬದಿ ವ್ಯಾಪಾರಿಗಳಿಗೆ ಲಸಿಕೆ ನೀಡಲಾಗುತ್ತಿದೆ’ ಎನ್ನುತ್ತಾರೆ ಅವರು.

18 ವಯಸ್ಸು ಮೇಲಿನವರು ಲಸಿಕೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.

ಹಳ್ಳೂರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆ ನೀಡುತ್ತಿಲ್ಲ; ವೈದ್ಯರೂ ಇಲ್ಲ ಎಂದು ನಿವಾಸಿ ಬಿ.ಎಸ್. ಸಂತಿ ತಿಳಿಸಿದರು.

ಅಸಮಾಧಾನ
ಗೋಕಾಕ:
ಆದ್ಯತಾ ವರ್ಗಕ್ಕೆ ಸೇರಿದವರಿಗೂ ಅಪೇಕ್ಷಿತ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಆಗದಿರುವುದು ವಕೀಲರ ಅಸಮಾಧಾನಕ್ಕೆ ಕಾರಣವಾಗಿದೆ.

‘ಸಂಘದ 45 ವಯೋಮಿತಿಯೊಳಗಿನ 400 ಮಂದಿಗೆ ಲಸಿಕೆ ನೀಡುವಂತೆ ಟಿಎಚ್‌ಒ ಅವರನ್ನು ಹಲವು ಬಾರಿ ಒತ್ತಾಯಿಸಿದ್ದೇವೆ. ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಪೂರೈಕೆ ಆಗುತ್ತಲೇ ಸಂಘದ ಇನ್ನಷ್ಟು ಸದಸ್ಯರಿಗೆ ಒದಗಿಸಲಾಗುವುದು ಎಂದಿದ್ದಾರೆ’ ಎಂದು ವಕೀಲರ ಸಂಘದ ಅಧ್ಯಕ್ಷ ಸಿ.ಡಿ. ಹುಕ್ಕೇರಿ ತಿಳಿಸಿದರು.

ಬೆಳಗಾವಿಗರ ದೌಡು!
ಖಾನಾಪುರ:
ಕಳೆದ ಹಲವು ದಿನಗಳಿಂದ ಬೆಳಗಾವಿ ನಗರದ ನಿವಾಸಿಗಳು ಕೋವಿಡ್ ಲಸಿಕೆ ಪಡೆಯಲು ಇಲ್ಲಿನ ತಾಲ್ಲೂಕು ಆಸ್ಪತ್ರೆಯನ್ನು ಆನ್‌ಲೈನ್ ಮೂಲಕ ನಮೂದಿಸಿ ಬರುತ್ತಿದ್ದಾರೆ. ಇದರಿಂದಾಗಿ, ಬಹುತೇಕ ಮಾಧ್ಯಮ ವರ್ಗದ ಮತ್ತು ಬಡ ಜನರೇ ಹೆಚ್ಚಿರುವ ತಾಲ್ಲೂಕಿನ ಜನತೆ ಲಸಿಕೆಯಿಂದ ವಂಚಿತರಾಗುತ್ತಿದ್ದಾರೆ.

ಆದ್ಯತಾ ವಲಯದವರಿಗೂ ಪಡೆಯಲು ಸಾಧ್ಯವಾಗುತ್ತಿಲ್ಲ. ಮೂಲಗಳ ಪ್ರಕಾರ, ಇಲ್ಲಿ ನಿತ್ಯ ನೀಡಲಾಗುತ್ತಿರುವ ಪೈಕಿ ಶೇ.60ರಷ್ಟು ಲಸಿಕೆ ‘ಹೊರಗಿನವರೆ’ ಪಾಲಾಗುತ್ತಿದೆ. ಆನ್‌ಲೈನ್‌ನಲ್ಲಿ ನೋಂದಾಯಿಸುವ ಕಾರಣ ನಾವೇನೂ ಮಾಡಲಾಗುತ್ತಿಲ್ಲ ಎನ್ನುವ ಅಸಹಾಯಕತೆ ಅಧಿಕಾರಿಗಳದಾಗಿದೆ.

ಆದ್ಯತಾ ವಲಯದವರಿಗೂ ಸಿಕ್ಕಿಲ್ಲ
ಹುಕ್ಕೇರಿ:
ತಾಲ್ಲೂಕಿನಲ್ಲಿ2,237 ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರ ಪೈಕಿ 1948 ಮಂದಿಗೆ (ಶೇ.87.08) ನೀಡಲಾಗಿದೆ. 2,316 ಮುಂಚೂಣಿ ಕಾರ್ಯಕರ್ತರ ಪೈಕಿ 1,907 ಜನರಿಗೆ ಕೊಡಲಾಗಿದೆ ಎಂದು ಟಿಎಚ್‌ಒ ಡಾ.ಉದಯ ಕುಡಚಿ ತಿಳಿಸಿದರು.

ಕೊರೊನಾ ಮುಂಚೂಣಿ ಯೋಧರಾದ ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರಿ ಸಂಘದ ಎಲ್ಲ ನೌಕರರು, ನೀರು ಸರಬರಾಜು ಸಿಬ್ಬಂದಿ, ಪತ್ರಕರ್ತರು, ಅಂಚೆ ಇಲಾಖೆ ಹಾಗೂ ಬ್ಯಾಂಕ್ ನೌಕರರು, ಅಡುಗೆ ಅನಿಲ ಸಿಲಿಂಡರ್ ವಿತರಕರಲ್ಲಿ ಶೇ.80ರಷ್ಟು ಮಂದಿಗೆ ಲಸಿಕೆ ನೀಡಲಾಗಿದೆ. ಆಟೊರಿಕ್ಷಾ, ಕ್ಯಾಬ್ ಚಾಲಕರು, ಸಾರಿಗೆ ಸಿಬ್ಬಂದಿಗೆ, ಕಾರ್ಮಿಕರು, ಎಪಿಎಂಸಿ ಸಿಬ್ಬಂದಿ ಹಾಗೂ ಅಂಗವಿಕಲರಿಗೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ನೀಡಲು ಆರಂಭಿಸಲಾಗಿದೆ ಎಂದು ತಹಶೀಲ್ದಾರ್ ಡಾ.ದೊಡ್ಡಪ್ಪ ಹೂಗಾರ ಮಾಹಿತಿ ನೀಡಿದರು.

ಮುಂಚೂಣಿ ಯೋಧರಿಗೆ ಆದ್ಯತೆ
ಚನ್ನಮ್ಮನ ಕಿತ್ತೂರು:
ಕೊರೊನಾ ಲಸಿಕೆ ಪಡೆಯುವಲ್ಲಿ ಕಿತ್ತೂರು ತಾಲ್ಲೂಕಿನಲ್ಲಿಯ ಮುಂಚೂಣಿ ಸೇನಾನಿಗಳು ಮುಂಚೂಣಿಯಲ್ಲಿಯೇ ಇದ್ದಾರೆ. ಆರೋಗ್ಯ, ಪೊಲೀಸ್, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು 2ನೇ ಡೋಸ್ ಕೂಡ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಶೀಲ್ಡ್ ಲಸಿಕೆ ಬರುತ್ತಿದ್ದಂತೆಯೇ ಆರೋಗ್ಯ ಇಲಾಖೆಯವರು, ಪೊಲೀಸರು ಸೇರಿದಂತೆ ವಿವಿಧ ಇಲಾಖೆಗಳ ಮುಂಚೂಣಿ ಯೋಧರಿಗೆ ನೀಡಲಾಯಿತು. ಆಗ 21 ದಿನಗಳ ನಂತರ ನೀಡಲಾದ 2ನೇ ಡೋಸ್ ಅನ್ನು ಕೆಲವು ಇಲಾಖೆಯವರು ಪಡೆದುಕೊಂಡರು. ಆದರೆ, ಬರುತ್ತಾ 2ನೇ ಲಸಿಕೆ ನೀಡುವ ಅವಧಿ ಹೆಚ್ಚಿಸಲಾಯಿತು. ಈಗ 84ರಿಂದ 112ನೇ ದಿನದವರೆಗೂ 2ನೇ ಡೋಸ್ ಪಡೆಯಬಹುದು ಎಂದು ತಿಳಿಸಲಾಗಿದೆ. ವಿಳಂಬವಾಗಿ ಹಾಕಿಸಿಕೊಂಡವರು 2ನೇ ಡೋಸ್‌ಗೆ ಕಾಯುವಂತಾಗಿದೆ.

ಅಲೆಯಬೇಕಾದ ಸ್ಥಿತಿ
ಎಂ.ಕೆ. ಹುಬ್ಬಳ್ಳಿ:
ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುವವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದ್ದರೂ, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಈ ಸೌಲಭ್ಯವಿಲ್ಲ. ಹೀಗಾಗಿ, ಅನಿವಾರ್ಯವಾಗಿ ದೂರದ ತಾಲ್ಲೂಕು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ಅಲೆಯಬೇಕಾದ ಸ್ಥಿತಿ ಅವರದರಾಗಿದೆ. ಎಲ್ಲರಿಗೂ ಸ್ಥಳೀಯವಾಗಿಯೇ ಸಿಗುವಂತೆ ವ್ಯವಸ್ಥೆ ಮಾಡಬೇಕು ಎನ್ನುವ ಆಗ್ರಹವಿದೆ.

ಬಹುತೇಕರಿಗೆ ಸಿಕ್ಕಿಲ್ಲ!

ಸವದತ್ತಿ: ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ನಿತ್ಯ 100 ಮಂದಿಗೆ ಲಸಿಕೆ ನೀಡಲಾಗುತ್ತಿದೆ. 95,804 ಜನ ಲಸಿಕೆ ಪಡೆಯಬೇಕಿತ್ತು. 45 ವರ್ಷದ 30,728 ಹಾಗೂ 18 ವರ್ಷ ಮೇಲಿನ 3,370 ಮಂದಿ ಪಡೆದಿದ್ದಾರೆ. ತಾಲ್ಲೂಕಿನಾದ್ಯಂತ 17 ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಒಂದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಲಸಿಕಾ ಕಾರ್ಯ ನಡೆದಿದೆ. ಅಂಗವಿಕಲರಲ್ಲಿ ಶೇ 30ರಷ್ಟು ಮಂದಿಯಷ್ಟೇ ಪಡೆದಿದ್ದಾರೆ. ಅಟೊರಿಕ್ಷಾ ಮತ್ತು ಕ್ಯಾಬ್‌ ಚಾಲಕರು, ಕಟ್ಟಡ ಕಾರ್ಮಿಕರಿಗೆ ಲಸಿಕೆ ಸಿಕ್ಕಿಲ್ಲ. ಹಲವರು ಅಲೆದಾಡಿ ಸಾಕಾಗಿದ್ದಾರೆ.

ಜನರು, ಅಧಿಕಾರಿಗಳೇನಂತಾರೆ?
18 ವಯಸ್ಸು ಮೇಲಿನ ಕೆಲವರು ಸಹಕಾರಿ ಸಂಸ್ಥೆ, ವ್ಯಾಪಾರಸ್ಥರಿಂದ ಶಿಫಾರಸು ಪಡೆದು ಲಸಿಕೆ ಹಾಕಿಸಿಕೊಳ್ಳುತ್ತಿದ್ದು, ಇದು ಲಸಿಕಾ ಕೇಂದ್ರದಲ್ಲಿ ಜನದಟ್ಟಣೆಗೆ ಕಾರಣವಾಗುತ್ತದೆ. ಈ ತರಹ ಆಗದಂತೆ ಸಂಬಂಧಿಸಿದವರು ಮತ್ತು ಪುರಸಭೆಯವರು ನಿಗಾ ವಹಿಸಬೇಕು.
-ಕೃಷ್ಣ ನಾಶಿ, ಮೂಡಲಗಿ

ಪ್ರಸ್ತುತ ಆದ್ಯತೆ ಮೇಲೆ ಕೋವಿಡ್ ಲಸಿಕೆ ನೀಡಲಾಗುತ್ತಿದೆ. ಕೊರೊನಾ ಮುಂಚೂಣಿ ಯೋಧರಿಗೆ ಕೊಡಲಾಗಿದೆ. ಜೂನ್‌ 21ರ ನಂತರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆರಂಭವಾಗಲಿದೆ.
-ಡಾ.ಸಂಜಯ ಸಿದ್ದನ್ನವರ, ಟಿಎಚ್‌ಒ, ಬೈಲಹೊಂಗಲ

*
ಗೋಕಾಕ ವಕೀಲರ ಸಂಘದ 400 ಮಂದಿಗೆ ಕೋವಿಡ್ ಲಸಿಕೆ ಬೇಡಿಕೆ ಇದೆ. ಆದರೆ, ನೂರು ಮಂದಿಗೆ ಮಾತ್ರ ದೊರೆತಿದೆ. ಮನವಿಗೆ ಸಮರ್ಪಕ ಸ್ಪಂದನೆ ಸಿಕ್ಕಿಲ್ಲ.
-ಸಿ.ಡಿ. ಹುಕ್ಕೇರಿ, ಅಧ್ಯಕ್ಷ, ವಕೀಲರ ಸಂಘ, ಗೋಕಾಕ

*
ಮೊದಲು ಕೊರೊನಾ ಯೋಧರಿಗೆ ಆದ್ಯತೆ ನೀಡಲಾಯಿತು. ಕ್ರಮೇಣ ಸರ್ಕಾರದ ಮಾರ್ಗಸೂಚಿ ಪ್ರಕಾರ ಕೊರೊನಾ ಮುಂಚೂಣಿ ಯೋಧರಿಗೆ ಕೊಡಲಾಗುತ್ತಿದೆ. ಹಂತ ಹಂತವಾಗಿ ಲಸಿಕೆ ಪೂರೈಕೆ ಆಗುತ್ತಿದೆ. ಅದನ್ನು ಆಸ್ಪತ್ರೆಗಳಿಗೆ ಹಂಚಿಕೆ ಮಾಡಲಾಗುತ್ತಿದೆ
-ಡಾ.ಐ.ಪಿ. ಗಡಾದ, ಜಿಲ್ಲಾ ಲಸಿಕಾಧಿಕಾರಿ, ಬೆಳಗಾವಿ

*
ಜನಸಂಖ್ಯೆ ಆಧರಿಸಿ ಲಸಿಕೆ ಬೇಡಿಕೆ ಹೆಚ್ಚಾಗಿದೆ. ಆದ್ದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆ ಪೂರೈಸುವಂತೆ ಕೋರಲಾಗಿದೆ. ಜಿಲ್ಲೆಯಲ್ಲಿ ಪ್ರತಿದಿನ 30ಸಾವಿರ ಲಸಿಕೆ ನೀಡುವಷ್ಟು ವ್ಯವಸ್ಥೆ ಇದೆ. ಪೂರೈಕೆ ಆದಂತೆ ಪ್ರಮಾಣ ಹೆಚ್ಚಿಸಲಾಗುವುದು.
-ಎಂ.ಜಿ. ಹಿರೇಮಠ, ಜಿಲ್ಲಾಧಿಕಾರಿ

(ಪ್ರಜಾವಾಣಿ ತಂಡ: ಪ್ರದೀಪ ಮೇಲಿನಮನಿ, ಬಾಲಶೇಖರ ಬಂದಿ, ರಾಮೇಶ್ವರ ಕಲ್ಯಾಣಶೆಟ್ಟಿ, ಪ್ರಸನ್ನ ಕುಲಕರ್ಣಿ, ಬಿ.ಎಂ. ಶಿರಸಂಗಿ, ಎನ್.ಪಿ. ಕೊಣ್ಣೂರ, ಎಸ್. ವಿಭೂತಿಮಠ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.