ಡಿ.ಕೆ. ಶಿವಕುಮಾರ್
ಬೆಳಗಾವಿ: ‘ಬಿಜೆಪಿಯವರು ಮೊಸರಿನಲ್ಲಿ ಕಲ್ಲು ಹುಡುಕುವ ಪ್ರಯತ್ನ ಮಾಡುತ್ತಿದ್ದಾರೆ. ‘ಗಾಂಧಿ ಭಾರತ’ ಕಾರ್ಯಕ್ರಮದ ಯಶಸ್ಸು ಅವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅವರ ಹೊಟ್ಟೆಕಿಚ್ಚಿಗೆ ನಮ್ಮಲ್ಲಿ ಮದ್ದಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದರು.
‘ಕಾಂಗ್ರೆಸ್‌ನ ಕೆಲ ಬ್ಯಾನರುಗಳಲ್ಲಿ ಭಾರತದ ನಕ್ಷೆಯನ್ನು ತಿರುಚಿ ಅಪಮಾನ ಮಾಡಲಾಗಿದೆ’ ಎಂಬ ಬಿಜೆಪಿ ನಾಯಕರ ಆರೋಪಕ್ಕೆ, ನಗರದಲ್ಲಿ ಗುರುವಾರ ಅವರು ಪ್ರತಿಕ್ರಿಯೆ ನೀಡಿದರು.
‘ಮಾಹಿತಿ ಕೊರತೆಯಿಂದ ಕೆಲ ನಾಯಕರು ಗಮನಿಸದೇ ಹಾಗೆ ಮಾಡಿದ್ದಾರೆ. ಈಗಾಗಲೇ ಅಂಥ ಕಟೌಟು, ಬ್ಯಾನರುಗಳನ್ನು ತೆಗೆಸಿದ್ದೇವೆ. ಈ ಸಂಭ್ರಮದ ಮಧ್ಯೆ ಇಂಥವಕ್ಕೆ ದೊಡ್ಡ ಮಹತ್ವ ಕೊಡಬಾರದು’ ಎಂದರು.
ಆಗಿದ್ದೇನು?:
ಗಾಂಧಿ ಭಾರತ ಕಾರ್ಯಕ್ರಮದ ಮುಖ್ಯ ವೇದಿಕೆ ಹಾಗೂ ಕೆಲವು ವೃತ್ತಗಳಲ್ಲಿ ಶಾಸಕ ಆಸಿಫ್ ಸೇಠ್ ಅವರ ಬ್ಯಾನರುಗಳನ್ನು ಅಳವಡಿಸಲಾಗಿದ್ದು, ಭಾರತ ನಕ್ಷೆಯಲ್ಲಿ ಜಮ್ಮು–ಕಾಶ್ಮೀರದ ಕೆಲಭಾಗ ಬಿಟ್ಟುಹೋಗಿದೆ. ಶಾಸಕ ಅಭಯ ಪಾಟೀಲ ಸೇರಿದಂತೆ ಬಿಜೆಪಿಯ ಹಲವರು ನಾಯಕರೂ ಇದಕ್ಕೆ ಕಿಡಿ ಕಾರಿದ್ದಾರೆ.
‘ಕಾಂಗ್ರೆಸ್ಸಿಗರು 1947ರಲ್ಲಿ ದೇಶವನ್ನು ತುಂಡು ಮಾಡಿದರು. ಈಗ ತಮ್ಮ ಪಕ್ಷದ ಅಧಿವೇಶನ ಮಾಡಿ ಭಾರತದ ನಕ್ಷೆ ತುಂಡರಿಸಿ ಅವಮಾನ ಮಾಡಿದ್ದಾರೆ. ಅವರು ದೇಶದ ಕ್ಷಮೆ ಕೇಳಬೇಕು’ ಎಂದೂ ಅಭಯ ಪಾಟೀಲ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.