ಬೆಳಗಾವಿ: ನಗರದಲ್ಲಿ ಭಾನುವಾರ ಸಡಗರ ಮತ್ತು ಸೌಹಾರ್ದದಿಂದ ಈದ್–ಮಿಲಾದ್ ಮೆರವಣಿಗೆ ನಡೆಯಿತು. ಮುಸ್ಲಿಮರೊಂದಿಗೆ ಹಿಂದೂಗಳೂ ಪಾಲ್ಗೊಂಡರು.
ಸೆಪ್ಟೆಂಬರ್ 5ರಂದು ಮೆರವಣಿಗೆ ನಿಗದಿ ಆಗಿತ್ತು. ಆದರೆ, ಸೆಪ್ಟೆಂಬರ್ 6ರಂದು ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆ ಮೆರವಣಿಗೆಯಿದ್ದ ಕಾರಣ ಇದನ್ನು ಮುಂದೂಡಲಾಗಿತ್ತು.
ಮುಸ್ಲಿಂ ಮುಖಂಡರು, ಧಾರ್ಮಿಕ ಗುರುಗಳು ಅಲ್ಲದೇ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಪ್ರಮುಖರೂ ಮೆರವಣಿಗೆಯಲ್ಲಿ ಪಾಲ್ಗೊಂಡರು.
ಮೆರವಣಿಗೆಯಲ್ಲಿ ಧ್ವಜಗಳು ರಾರಾಜಿಸಿದವು. ‘ಕವ್ವಾಲಿ’ಗಳು ಅನುರಣಿಸಿದವು. ಸಂಗೀತ ವಾದ್ಯಗಳ ಅಬ್ಬರವಿತ್ತು. ವಿವಿಧ ಸಂಘಟನೆಯವರು ಬಾಳೆಹಣ್ಣು, ಐಸ್‌ಕ್ರೀಮ್, ಲಡ್ಡು, ಕುಡಿಯುವ ನೀರು ಮತ್ತು ಶರಬತ್ ವಿತರಿಸಿದರು. ಧರ್ಮಗುರು ಮುಫ್ತಿ ಮಂಜೂರ್ ಆಲಂ ಅವರು ಹಬ್ಬದ ಸಂದೇಶ ಸಾರಿದರು.
ಶಾಸಕ ಆಸೀಫ್ ಸೇಠ್, ಮಾಜಿ ಶಾಸಕ ಫಿರೋಜ್ ಸೇಠ್, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಪೊಲೀಸ್ ಕಮಿಷನರ್ ಭೂಷಣ ಬೊರಸೆ ಇತರ ಅಧಿಕಾರಿಗಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.