ADVERTISEMENT

ಪರೀಕ್ಷೆ ಅಕ್ರಮ| ಎಲೆಕ್ಟ್ರಾನಿಕ್ ಉಪಕರಣ ಮಾರುತ್ತಿದ್ದ ಬೆಂಗಳೂರಿನ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2022, 17:48 IST
Last Updated 8 ಸೆಪ್ಟೆಂಬರ್ 2022, 17:48 IST
 ಮಹಮ್ಮದ್‌ ಅಜೀಮುದ್ದೀನ್‌  ಮತ್ತು ಆತನಿಂದ ವಶಕ್ಕೆ ಪಡೆದ ಉಪಕರಣಗಳು
ಮಹಮ್ಮದ್‌ ಅಜೀಮುದ್ದೀನ್‌ ಮತ್ತು ಆತನಿಂದ ವಶಕ್ಕೆ ಪಡೆದ ಉಪಕರಣಗಳು    

ಬೆಳಗಾವಿ: ಜಿಲ್ಲೆಯ ಗೋಕಾಕ ನಗರದಲ್ಲಿ ಈಚೆಗೆ ನಡೆದ ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ, ಎಲೆಕ್ಟ್ರಾನಿಕ್‌ ಡಿವೈಸ್‌ ಹಾಗೂ ಸ್ಮಾರ್ಟ್‌ ವಾಚ್‌ ಪೂರೈಸಿದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಬೆಳಗಾವಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಕಾರ್ಯಾಚರಣೆಯ ಮೂಲಕ ರಾಜ್ಯದ ವಿವಿಧ ಪರೀಕ್ಷೆಗಳಲ್ಲೂ ಅಕ್ರಮ ಎಸಗಲು ಅವಕಾಶ ಮಾಡಿಕೊಟ್ಟ ಪ್ರಕರಣಗಳಿಗೂ ಸಾಕ್ಷ್ಯ ಸಿಕ್ಕಂತಾಗಿದೆ.

ಬೆಂಗಳೂರಿನ ದೇವಸಂದ್ರದ ನಿವಾಸಿ, ಎಸ್ಪಿ ರಸ್ತೆಯಲ್ಲಿ ‘ಸ್ಪೈ ಜೋನ್‌’ ಎಂಬ ಎಲೆಕ್ಟ್ರಾನಿಕ್‌ ಮಳಿಗೆ ಇಟ್ಟುಕೊಂಡ ಮಹಮ್ಮದ್‌ ಅಜೀಮುದ್ದೀನ್‌ (37) ಬಂಧಿತ ಆರೋಪಿ. ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ಅಭ್ಯರ್ಥಿಗಳಿಗೆ ಅಕ್ರಮ ಎಸಗಲು ಪೂರೈಸಿದ ಹಲವು ಎಲೆಕ್ಟ್ರಾನಿಕ್‌ ಉಪಕರಣಗಳನ್ನೂ ಈತನಿಂದ ವಶಕ್ಕೆ ಪಡೆಯಲಾಗಿದ್ದು, ಮಳಿಗೆ ಸೀಜ್‌ ಮಾಡಲಾಗಿದೆ.

ಈಚೆಗೆ ನಡೆದ ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷಾ ಅಕ್ರಮದ ಆರೋಪಿಗಳನ್ನು ಜಾಲಾಡಲು ಹೋದ ಪೊಲೀಸರಿಗೆ ಈ ಜಾಲದ ಮುಖ್ಯ ಆರೋಪಿಯೇ ಸಿಕ್ಕಿಬಿದ್ದಿದ್ದಾನೆ. ಈತ ಎಲೆಕ್ಟ್ರಾನಿಕ್‌ ಸೂಕ್ಷ್ಮ ಉಪಕರಣಗಳನ್ನು ದೆಹಲಿ, ಹೈದರಾಬಾದ್‌ನ ಡೀಲರ್‌ಗಳಿಂದ ಅಕ್ರಮವಾಗಿ ಖರೀದಿ ಮಾಡಿಕೊಂಡು ಬರುತ್ತಿದ್ದ.

ADVERTISEMENT

ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳಿಗೆ ಬ್ಲೂಟೂತ್‌, ಸ್ಮಾರ್ಟ್‌ ವಾಚ್‌ ನೀಡಿದ್ದ ಸಂಜೀವ ಭಂಡಾರಿ ಈತನಿಂದಲೇ ಉಪಕರಣಗಳನ್ನು ಖರೀದಿಸಿ ಅಭ್ಯರ್ಥಿಗಳಿಗೆ ಮಾರಿದ್ದ. ಅವುಗಳನ್ನು ಖರೀದಿಸಿದ ಸಂಜೀವ ಭಂಡಾರಿಯನ್ನು ಪೊಲೀಸರು ಈಚೆಗೆ ಬಂಧಿಸಿದ್ದರು. ಆತ ನೀಡಿದ ಮಾಹಿತಿ ಆಧರಿಸಿ ಮೂಲಕ್ಕೇ ಕೈ ಹಾಕಿದ ಪೊಲೀಸರು, ಇಡೀ ಎಲೆಕ್ಟ್ರಾನಿಕ್‌ ಮಳಿಗೆಯನ್ನೇ ಜಾಲಾಡಿದರು.

ಬಂಧಿತನಿಂದ ಎರಡು ಮೊಬೈಲ್, ವಿವಿಧ ಬಗೆಯ ಎಲೆಕ್ಟ್ರಾನಿಕ್ ಉಪಕರಣ ಸೇರಿ ಒಟ್ಟು 179 ವಸ್ತುಗಳು, ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸಿದ ಏಳು ಎನ್–95 ಮಾಸ್ಕ್, ಎಲೆಕ್ಟ್ರಾನಿಕ್ ಡಿವೈಸ್ ಅಳವಡಿಸಿದ 41 ಬನಿಯನ್, ವಿವಿಧ ಬಗೆಯ 445 ಎಲೆಕ್ಟ್ರಾನಿಕ್ ಇಯರ್ ಪೀಸ್ (ಕಿವಿಯಲ್ಲಿ ಇಡುವುದು), ವಿವಿಧ ಬಗೆಯ 554 ಚಾರ್ಜಿಂಗ್ ಕೇಬಲ್, 6 ವಾಕಿಟಾಕಿ ಮುಂತಾದ ವೈರ್‌ಗಳನ್ನೂ ವಶಕ್ಕೆ ಪಡೆಯಲಾಗಿದೆ.

ಈ ತನಿಖಾ ತಂಡ ನೇತೃತ್ವ ವಹಿಸಿದ ತನಿಖಾಧಿಕಾರಿ ಡಿವೈಎಸ್‌ಪಿ ವಿರೇಶ ದೊಡಮನಿ, ಪಿಎಸ್‌ಐ ನಾಗನಗೌಡ ಕಟ್ಟಿಮನಿಗೌಡ್ರ, ಎಎಸ್‌ಐ ಎ.ಎಚ್‌.ಭಜಂತ್ರಿ, ಎಸ್‌.ಆರ್‌.ಮಾಳಗಿ, ಎನ್‌.ಆರ್.ಘಡೆಪ್ಪನವರ, ಜಿ.ಎಸ್‌.ಲಮಾಣಿ (ಎಲ್ಲರೂ ಸಿಇಎನ್‌ ಠಾಣೆ) ಆರೋಪಿಯನ್ನು ಮಾಲು ಸಮೇತ ಬಂಧಿಸಿದರು.

ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಸಂಜೀವ ಪಾಟೀಲ ತಿಳಿಸಿದ್ದಾರೆ. ಈ ತನಿಖೆಯಲ್ಲಿ ಯಶಸ್ವಿಯಾದ ತಂಡವನ್ನೂ ಅವರು ಅಭಿನಂದಿಸಿದ್ದಾರೆ.
*
ಮಾಸ್ಕ್‌, ಬನಿಯನ್‌ನಲ್ಲೂ ಬ್ಲೂಟೂತ್‌ ವ್ಯವಸ್ಥೆ

ಬಂಧಿತ ಆರೋಪಿಯಿಂದ ವಶಪಡಿಸಿಕೊಂಡ ವಸ್ತುಗಳನ್ನು ಕಂಡು ಪೊಲೀಸರೇ ಹೈರಾಣಾಗಿದ್ದಾರೆ. ಎನ್‌–95 ಮಾಸ್ಕ್‌ನಲ್ಲಿ ಕೂಡ ಇಡಬಹುದಾದ ಬ್ಲೂಟೂತ್‌ ಸೂಕ್ಷ್ಮ ಉಪಕರಣಗಳು ಹಾಗೂ ಇವುಗಳ ಸಮೇತ ಸಿದ್ಧವಾಗಿದ್ದ ಮಾಸ್ಕ್‌ಗಳೂ ಈತ ಬಳ ಇದ್ದವು.

ಪುರುಷರ ಬನಿಯನ್‌, ಮಹಿಳೆಯರ ಒಳ ಉಡುಪುಗಳಲ್ಲಿ ಕೂಡ ಕಾಣದಂತೆ ಇಟ್ಟುಕೊಳ್ಳಬಹುದಾದ ಉಪಕರಣಗಳೂ ಇವೆ. ಒಂದು ಸಣ್ಣ ಕಡ್ಡಿಯಿಂದ ನೇರವಾಗಿ ಕಿವಿಯೊಳಗೆ ಸೇರಿಸಿ ಒಟ್ಟುಕೊಳ್ಳುವಂಥ ಹಾಗೂ ಸ್ಪಷ್ಟವಾಗಿ ಕೇಳಿಸುವಂಥ ಉಪಕರಣಗಳು ಸಾಕಷ್ಟಿವೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.