
ಗುರ್ಲಾಪುರ (ಬೆಳಗಾವಿ ಜಿಲ್ಲೆ): ‘ರೈತರ ಸಮಸ್ಯೆಗಳನ್ನು ಸ್ಥಳದಲ್ಲೇ ಬಗೆಹರಿಸಲಾಗದು. ಬೆಂಗಳೂರಿಗೆ ಬನ್ನಿ. ಮುಖ್ಯಮಂತ್ರಿ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಚರ್ಚಿಸೋಣ’ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ನೀಡಿದ ಆಹ್ವಾನವನ್ನು ರೈತರು ನೇರಾನೇರ ತಿರಸ್ಕರಿಸಿದರು.
ರೈತರ ಮನವೊಲಿಸುವ ಸಚಿವರ ಯತ್ನ ಫಲ ನೀಡಲಿಲ್ಲ. ಟನ್ ಕಬ್ಬಿಗೆ ₹3,500 ದರ ನೀಡಬೇಕು ಎಂದು ಪಟ್ಟುಹಿಡಿದು ಕಳೆದೊಂದು ವಾರದಿಂದ ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್‌ನ ಹೆದ್ದಾರಿಯಲ್ಲಿ ರೈತರು ನಡೆಸುತ್ತಿರುವ ಅಹೋರಾತ್ರಿ ಮುಷ್ಕರ 8ನೇ ದಿನದಲ್ಲಿ ಮುಂದುವರಿಯಿತು.
ಗುರುವಾರ ಸಂಜೆ ಧರಣಿ ಸ್ಥಳಕ್ಕೆ ಬಂದ ಎಚ್.ಕೆ.ಪಾಟೀಲ ಮುಖಂಡರೊಂದಿಗೆ ಮಾತುಕತೆ ನಡೆಸಿದರು. ‘ಟನ್ ಕಬ್ಬಿಗೆ ₹3,500 ದರ ನೀಡಿ ಎಂಬುದೂ ಸೇರಿ ಎಂಟು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದೀರಿ. ಗುರುವಾರ (ನ.6) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ಮಾಡುತ್ತೇನೆ. 20 ಮಂದಿ ರೈತ ಮುಖಂಡರೂ ಬನ್ನಿ’ ಎಂದು ಆಹ್ವಾನಿಸಿದರು.
ಆಗ ರೈತ ಸಮೂಹದಿಂದ ಜೋರಾದ ಕೂಗಾಟ, ಚೀರಾಟ ಕೇಳಿಬಂತು. ‘ಸಚಿವರ ಆಹ್ವಾನವನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ನ್ಯಾಯ ಕೇಳಲು ಎಲ್ಲಿಗೂ ಬರುವುದಿಲ್ಲ. ಬೇಕಿದ್ದರೆ ಸರ್ಕಾರವೇ ಇಲ್ಲಿಗೆ ಬರಲಿ’ ಎಂದು ಪ್ರತಿಭಟನಕಾರರು ಘೋಷಣೆ ಮೊಳಗಿದರು.
‘ಇದು ನಿಮ್ಮ ಪಕ್ಷದ ವೇದಿಕೆ ಅಲ್ಲ. ರೈತಪಕ್ಷದ ವೇದಿಕೆ. ಇಲ್ಲಿಗೆ ಬಂದು ಬರೀ ‘ಶೋ’ ಕೊಟ್ಟು ಹೋಗುವುದಾದರೆ ನಮಗೆ ಯಾರೂ ಬೇಡ. ಚಳವಳಿಗೆ ಶಕ್ತಿ ಕೊಡುವುದಾದರೆ ಮಾತ್ರ ಬನ್ನಿ ಎಂಬುದು ನಮ್ಮ ಕರೆ’ ಎಂದು ಮುಖಂಡರೊಬ್ಬರು ಹೇಳಿದರು.
ಆಗ ರೈತ ಸಮೂಹದಿಂದ ಕೂಗಾಟ ಆರಂಭವಾಯಿತು. ಮಧ್ಯ ಪ್ರವೇಶಿಸಿದ ರೈತ ಮುಖಂಡರು, ‘ಸಚಿವರು ಹೇಳುವುದನ್ನು ಹೇಳಲಿ ಬಿಡಿ. ಮುಂದೆ ನಮ್ಮ ಜಾತ್ರೆ ಏನೆಂದು ನಾವು ತೋರಿಸೋಣ’ ಎಂದು ಸಮಾಧಾನ ಮಾಡಿದರು.
ಮಾತು ಮುಂದುವರಿಸಿದ ಸಚಿವ, ‘ಸಿದ್ದರಾಮಯ್ಯ ಅವರೇ ನನ್ನನ್ನು ಕಳುಹಿಸಿದ್ದಾರೆ. ಸರ್ಕಾರ ನಿಮ್ಮ ಸಮಸ್ಯೆಗೆ ಸ್ಪಂದಿಸುತ್ತದೆ. ಆದರೆ, ನಾನೊಬ್ಬ ಅಥವಾ ಮುಖ್ಯಮಂತ್ರಿ ಒಬ್ಬರೇ ಸಮಸ್ಯೆ ಬಗೆಹರಿಸಲು ಆಗುವುದಿಲ್ಲ. ರೈತ ಮುಖಂಡರ ಸಮಸ್ಯೆ, ಕಾರ್ಖಾನೆಗಳ ಮಾಲೀಕರ ಹೇಳಿಕೆ, ಎಫ್‌ಆರ್‌ಪಿ, ಎಂಎಸ್‌ಪಿ ಮುಂತಾದ ಆಯಾಮಗಳಲ್ಲೂ ಚರ್ಚೆ ಮಾಡಬೇಕು. ಇದಕ್ಕೆ ರೈತರನ್ನು ಆಹ್ವಾನಿಸುತ್ತೇನೆ’ ಎಂದರು.
‘ರಾಜ್ಯದಲ್ಲಿ ತೂಕದ ಯಂತ್ರ ಅಳವಡಿಸುವುದಾಗಿ ಸರ್ಕಾರ ಹೇಳಿದೆ. ಇದನ್ನು ಸರ್ಕಾರ ಮಾಡುತ್ತದೆ. ಸಕ್ಕರೆ ರಿಕವರಿ ದರ ನಿಗದಿ ಇಳಿಸಬೇಕು, ಪಾರದರ್ಶಕವಾಗಿ ರಿಕವರಿ ದರ ರೈತರಿಗೂ ಗೊತ್ತಾಗಬೇಕು ಎಂದು ಕೇಳಿದ್ದಾರೆ. ಇದಕ್ಕೆ ನನ್ನ ಸಂಪೂರ್ಣ ಒಪ್ಪಿಗೆ ಇದೆ’ ಎಂದರು.
‘ಕಬ್ಬು ಪೂರೈಸಿದ 15 ದಿನಗಳಲ್ಲಿ ಬಿಲ್ ನೀಡಬೇಕು. ಹೆಚ್ಚು ದಿನವಾದರೆ ಬಿಲ್ಲಿಗೆ ಬಡ್ಡಿ ಸೇರಿಸಿ ಕೊಡಬೇಕು. ಸಕ್ಕರೆ ಆಯುಕ್ತರನ್ನು ಕಾರ್ಖಾನೆಯವರೇ ಒತ್ತಡ ಹೇರಿ ವರ್ಗ ಮಾಡಿದ್ದು, ಹಿಂದಿನ ಆಯುಕ್ತರನ್ನೇ ಕರೆಸಬೇಕು. ಸಕ್ಕರೆ ಆಯುಕ್ತಾಲಯ ಮರು ಸ್ಥಾಪನೆ ಮಾಡಬೇಕು. 12 ತಾಸು ನಿರಂತರ ವಿದ್ಯುತ್ ನೀಡಬೇಕು. ಎಚ್‌ಎಂಟಿ (ಕಬ್ಬು ಸಾಗಣೆ ವೆಚ್ಚ)ಯಲ್ಲಿ ಮೋಸವಾಗುತ್ತಿದೆ. ಇದನ್ನು ಸರಿಪಡಿಸಬೇಕು. ಕರ್ನಾಟಕ ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) ಕಾಯ್ದೆ ಆಶಯಗಳನ್ನು ಅನುಷ್ಠಾನ ಮಾಡಬೇಕು ಎಂದೂ ಕೋರಿದ್ದಾರೆ. ಎಲ್ಲದಕ್ಕೂ ನಾನು ಸಕಾರಾತ್ಮಕ ಸ್ಪಂದಿಸುತ್ತೇನೆ. ಇವು ನಿಂತ ಜಾಗದಲ್ಲೇ ಆಗುವ ಮಾತುಗಳಲ್ಲ. ಬೆಂಗಳೂರಿಗೆ ಬನ್ನಿ’ ಎಂದೂ ಆಹ್ವಾನಿಸಿದರು.
ಅರೆಬೆತ್ತಲೆ ಮೆರವಣಿಗೆ, ಧರಣಿ: ಮೂಡಲಗಿ ಸೇರಿದಂತೆ ಎಲ್ಲ 15 ತಾಲ್ಲೂಕುಗಳಲ್ಲಿ ಬುಧವಾರವೂ ರೈತರು ಪ್ರತಿಭಟನೆ ಮುಂದುವರಿಸಿದರು. ಹಗಲಿನಲ್ಲಿ ರಾಜ್ಯ ಹೆದ್ದಾರಿಗಳ ಮೇಲೆ ಅರೆಬೆತ್ತಲೆ ಮೆರವಣಿಗೆ ಮಾಡಿದರು. ರಾತ್ರಿಯಿಡೀ ಅಲ್ಲಿಯೇ ಭಜನೆಗಳನ್ನು ಮಾಡಿ ವಿನೂತನ ಪ್ರತಿಭಟನೆ ಮಾಡಿದರು.
ರಾಯಬಾಗ ಪಟ್ಟಣದ ವರ್ತಕರು ಸ್ವಯಂ ಪ್ರೇರಿತರಾಗಿ ಸಂಪೂರ್ಣ ಬಂದ್ ಮಾಡಿದರು. ಬೆಳಗಾವಿ, ಗೋಕಾಕ, ಬೈಲಹೊಂಗಲ, ಕಾಗವಾಡ ಮುಂತಾದ ಪಟ್ಟಣಗಳಲ್ಲೂ ವಾಹನ ಸಂಚಾರ ವಿರಳವಾಗಿತ್ತು. ಶಾಲೆ, ಕಾಲೇಜು, ಸಿನಿಮಾ ಥೇಟರ್‌ಗಳಲ್ಲಿಯೂ ಹಾಜರಿ ಕೊರತೆ ಕಂಡಿತು.
ಹೆದ್ದಾರಿಯಲ್ಲಿ ಮಲಗಿದ ವಿಜಯೇಂದ್ರ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಬುಧವಾರ ರಾತ್ರಿಯಿಡೀ ಗುರ್ಲಾಪುರ ರಾಜ್ಯ ಹೆದ್ದಾರಿಯಲ್ಲೇ ರೈತರೊಂದಿಗೆ ಮಲಗಿದರು. ಗುರುವಾರ (ನ.5) ಅವರು ಧರಣಿ ಸ್ಥಳದಲ್ಲೇ ಕಬ್ಬು, ಬೆಲ್ಲ ತಿಂದು ತಮ್ಮ ಜನ್ಮದಿನ ಆಚರಿಸಿಕೊಂಡರು.
‘ರೈತರು ಕಷ್ಟದಲ್ಲಿರುವಾಗ ನಾನು ಜನ್ಮದಿನದ ಸಂಭ್ರಮ ಪಡುವುದಿಲ್ಲ. ನಿಮ್ಮಲ್ಲೇ ಇರಲು ಬಯಸಿದ್ದೇನೆ. ಸಚಿವ ಎಚ್.ಕೆ.ಪಾಟೀಲರು ಭೇಟಿ ನೀಡುವ ಕಾರಣ ನಾನು ಇಲ್ಲಿರಬಾರದು. ಪ್ರತಿಭಟನೆ ವಿನಾಕಾರಣ ರಾಜಕೀಯ ಸ್ವರೂಪ ಪಡೆಯುವುದು ನನಗೆ ಇಷ್ಟವಿಲ್ಲ’ ಎಂದು ಸ್ಥಳದಿಂದ ಹೊರಟರು.
ತಕ್ಷಣ ನೆರವು ಘೋಷಿಸಿ: ಪ್ರಕಾಶ ಹುಕ್ಕೇರಿ
ಚಿಕ್ಕೋಡಿ: ‘ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸಕ್ಕರೆ ಸಚಿವ ಶಿವಾನಂದ ಪಾಟೀಲ ರೈತರ ಕಷ್ಟ ಅರಿಯಬೇಕು. ಕೂಡಲೇ ಕಬ್ಬಿಗೆ ನೆರವು ಘೋಷಿಸಬೇಕು’ ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಆಗ್ರಹಿಸಿದ್ದಾರೆ.
‘2013–14ರಲ್ಲಿ ನಾನು ಸಕ್ಕರೆ ಸಚಿವನಾಗಿದ್ದಾಗ ಇದೇ ಸಮಸ್ಯೆ ತಲೆದೋರಿತ್ತು. ಆಗ ಸರ್ಕಾರದ ಪರವಾಗಿ ಪ್ರತಿ ಟನ್ ಕಬ್ಬಿಗೆ ₹165 ನೆರವು ಘೋಷಿಸಿದ್ದೆ. ಅದಕ್ಕಾಗಿ ಸಿದ್ದರಾಮಯ್ಯ ₹300 ಕೋಟಿ ಪ್ರೋತ್ಸಾಹಧನ ಬಿಡುಗಡೆ ಮಾಡಿದ್ದರು. ಈಗಲೂ ಅಂಥದ್ದೇ ನಿರ್ಧಾರ ಕೈಗೊಳ್ಳಬೇಕು’ ಎಂದೂ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ.
‘ಮಹಾ’ ಕಾರ್ಖಾನೆಗಳ ‘ರೇಟ್‌ವಾರ್’
ಸಂಕೇಶ್ವರ: ರೈತರ ಹೋರಾಟವನ್ನೇ ಬಂಡವಾಳ ಮಾಡಿಕೊಂಡ ಮಹಾರಾಷ್ಟ್ರದ ಸಕ್ಕರೆ ಕರ್ಖಾನೆಗಳು ‘ರೇಟ್‌ವಾರ್’ ಆರಂಭಿಸಿವೆ. ಬಿದ್ರಿಯ ವೇದಗಂಗಾ– ದೂಧಗಂಗಾ ಸಹಕಾರ ಸಕ್ಕರೆ ಕಾರ್ಖಾನೆ ಕಬ್ಬಿಗೆ ₹3614 ದರ ಘೋಷಿಸಿದ ಬೆನ್ನಲ್ಲೇ ಅಲ್ಲಿನ ಇನ್ನೂ ಮೂರು ಕಾರ್ಖಾನೆಗಳೂ ದರ ಹೆಚ್ಚಳ ಮಾಡಿವೆ. ದಾಲ್ಮಿಯಾ ಸಕ್ಕರೆ ಕಾರ್ಖಾನೆ ₹3550 ಜವಾಹರ ಸಹಕಾರ ಸಕ್ಕರೆ ಕಾರ್ಖಾನೆ ₹3500 ದತ್ತ ಸಕ್ಕರೆ ಕಾರ್ಖಾನೆ ₹3450 ಸದಾಶಿವ ಮಾಂಡಲೀಕ ಕಾರ್ಖಾನೆ ಹಾಗೂ ಘೋರ್ಪಡೆ ಕಾರ್ಖಾನೆಗಳು ₹3400 ದರ ಘೋಷಿಸಿವೆ. ಬೆಳಗಾವಿ ಜಿಲ್ಲೆಯ ಗಡಿ ಭಾಗದ ಹಲವು ರೈತರು ಈಗಾಗಲೇ ಮಹಾರಾಷ್ಟ್ರಕ್ಕೆ ಕಬ್ಬು ಸಾಗಣೆ ಮಾಡುತ್ತಿದ್ದಾರೆ.
ಒಂದು ದಿನ ಗಡುವು ಇಲ್ಲದಿದ್ದರೆ ಬಂದ್
‘ಗುರುವಾರ (ನ.6) ರಾತ್ರಿ 8 ಗಂಟೆಯವರೆಗೆ ಗಡುವು ನೀಡುತ್ತೇವೆ. ಅಷ್ಟರೊಳಗೆ ಸರ್ಕಾರ ನಿರ್ಧಾರ ಹೇಳಬೇಕು. ಇಲ್ಲದಿದ್ದರೆ ನ.7ರಿಂದ ಆಮರಣ ಉಪವಾಸ ಹಾಗೂ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುತ್ತೇವೆ’ ಎಂದು ರೈತ ಮುಖಂಡರು ಸಚಿವ ಎಚ್.ಕೆ.ಪಾಟೀಲ ಎದುರಿಗೆ ಹೇಳಿದರು.
‘ರೈತರಿಗೆ ನ್ಯಾಯ ಪಡೆಯಲು ಬೆಂಗಳೂರಿಗೆ ಆಹ್ವಾನಿಸುತ್ತಿದ್ದೀರಿ. ನಾವು ಎಲ್ಲಿಗೂ ಬರುವುದಿಲ್ಲ. ಬೇಕಿದ್ದರೆ ಸರ್ಕಾರವೇ ಇಲ್ಲಿಗೆ ಬರಬೇಕು’ ಎಂದೂ ಹೇಳಿದರು. ಬಳಿಕ ಸಚಿವ ಎಚ್.ಕೆ.ಪಾಟೀಲ ಸ್ಥಳದಿಂದ ಹೊರಟರು. ಸಚಿವ ರಾತ್ರಿ ಇಲ್ಲಿಯೇ ಇರಬೇಕು ಎಂದು ಆಗ್ರಹಿಸಿ ಕೆಲ ರೈತರು ಅವರ ಕಾರಿಗೆ ಮುತ್ತಿಗೆ ಹಾಕಿದರು. ಮಧ್ಯಪ್ರವೇಶಿಸಿದ ಪೊಲೀಸರು ರೈತರನ್ನು ಚೆದುರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.