ADVERTISEMENT

ಮೂಡಲಗಿ: ಸಾವಯವ ಕೃಷಿಯೊಂದಿಗೆ ಹೈನುಗಾರಿಕೆ ತಂದ ‘ಖುಷಿ’

ಉತ್ತಮ ಆದಾಯ ಜೇಬಿಗಿಳಿಸುತ್ತಿರುವ ಹಳೇ ಯರಗುದ್ರಿಯ ರೈತ ಪ್ರಕಾಶ ರಂಜನಗಿ

ಬಾಲಶೇಖರ ಬಂದಿ
Published 14 ಫೆಬ್ರುವರಿ 2025, 7:04 IST
Last Updated 14 ಫೆಬ್ರುವರಿ 2025, 7:04 IST
ಕೊಟ್ಟಿಗೆಯಲ್ಲಿ ಎಮ್ಮೆಗಳೊಂದಿಗೆ ನಿಂತಿರುವ ರೈತ ಪ್ರಕಾಶ ರಂಜನಗಿ
ಕೊಟ್ಟಿಗೆಯಲ್ಲಿ ಎಮ್ಮೆಗಳೊಂದಿಗೆ ನಿಂತಿರುವ ರೈತ ಪ್ರಕಾಶ ರಂಜನಗಿ   

ಮೂಡಲಗಿ: ತಾಲ್ಲೂಕಿನ ಹಳೇ ಯರಗುದ್ರಿಯ ರೈತ ಪ್ರಕಾಶ ರಂಜನಗಿ ಸಾವಯವ ಕೃಷಿಯಲ್ಲಿ ನೆಮ್ಮದಿ ಕಾಣುವ ಜತೆಗೆ, ಹೈನುಗಾರಿಕೆಯಲ್ಲಿ ಉತ್ತಮ ಆದಾಯ ಜೇಬಿಗಿಳಿಸುತ್ತಿದ್ದಾರೆ.

ಪ್ರಕಾಶ ತೋಟಕ್ಕೆ ಕಾಲಿಡುತ್ತಿದ್ದಂತೆ, ದನಗಳ ಕೊಟ್ಟಿಗೆಯಲ್ಲಿ ಸಾಲು ಸಾಲು ಎಮ್ಮೆಗಳು ಕಣ್ಣಿಗೆ ಬೀಳುತ್ತವೆ. ಸದೃಢ ಮೈಕಟ್ಟು ಹೊಂದಿರುವ 50 ಎಮ್ಮೆಗಳು ಒಂದು ಬದಿ ಕಾಣಿಸಿದರೆ, ಕೊಟ್ಟಿಗೆಯ ಇನ್ನೊಂದು ಬದಿ ಆಕಳುಗಳ ಸಾಲು ಕಾಣುತ್ತದೆ. ಜರ್ಸಿ, ಎಚ್ಎಫ್‌, ಜವಾರಿ ಸೇರಿ ವಿವಿಧ ತಳಿಗಳ 10 ಆಕಳು ಮತ್ತು ಅವುಗಳೊಂದಿಗೆ ಕರುಗಳು ಕೊಟ್ಟಿಗೆಯಲ್ಲಿ ತುಂಬಿಕೊಂಡಿವೆ.

ಇವುಗಳು ನಿತ್ಯ ಬೆಳಿಗ್ಗೆ 100 ಲೀಟರ್‌, ಸಂಜೆ 100 ಲೀಟರ್‌ ಹಾಲು ನೀಡುತ್ತಿವೆ. ಹಾಲು ಸಂಗ್ರಹಕ್ಕಾಗಿ ಖಾಸಗಿ ಡೇರಿಯವರ ವಾಹನಗಳು ತೋಟಕ್ಕೇ ಬರುತ್ತವೆ.

ADVERTISEMENT

‘ತಿಂಗಳಿಗೆ ಹಾಲಿನಿಂದ ₹2.50 ಲಕ್ಷ ಆದಾಯ ಬರುತ್ತಿದೆ. ಇದರಲ್ಲಿ ಕೂಲಿಗಳ ವೇತನ, ಪಶು ಆಹಾರ, ಮತ್ತಿತರ ಕೆಲಸಕ್ಕೆ ₹1.60 ಲಕ್ಷ ವೆಚ್ಚವಾಗುತ್ತದೆ. ಉಳಿದಂತೆ ₹90 ಸಾವಿರ ನಿವ್ವಳ ಆದಾಯ ಕೈಗೆಟಕುತ್ತದೆ’ ಎನ್ನುತ್ತ ನಗೆಬೀರಿದರು ಪ್ರಕಾಶ.

‘ಜೋಳದ ಕಣಿಕೆ, ಒಣ ಮೇವು, ಗೋಧಿ ಹುಲ್ಲು, ಗೋವಿನಜೋಳದ ಮೇವು, ಸಜ್ಜೆ ಮೇವು, ಕಬ್ಬನ್ನು ಕತ್ತರಿಸಿ ಮಿಶ್ರಣ ಮಾಡಿ, ಬೆಳಿಗ್ಗೆ ಮತ್ತು ಸಂಜೆ ರಾಸುಗಳಿಗೆ ಹಾಕುತ್ತೇವೆ. ದನಗಳ ಮೇವಿಗಾಗಿ ಐದು ಎಕರೆಯಲ್ಲಿ ಸಜ್ಜೆ ಮೇವು ಬೆಳೆಯುತ್ತಿದ್ದೇವೆ. ಅಲ್ಲದೆ, ಪತಂಜಲಿ ಪಶು ಆಹಾರ, ಹತ್ತಿಕಾಳಿನ ಹಿಂಡಿ, ಗೋವಿನ ಜೋಳದ ನುಚ್ಚು, ಕ್ಯಾಲ್ಸಿಯಂ, ಮಿನಿರಲ್‌ ಬೆರೆಸಿ, ಅದನ್ನೆಲ್ಲ ನೆನೆಸಿ ಜಾನುವಾರುಗಳಿಗೆ ಉಣಿಸುತ್ತೇವೆ. ಹಾಗಾಗಿ ಬೆಳಿಗ್ಗೆ ಮತ್ತು ಸಂಜೆ ಅವು ಹೆಚ್ಚಿನ ಹಾಲು ನೀಡುತ್ತಿವೆ’ ಎಂದು ಅವರು ಹೇಳಿದರು.

‘ಸಾವಯವ ಕೃಷಿ ಮಾಡುವ ಉದ್ಧೇಶದಿಂದ ಹೈನುಗಾರಿಕೆಯತ್ತ ಹೊರಳಿದೆ. ಆರಂಭದಲ್ಲಿ ಸಣ್ಣ–ಪುಟ್ಟ ಕಷ್ಟ ಬಂದರೂ, ಹೈನುಗಾರಿಕೆ ಬಿಡಲಿಲ್ಲ. ಈಗ ಅದರಲ್ಲೇ ಪ್ರಗತಿ ಸಾಧಿಸಿದ ಖುಷಿ ಇದೆ’ ಎಂದರು.

30 ಎಕರೆ ಕೃಷಿಭೂಮಿ ಹೊಂದಿದ ಅವರು ರಾಸಾಯನಿಕ ಗೊಬ್ಬರ ಬಳಸದೆ, ಪ್ರತಿ ಎಕರೆಯಲ್ಲಿ 55ರಿಂದ 60 ಟನ್‌ ಕಬ್ಬು ಬೆಳೆಯುತ್ತಿದ್ದಾರೆ. ಇದರೊಂದಿಗೆ 15 ವರ್ಷಗಳಿಂದ ಶಿಸ್ತಿನಿಂದ ಹೈನುಗಾರಿಕೆಯನ್ನು ಮಾಡಿಕೊಂಡು ಬಂದಿದ್ದಾರೆ. 

ಆರಂಭಿಕ ಹಂತವಾಗಿ ₹30 ಲಕ್ಷ ವೆಚ್ಚದಲ್ಲಿ ದನಗಳಿಗಾಗಿ 110 ಅಡಿ ಉದ್ದ, 80 ಅಡಿ ಅಗಲದ ಕೊಟ್ಟಿಗೆ(ಶೆಡ್‌) ಅನ್ನು ನಿರ್ಮಿಸಿದರು. ಎಮ್ಮೆ, ಆಕಳು ಆರಾಮಾಗಿ ನಿಲ್ಲಲು, ಮಲಗಲು ಸಾಕಷ್ಟು ಸ್ಥಳಾವಕಾಶ ಕಲ್ಪಿಸಿದರು. ರಾಸುಗಳ ಸಗಣಿಯನ್ನು ನಿತ್ಯ ಕೊಟ್ಟಿಗೆಯಿಂದ ತೆಗೆದು, ತೋಟದಲ್ಲಿ ಒಂದು ಕಡೆ ಗುಡ್ಡೆ ಹಾಕುತ್ತಾರೆ. ಕೊಟ್ಟಿಗೆಯನ್ನು ನಿತ್ಯ ಸ್ವಚ್ಛಗೊಳಿಸುವುದರಿಂದ ಸ್ವಚ್ಛತೆ ಎದ್ದು ಕಾಣುತ್ತದೆ.

‘ಸಾವಯವ ಕೃಷಿಯತ್ತ ಮುಖಮಾಡಿದ ನಂತರ, ರಾಸಾಯನಿಕ ಬಳಕೆ ನಿಲ್ಲಿಸಿದ್ದೇನೆ. ದನಗಳ ಗಂಜಲು, ಕೊಟ್ಟಿಗೆ ತೊಳೆದ ನೀರನ್ನು ಭೂಮಿಗೆ ಉಣಿಸುತ್ತೇನೆ. ಅದಕ್ಕಾಗಿ 22 ಅಡಿ ಉದ್ದ, 10 ಅಡಿ ಅಗಲದ ಬಯೋಡೈಜಿಸ್ಟರ್‌ ವ್ಯವಸ್ಥೆ ಮಾಡಿದ್ದೇನೆ. ತಿಂಗಳಿಗೆ 15 ಟ್ರಾಲಿಗಳಷ್ಟು ಎಮ್ಮೆ, ಆಕಳ ಸಗಣಿ ಸಂಗ್ರಹವಾಗುತ್ತಿದೆ. ಅದನ್ನು ಒಣಗಿಸಿ ಬೆಳೆಗೆ ಹಾಕುತ್ತೇನೆ. ಎರೆಹುಳು ತೊಟ್ಟಿಯೂ ಇದೆ. ಹೈನುಗಾರಿಕೆ ಜತೆಗೆ, ಸಾವಯವ ಕೃಷಿ ಮಾಡಿದ್ದರಿಂದ ಸ್ವಾವಲಂಬಿಯಾಗಲು ಸಾಧ್ಯವಾಗಿದೆ’ ಎನ್ನುತ್ತಾರೆ ಪ್ರಕಾಶ ರಂಜನಗಿ. 

ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು 2024–25ನೇ ಸಾಲಿನ ಶ್ರೇಷ್ಠ ಹೈನುಗಾರಿಕೆ ರೈತ ಪ್ರಶಸ್ತಿಯನ್ನು ಇತ್ತೀಚೆಗೆ ಅವರಿಗೆ ನೀಡಿ ಗೌರವಿಸಿದೆ. ಸಂಪರ್ಕಕ್ಕಾಗಿ ಮೊ: 98452 82578.

ಪ್ರಶಸ್ತಿಯೊಂದಿಗೆ ರೈತ ಪ್ರಕಾಶ ರಂಜನಗಿ
ನಿತ್ಯ 200 ಲೀಟರ್‌ ಹಾಲು ಸಂಗ್ರಹ ಪ್ರತಿ ತಿಂಗಳು 15 ಟ್ರಾಲಿಯಷ್ಟು ಸಗಣಿ ಕೃಷಿಭೂಮಿಗೆ ಬಳಕೆ ಸಾವಯವ ಕೃಷಿಯಲ್ಲಿ ಸ್ವಾವಲಂಬನೆ
ಪ್ರಕಾಶ ರಂಜನಗಿ ಅವರ ಹೈನುಗಾರಿಕೆ ಮಾದರಿಯಾಗಿದೆ. ಅವರ ತೋಟದಲ್ಲಿನ ದನಗಳ ಕೊಟ್ಟಿಗೆಯು ಕೃಷಿ ವಿದ್ಯಾರ್ಥಿಗಳು ರೈತರಿಗೆ ಪ್ರಾತ್ಯಕ್ಷತೆಯ ಪಾಠಶಾಲೆಯಂತಿದೆ
ಡಾ.ಪ್ರಶಾಂತ ಕುರಬೇಟ ಪಶು ವೈದ್ಯಾಧಿಕಾರಿ ಅವರಾದಿ ಪಶು ಚಿಕಿತ್ಸಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.