ADVERTISEMENT

ಕಲ್ಲಂಗಡಿ ಬೆಳೆಗಾರರು ಕಂಗಾಲು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 15:06 IST
Last Updated 27 ಏಪ್ರಿಲ್ 2021, 15:06 IST
ತೆಲಸಂಗ ಗ್ರಾಮದಲ್ಲಿ ಕಲ್ಲಂಗಡಿಯನ್ನು ಹಸುವಿಗೆ ಹಾಕಿರುವುದು
ತೆಲಸಂಗ ಗ್ರಾಮದಲ್ಲಿ ಕಲ್ಲಂಗಡಿಯನ್ನು ಹಸುವಿಗೆ ಹಾಕಿರುವುದು   

ತೆಲಸಂಗ (ಬೆಳಗಾವಿ ಜಿಲ್ಲೆ): ಕೈಗೆ ಬಂದಿರುವ ಕಲ್ಲಂಗಡಿ ಬೆಳೆಗೆ, ಕೋವಿಡ್ ಲಾಕ್‌ಡೌನ್‌ನಿಂದಾಗಿ ಬೆಲೆ ಕುಸಿದಿರುವುದರಿಂದ ಮತ್ತು ಮಾರುಕಟ್ಟೆ ಇಲ್ಲದಿರುವುದರಿಂದ ರೈತರು ಕಂಗಾಲಾಗಿದ್ದಾರೆ.

ತೆಲಸಂಗ ಹೋಬಳಿ ಒಂದರಲ್ಲಿಯೇ 40 ಹೆಕ್ಟೇರ್‌ನಷ್ಟು ಫಸಲಿದೆ. ಕಳೆದ ವರ್ಷ ಲಾಕ್‍ಡೌನ್ ಸಮಯದಲ್ಲಿ ಮಾರಾಟವಾಗದೆ ನಷ್ಟ ರೈತ ಅನುಭವಿಸಿದ್ದ ರೈತರು ಈ ಬಾರಿಯೂ ಅದೇ ಸ್ಥಿತಿಗೆ ಬಂದಿದ್ದಾರೆ.

ಕಳೆದ ವಾರವಷ್ಟೆ ಕೆ.ಜಿ.ಗೆ ₹ 10–₹ 16ಕ್ಕೆ ಖರೀದಿಸುತ್ತಿದ್ದ ದಲ್ಲಾಳಿಗಳು, ಸರ್ಕಾರವು ಲಾಕ್‍ಡೌನ್ ಪ್ರಕಟಿಸುತ್ತಿದ್ದಂತೆ ಕೆ.ಜಿ.ಗೆ ₹ 3–₹8ಕ್ಕೆ ಕೇಳುತ್ತಿದ್ದಾರೆ. 15 ದಿನಗಳಿಂದ ಅಕಾಲಿಕ ಮಳೆ ಹಾಗೂ ಆಲಿಕಲ್ಲು ಹೊಡೆತಕ್ಕೆ ಅರ್ಧದಷ್ಟು ಕಲ್ಲಂಗಡಿ ಬೆಳೆ ನಷ್ಟವಾಗಿತ್ತು.

ADVERTISEMENT

ಏಪ್ರಿಲ್‌ ಕೊನೆಯ ವಾರ ಮತ್ತು ಮೇ ತಿಂಗಳಲ್ಲಿ ಕಲ್ಲಂಗಡಿಗೆ ಹೆಚ್ಚು ಬೆಲೆ ಬರುತ್ತದೆ. ಆಗ ಖರ್ಚನ್ನು ಸರಿದೂಗಿಸಬಹುದೆಂಬ ಲೆಕ್ಕಾಚಾರ ರೈತರದಾಗಿತ್ತು. ಆದರೆ ಸದ್ಯ ಕೊರೊನಾ ಪರಿಸ್ಥಿತಿಯು ಅವರ ಲೆಕ್ಕಾಚಾರವನ್ನು ತಲೆಕೆಳಗು ಮಾಡಿದೆ. ದಲ್ಲಾಳಿಗಳು ಬಹಳ ಕಡಿಮೆಗೆ ಕೇಳುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟ ಉಂಟಾಗುತ್ತಿದೆ.

‘ಕಳೆದ ವರ್ಷ ಭಾರಿ ಪ್ರಮಾಣದಲ್ಲಿ ಕಲ್ಲಂಗಡಿ ಬೆಳೆದಿದ್ದೆವು. ರಪ್ತು ಚಟುವಟಿಕೆ ಸ್ಥಗಿತಗೊಂಡಿದ್ದಕ್ಕೆ ಬೀದಿಗೆ ಚೆಲ್ಲಬೇಕಾಯಿತು. ಪ್ರಸಕ್ತ ವರ್ಷ ಅಲ್ಪಪ್ರಮಾಣದ ಬೆಲೆ ಸಿಗುತ್ತಿದೆ. ಮಾರಾಟ ಮಾಡುವುದೂ ಕಷ್ಟವಾಗಿದೆ’ ಎಂದು ರೈತ ಸಂತೋಷಕುಮಾರ ತಿಳಿಸಿದರು.

‘ಸದ್ಯಕ್ಕೆ ಕಟಾವಿಗೆ ಬಂದಿರುವ ಕಲ್ಲಂಗಡಿ ಮಾರಾಟ ಆಗದಿದ್ದರೆ ರೈತರಿಗೆ ಕಷ್ಟ. ಸರಕು ಸಾಗಾಣಿಕೆಗೆ ಮತ್ತು ರೈತರ ಬೆಳೆಗಳ ಮಾರಾಟಕ್ಕೆ ಯಾವುದೇ ತೊಂದರೆ ಇಲ್ಲ ಎಂದು ಸರ್ಕಾರ ಹೇಳಿದೆ’ ಎಂದು ತೋಟಗಾರಿಕೆ ಅಧಿಕಾರಿ ಅಕ್ಷಯ ಉಪಾಧ್ಯಯ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.