ADVERTISEMENT

ಮೂಡಲಗಿ: ಅರೆಬೆತ್ತಲೆ ಪ್ರತಿಭಟನೆ ಮಾಡಿದ ರೈತರು

ಒಂದು ವಾರ ಪೂರೈಸಿದ ರೈತರ ಅಹೋರಾತ್ರಿ ಹೋರಾಟ, ದಿನೇದಿನೇ ಹೆಚ್ಚುತ್ತಿರುವ ಹೋರಾಟಗಾರರ ಸಂಖ್ಯೆ

ಬಾಲಶೇಖರ ಬಂದಿ
Published 6 ನವೆಂಬರ್ 2025, 2:18 IST
Last Updated 6 ನವೆಂಬರ್ 2025, 2:18 IST
ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್‌ದಲ್ಲಿ ಕಬ್ಬಿನ ಬೆಲೆಗಾಗಿ ನಡೆದಿರುವ ರೈತರ ಧರಣಿಯಲ್ಲಿ ಬುಧವಾರ ರೈತರು ಅರೆಬೆತ್ತಲೆಯಲ್ಲಿ ಪ್ರತಿಭಟನೆ ಮಾಡಿದರು  
ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಕ್ರಾಸ್‌ದಲ್ಲಿ ಕಬ್ಬಿನ ಬೆಲೆಗಾಗಿ ನಡೆದಿರುವ ರೈತರ ಧರಣಿಯಲ್ಲಿ ಬುಧವಾರ ರೈತರು ಅರೆಬೆತ್ತಲೆಯಲ್ಲಿ ಪ್ರತಿಭಟನೆ ಮಾಡಿದರು     

ಮೂಡಲಗಿ: ತಾಲ್ಲೂಕಿನ ಗುರ್ಲಾಪುರ ಕ್ರಾಸ್‌ ಬಳಿಯಲ್ಲಿ ಕಬ್ಬಿನ ದರಕ್ಕಾಗಿ ನಡೆಯುತ್ತಿರುವ ರೈತರ ಪ್ರತಿಭಟನೆಯು ಏಳನೇ ದಿನವಾದ ಬುಧವಾರ ಅರಬತ್ತಲೆ ಪ್ರತಿಭಟನೆಯ ಮೂಲಕ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ.

ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಷ್ಟೇ ಅಲ್ಲ ಚಾಮರಾಜ ನಗರ, ರಾಯಚೂರ, ಗದಗ, ದಾವಣಗೆರೆ, ಯಾದಗಿರಿ, ಕಲಬುರ್ಗಿ ಜಿಲ್ಲೆಗಳಿಂದ ಸಹಸ್ರ ಸಂಖ್ಯೆಯಲ್ಲಿ ರೈತರು ತಂಡೋಪತಂಡವಾಗಿ ಬಂದು ಜಮಾಯಿಸಿದ್ದಾರೆ. ಜೈ ಜವಾನ ಜೈ ಕಿಸಾನ, ಕಬ್ಬಿಗೆ ಯೋಗ್ಯ ಬೆಲೆ ಕೊಡಲೇಬೇಕು, ರೈತ ಸಂಘಕ್ಕೆ ಜೈವಾಗಲಿ ಎಂದು ಹಸಿರು ಟವಲ್‌ ಮತ್ತು ಬಾರಕೋಲ್‌ಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ರೈತರ ತಾಳ್ಮೆಯನ್ನು ಪರಿಕ್ಷೀಸಿಬೇಡಿ ಎಂದು ರೈತ ನಾಯಕರು ಸರ್ಕಾರಕ್ಕೆ ಮತ್ತು ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ಕ್ಷಣ, ಕ್ಷಣಕ್ಕೂ ಎಚ್ಚರಿಕೆ ಕೊಡುತ್ತಿದ್ದರು.

ADVERTISEMENT

ರೈತರ ಹೋರಾಟಕ್ಕೆ ಬೆಂಬಲ ನೀಡಿದ ಶ್ರೀರಾಮ ಸೇನೆ ಅಧ್ಯಕ್ಷ ಪ್ರಮೋದ ಮುತಾಲಿಕ ಮಾತನಾಡಿ, ‘ಅನ್ನ ನೀಡುವ ರೈತರನ್ನು ಬೀದಿಯಲ್ಲಿ ಕೂಡ್ರಿಸುವ ಕೆಲಸ ಮಾಡಿರುವ ಸರ್ಕಾರಕ್ಕೆ ನಾಚಿಕೆ ಬರಬೇಕು’ ಎಂದು ಕಿಡಿಕಾರಿದರು.

‘ರೈತರ ಸಂಘಟನೆಯನ್ನು ಒಡೆಯಲು ಅನೇಕ ಹುನ್ನಾರ ನಡೆಯುತ್ತವೆ. ಅಂಥವುಗಳಿಗೆ ರೈತ ಮುಖಂಡರು ಕಿವಿಗೊಡದೆ ರೈತರು ಗಟ್ಟಿಯಾಗಿ ನಿಲ್ಲಬೇಕು’ ಎಂದರು.

ಹೋರಾಟದ ಮುಂದಾಳತ್ವ ವಹಿಸಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ಹಾಗೂ ರಾಜ್ಯ ಘದಕ ಅಧ್ಯಕ್ಷ ಚೂಣಪ್ಪ ಪೂಜಾರಿ, ‘ಕಬ್ಬು ಬೆಳೆಯವುದರಲ್ಲಿ ರೈತರ ಶ್ರಮವಿದೆ. ಸಕ್ಕರೆ ಕಾರ್ಖಾನೆಯವರಾಗಲಿ, ಸರ್ಕಾರವಾಗಲಿ ಕಬ್ಬು ಬೆಳೆಸುವುದರಲ್ಲಿ ಯಾವ ಶ್ರಮವಿಲ್ಲದಿದ್ದರೂ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಯವರಿಗೆ ಲಾಭ ಮಾಡಿಕೊಳ್ಳುತ್ತವೆ. ನಿಜವಾಗಿ ಶ್ರಮ ಹಾಕಿರುವ ರೈತನು ಕಣ್ಣೀರಿನಲ್ಲಿ ಬದುಕುವಂತ ಪತಿಸ್ಥಿತಿ ಇದೆ’ ಎಂದರು.

ಮಹಾರಾಷ್ಟ್ರದ ರೈತ ಮುಖಂಡ ರಾಜೇಂದ್ರ ಗಡ್ಡೆನ್ನವರ, ರಾಜಕುಮಾರ ಜಂಬಗಿ, ಮಲ್ಲಿಕಾರ್ಜುನ ಬಳ್ಳಾರಿ ಸೇರಿದಂತೆ ವಿವಿಧೆಡೆಯಿಂದ ಬಂದಿದ್ದ ರೈತ ಮುಖಂಡರು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ, ಸಕ್ಕರೆ ಸಚಿವ, ಉಸ್ತುವಾರಿ ಸಚಿವ ಹಾಗೂ ಸಕ್ಕರೆ ಕಾರ್ಖಾನೆಗಳ ಮಾಲೀಕರ ಮೇಲೆ ಹರಿಹಾಯ್ದರು.

ಮಾಜಿ ಸಚಿವ ಶ್ರೀಕಾಂತ ನಾಯಿಕ, ಡಾ.ಮಹಾಂತೇಶ ಕಡಾಡಿ,ಚಿಕ್ಕೋಡಿಯ ಮಲ್ಲಪ್ಪ ಅಂಗಡಿ, ಶ್ರೀಶೈಲ ಅಂಗಡಿ, ಲಕ್ಕಣ ಸವಸದ್ದಿ, ಕುಮಾರ ಮರ್ದಿ, ರಾಜು ಪವಾರ, ಪ್ರಕಾಶ ನಾಯ್ಕ, ಕೆಂಪಣ್ಣ ಅಂಗಡಿ ಸೇರಿದಂತೆ ಅನೇಕರು ಹೋರಾಟದಲ್ಲಿ ಭಾಗವಹಿಸಿದ್ದರು.

ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಬಳಿಯಲ್ಲಿ ರೈತರ ಹೋರಾಟದ ಸ್ಥಳದಲ್ಲಿ ಬಿ.ವೈ. ವಿಜಯೇಂದ್ರ ಜನ್ಮ ದಿನ ಆಚರಿಸಿಕೊಂಡರು

ಕಬ್ಬು ಬೆಲ್ಲ ತಿಂದು ಜನ್ಮ ದಿನ

ರೈತರ ಪ್ರತಿಭಟನೆ ಬೆಂಬಲಕ್ಕಾಗಿ ಮಂಗಳವಾರ ಬಂದಿದ್ದ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ವೈ. ವಿಜಯೇಂದ್ರ ರೈತರೊಂದಿಗೆ ಅಹೋರಾತ್ರಿ ಕಳೆದರು. ಬುಧವಾರ ವಿಜಯೇಂದ್ರ ಅವರ 50ನೇ ಜನ್ಮ ದಿನವಿದ್ದರಿಂದ ಅವರ ಅಭಿಮಾನಿಗಳು ಕೇಕ್‌ ತಂದರೂ ನಿರಾಕರಿಸಿದರು. ರೈತರೇ ಅವರಿಗೆ ಬೆಲ್ಲ ಮತ್ತು ಕಬ್ಬು ನೀಡುವ ಮೂಲಕ ಅವರ ಜನ್ಮದಿನ ಆಚರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿಜಯೇಂದ್ರ ‘ನನ್ನ 50ನೇ ಜನ್ಮ ದಿನವನ್ನು ರೈತರೊಂದಿಗೆ ಮತ್ತು ಧರಣಿ ಸ್ಥಳದಲ್ಲಿ ಕಳೆಯುತ್ತಿರುವುದು ನನ್ನ ಜೀವನದ ಅವಿಸ್ಮರಣೀಯವಾಗಿದ್ದು ಇದನ್ನು ಎಂದಿಗೂ ಮರೆಯುವುದಿಲ್ಲ. ಹೃದಯ ಶ್ರೀಮಂತಿಕೆ ರೈತರಿಗೆ ಇದೆ ಎನ್ನುವುದನ್ನು ನನ್ನ ತಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ತಿಳಿಸಿಕೊಟ್ಟಿದ್ದರು. ಅಂಥ ಸ್ವಾಭಿಮಾನಿ ರೈತರು ಕಷ್ಟದಲ್ಲಿದ್ದಾಗ ನಾನು ನನ್ನ ಜನ್ಮ ದಿನವನ್ನು ಆಚರಿಸಿಕೊಳ್ಳುವುದು ಬೇಡ ಎಂದು ನಿರ್ಧಾರ ಮಾಡಿದ್ದೆ’ ಎಂದರು. ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಮಾಜಿ ಶಾಸಕ ಪಿ. ರಾಜೀವ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.