ADVERTISEMENT

ಮೂಡಲಗಿ: ರೈತರ ಹೋರಾಟಕ್ಕೆ ವಿದ್ಯಾರ್ಥಿ ಸೈನ್ಯದ ಬಲ

ಎಂಟನೇ ದಿನ ಮತ್ತಷ್ಟು ಉಗ್ರ ಸ್ವರೂಪ ತಾಳಿದ ರೈತರ ಹೋರಾಟ, ಕನ್ಹೇರಿ, ಮುಗಳಖೋಡ ಸೇರಿ ಹಲವು ಶ್ರೀಗಳ ಬೆಂಬಲ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 2:23 IST
Last Updated 7 ನವೆಂಬರ್ 2025, 2:23 IST
<div class="paragraphs"><p><strong>ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಬಳಿಯಲ್ಲಿ ಕಬ್ಬಿನ ಬೆಲೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಎಬಿವಿಪಿಯ ಮೂಲಕ ಮೂಡಲಗಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ರೈತರಿಗೆ ಬೆಂಬಲ ನೀಡಿದರು</strong></p></div>

ಮೂಡಲಗಿ ತಾಲ್ಲೂಕಿನ ಗುರ್ಲಾಪುರ ಬಳಿಯಲ್ಲಿ ಕಬ್ಬಿನ ಬೆಲೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಎಬಿವಿಪಿಯ ಮೂಲಕ ಮೂಡಲಗಿ ನೂರಾರು ವಿದ್ಯಾರ್ಥಿಗಳು ಭಾಗವಹಿಸಿ ರೈತರಿಗೆ ಬೆಂಬಲ ನೀಡಿದರು

   

ಮೂಡಲಗಿ: ತಾಲ್ಲೂಕಿನ ಗುರ್ಲಾಪುರ ಕ್ರಾಸ್‌ದಲ್ಲಿ ಕಬ್ಬಿಗೆ ಬೆಲೆ ನಿಗದಿಗಾಗಿ ಶಶಿಕಾಂತ ಗುರೂಜಿ ಹಾಗೂ ಚೂನಪ್ಪ ಪೂಜಾರಿ ಅವರ ನೇತೃತ್ವದಲ್ಲಿ ರೈತರು ನಡೆಸುತ್ತಿರುವ ಹೋರಾಟವು 8ನೇ ದಿನವಾದ ಗುರುವಾರ ಎಬಿವಿಪಿಯ ಸಾವಿರಾರು ವಿದ್ಯಾರ್ಥಿಗಳು, ಮಠಾಧೀಶರು, ವಕೀಲರು, ಮಾಜಿ ಸೈನಿಕರು, ವೈದ್ಯರು, ಕಲಾವಿದರು ತಂಡೋಪತಂಡವಾಗಿ ಭಾಗವಹಿಸಿ ಪ್ರತಿಭಟನೆ ಮತ್ತಷ್ಟು ಉಗ್ರವಾಯಿತು.

ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳು ಸೇರಿದಂತೆ ಮಂಡ್ಯ, ಚಾಮರಾಜನಗರ, ಗದಗ, ರಾಯಚೂರ, ಯಾದಗಿರಿ, ಬಳ್ಳಾರಿ, ಕಾರವಾರ, ಶಾಬಾದ, ಕಲಬುರ್ಗಿ, ಕುಂದಗೋಳ, ಶಿವಮೊಗ್ಗಗಳಿಂದ ತಂಡೋಪತಂಡವಾಗಿ ರೈತರು ಭಾಗವಹಿಸಿದರು. ಕಬ್ಬಿಗೆ ₹3,500 ಬೆಲೆ ದೊರೆಯುವವರೆಗೆ ಧರಣಿಯಿಂದ ಹಿಂದೆ ಸರಿಬಾರದು ಎಂದು ಮುಖಂಡರಿಗೆ ಬಲ ತುಂಬಿದರು.

ADVERTISEMENT

ರೈತರ ಧರಣಿ 8ನೇ ದಿನಕ್ಕೆ ಬಂದಿದ್ದರೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ, ಮಾಜಿ ಸಂಸದ ಪ್ರಭಾಕರ ಕೋರೆ, ಶಾಸಕ ಲಕ್ಷ್ಮಣ ಸವದಿ, ಶ್ರೀಮಂತ ಪಾಟೀಲ, ರಮೇಶ ಕತ್ತಿ ಸೇರಿದಂತೆ ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆ ಹೊಂದಿರುವ ರಾಜಕಾರಣಿಗಳ ಮೇಲೆ ರೈತ ಮುಖಂಡರೆಲ್ಲ ಕಿಡಿ ಕಾರಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಕನೇರಿಮಠದ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ‘ರೈತರ ಬೆವರಿಗೆ ಬೆಲೆ ಕೊಡಿರಿ. ರೈತರ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜಕೀಯ ಮಾಡುವುದನ್ನು ಬಿಡಬೇಕು. ರೈತರ ಬೇಡಿಕೆಯನ್ನು ಗಂಭಿರವಾಗಿ ಪರಿಗಣಿಸಿ, ಸಮಸ್ಯೆ ಇತ್ಯರ್ಥಗೊಳಿಸಬೇಕು’ ಎಂದು ಒತ್ತಾಯಿಸಿದರು.

‘ಸರ್ಕಾರವು ಹಲವಾರು ಭಾಗ್ಯ ಮಾಡಿದೆ. ರೈತರಿಗೂ ‘ರೈತರ ಭಾಗ್ಯ’ ಕೊಡಿರಿ. ರೈತರ ಹೋರಾಟವು ತಾರ್ಕಿಕ ಅಂತ್ಯಕ್ಕೆ ಹೋಗುವ ವರೆಗೆ ತಮ್ಮೊಂದಿಗೆ ಮಠಾಧೀಶರೆಲ್ಲ ಇರುತ್ತೇವೆ. ಅವಶ್ಯವಿದ್ದರೆ ಪ್ರತಿಭಟನೆ ಸ್ಥಳದಲ್ಲಿ ಕುಳಿತು ಹೋರಾಡಲು ಸಿದ್ಧರಿದ್ದೇವೆ’ ಎಂದು ಸ್ಪಷ್ಟಪಡಿಸಿದರು.

ಮುಗಳಖೋಡ ಮಠದ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ‘ಗುರ್ಲಾಪುರದಲ್ಲಿ ದೇಶಕ್ಕೆ ಅನ್ನ ಹಾಕುವ ರೈತರು ಸ್ವಾಭಿಮಾನದಿಂದ ಹೋರಾಟ ಮಾಡುತ್ತಿರುವುದರಿಂದ ಖಂಡಿತ ಯಶಸ್ಸು ದೊರೆಯುತ್ತದೆ. ಯಲ್ಲಾಲಿಂಗರ ಕೃಪೆಯಿಂದ ರೈತರಿಗೆ ಯಶ ದೊರೆಯುತ್ತದೆ ಎನ್ನುವ ವಿಶ್ವಾಸವಿದೆ. ರೈತರು ಯಾರೂ ಆತ್ಮಹತ್ಯೆಯಂತ ಕೃತ್ಯ ಮಾಡಿಕೊಳ್ಳಬಾರದು. ಆತ್ಮವಿಶ್ವಾಸದಿಂದ ಹೋರಾಡಿ, ನಿಮ್ಮೊಂದಿಗೆ ನಾನೂ ಇರುತ್ತೇನೆ’ ಎಂದರು.

ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ)ದಿಂದ ಒಂದು ಸಾವಿರ ವಿದ್ಯಾರ್ಥಿಗಳೊಂದಿಗೆ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿ ರೈತರಿಗೆ ಅನ್ಯಾಯವಾಗುವುದಕ್ಕೆ ಬಿಡುವುದಿಲ್ಲ. ಅನಿರ್ವಾಯವಾದರೆ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗೆ ಬಂದು ರೈತರ ಪರ ನಿಲ್ಲುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿದ್ಯಾರ್ಥಿನಿಯರು ‘ಉಳವ ಯೋಗಿಯ ನೋಡಲ್ಲಿ’ ರೈತ ಗೀತೆಯನ್ನು ಹಾಡುವ ಮೂಲಕ ಅನ್ನದಾತನ ಮಹತ್ವವನ್ನು ಸಾರಿದರು.

ಜಿಲ್ಲಾ ಸಂಚಾಲಕ ಮಹಾದೇವ ನವಣಿ ಮಾತನಾಡಿ, ರೈತರ ಮಕ್ಕಳಿಗೆ ದೊರೆಯಬೇಕಾದ ರೈತ ವಿದ್ಯಾನಿಧಿ ಸೇರಿದಂತೆ ಇತರೆ ಶಿಷ್ಯವೇತನಗಳು ದೊರೆಯುತ್ತಿಲ್ಲ. ಎಲ್ಲದಕ್ಕೂ ಗ್ಯಾರಂಟಿ ನೆಪ ಹೇಳುತ್ತಾರೆ ಎಂದು ದೂರಿದರು.

ಮೈಸೂರಿನ ವಿದ್ಯಾಸಾಗರ, ಶಿವಮೊಗ್ಗದ ಎಚ್‌.ಆರ್‌. ಬಸವರಾಜಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಂಘಟಕ ದೀಪಕ ಗುಡಗನಟ್ಟಿ, ಅಥಣಿ ಪಂಚಾಕ್ಷರಿ, ಸಿದ್ರಾಯ ಅಜ್ಜ ಸೇರಿದಂತೆ ಅನೇಕರು ಪ್ರತಿಭಟನಾಕಾರರನ್ನು ಉದ್ಧೇಶಿಸಿ ಮಾತನಾಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

‘ರೈತರಿಗೆ ಎರಡು ಬಾರಿ ನಿರಾಸೆ’

ಸರ್ಕಾರದ ಪರವಾಗಿ ಬುಧವಾರ ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ್ದ ಸಚಿವ ಎಚ್‌.ಕೆ. ಪಾಟೀಲ ಅವರಿಂದ ಸಿಹಿ ಸುದ್ದಿ ದೊರೆಯುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ಕಬ್ಬು ಬೆಳೆಗಾರರಿಗೆ ಅದು ಸಿಹಿಯಾಗಿರಲಿಲ್ಲ. ಸಚಿವರು ರೈತರ ಸಮಸ್ಯೆಯನ್ನು ಆಲಿಸಿ ಮಾತುಕತೆಗೆ ಬೆಂಗಳೂರಿಗೆ ಬರಲು ಆಹ್ವಾನ ಕೊಡಲು ಬಂದಿದ್ದರ ಮಾತು ಕೇಳಿ ರೈತರೆಲ್ಲ ನಿರಾಸೆಗೆ ಒಳಗಾದರು. ಗುರುವಾರವೂ  ಸಕ್ಕರೆ ಸಚಿವ ಶಿವಾನಂದ ಪಾಟೀಲ ಅವರು ರೈತರು ತಾವು ಕೇಳಿದ್ದ ಕಬ್ಬಿಗೆ ಯೋಗ್ಯ ಬೆಲೆ ಘೋಷಣೆ ಮಾಡುವರು ಎಂದು ಬಹು ನಿರೀಕ್ಷೆಯಲ್ಲಿದ್ದರು. ಅದು ಹಾಗೇ ಆಗಲಿಲ್ಲ. ಸಚಿವರು ಸಹ ಶುಕ್ರವಾರ ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ಮಾತನಾಡಿ ಶನಿವಾರ ತಮಗೆ ತೀರ್ಮಾನ ನೀಡುವೆ ಎಂದು ಹೇಳಿ ರೈತರನ್ನು ನಿರಾಸೆಗೊಳಿಸಿದರು. ಎಂಟು ದಿನಗಳಿಂದ ಅಹೋರಾತ್ರಿ ಬಿಸಿಲು ಮಳೆ ಎನ್ನದೆ ರಸ್ತೆಯಲ್ಲಿ ಕುಳಿತು ಹೋರಾಟ ಮಾಡುತ್ತಿರುವ ಅನ್ನದಾತರೊಂದಿಗೆ ಚೆಲ್ಲಾಟ ಆಡುತ್ತಿರುವ ಸರ್ಕಾರದ ನಡೆಯನ್ನು ಇಲ್ಲಿಯ ಅನೇಕ ಚಿಂತಕರು ಖಂಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.