ಸವದತ್ತಿ: ಬನದ ಹುಣ್ಣಿಮೆ ಅಂಗವಾಗಿ ಯಲ್ಲಮ್ಮನಗುಡ್ಡದಲ್ಲಿ ಜ. 13ರಂದು ಬೃಹತ್ ಜಾತ್ರೆ ನಡೆಯಲಿದ್ದು, ಏಳುಕೊಳ್ಳದ ನಾಡಿನಲ್ಲಿ ಸಂಭ್ರಮ ಮನೆಮಾಡಿದೆ. ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆಯಾದ ನಂತರ ಜರುಗುತ್ತಿರುವ ಮೊದಲ ಜಾತ್ರೆ ಇದಾಗಿದೆ. ಭಕ್ತರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ಪ್ರಾಧಿಕಾರ ಸಕಲ ಸಿದ್ಧತೆ ಮಾಡಿಕೊಂಡಿದೆ.
ದೇಶದ ನಾನಾ ಭಾಗಗಳಿಂದ ‘ಎಲ್ಲರ ಅಮ್ಮ’ ಯಲ್ಲಮ್ಮನ ಸನ್ನಿಧಿಗೆ ಭಕ್ತರ ದಂಡೇ ಹರಿದುಬರುತ್ತಿದೆ. ಅವರಿಗೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವ ಜತೆಗೆ, ವಸತಿ, ಶೌಚಗೃಹ, ಕುಡಿಯುವ ನೀರು ಮತ್ತಿತರ ಮೂಲಸೌಕರ್ಯ ಒದಗಿಸಲು ಕ್ರಮ ವಹಿಸಲಾಗಿದೆ.
‘ಚಕ್ಕಡಿಗಳ ಜಾತ್ರೆ’ ಎಂತಲೂ ಇದು ಪ್ರಸಿದ್ಧಿ ಗಳಿಸಿದೆ. ಬಾಳೆದಿಂಡು, ತಳಿರು– ತೋರಣಗಳಿಂದ ಅಲಂಕೃತಗೊಂಡ ಬಂಡಿಗಳಲ್ಲಿ ಭಕ್ತರು ಯಲ್ಲಮ್ಮನಗುಡ್ಡದತ್ತ ಮುಖಮಾಡಿದ್ದಾರೆ. ಜಾನುವಾರುಗಳಿಗೆ ಕುಡಿಯುವ ನೀರು, ಉಚಿತವಾಗಿ ಮೇವು ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.
ಚಕ್ಕಡಿಯೊಂದಿಗೆ, ಟ್ರ್ಯಾಕ್ಟರ್, ಟಂಟಂ ವಾಹನಗಳ ಮೂಲಕವೂ ಹಲವರು ಬರುತ್ತಿದ್ದಾರೆ. ಸೈಕಲ್ ಮೇಲೆ ಹಾಗೂ ಕಾಲ್ನಡಿಗೆ ಮೂಲಕ ಗುಡ್ಡಕ್ಕೆ ಬರುವವರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಈ ಜಾತ್ರೆಯಲ್ಲಿ 25 ಲಕ್ಷದಿಂದ 30 ಲಕ್ಷ ಭಕ್ತರು ಸೇರುವ ನಿರೀಕ್ಷೆಯಿದೆ. ದೇವಸ್ಥಾನದ ಸುತ್ತಲಿನ ಪರಿಸರ ಭಕ್ತರಿಂದ ಕಿಕ್ಕಿರಿದು ತುಂಬಿದೆ.
ಯಲ್ಲಮ್ಮ ದೇವಿಗೆ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜೆ ನೆರವೇರಲಿದೆ. ತ್ವರಿತವಾಗಿ ದರ್ಶನ ಪಡೆಯಲು ಭಕ್ತರಿಗೆ ಅನುಕೂಲವಾಗಲೆಂದು ಪ್ರತ್ಯೇಕವಾಗಿ ಕ್ಯೂಲೈನ್ ವ್ಯವಸ್ಥೆ, ವೃದ್ಧರಿಗಾಗಿ ನೇರ ದರ್ಶನ ವ್ಯವಸ್ಥೆ ಕಲ್ಪಿಸಲಾಗಿದೆ.
32 ಹೈಮಾಸ್ಟ್ ದೀಪಗಳ ಅಳವಡಿಕೆ
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸ್ ಇಲಾಖೆ ಇಡೀ ಗುಡ್ಡದ ಪರಿಸರದಲ್ಲಿ ಬಿಗಿ ಭದ್ರತೆ ಕೈಗೊಂಡಿದೆ. ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು, ಜಾತ್ರೆಯಲ್ಲಿ ತಪ್ಪಿಸಿಕೊಂಡವರಿಗೆ ನೆರವಾಗಲು ಪೊಲೀಸ್ ಸಹಾಯವಾಣಿ ಕೇಂದ್ರ ತೆರೆದಿದೆ. ಅಗ್ನಿಶಾಮಕ ದಳ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗಿದೆ. 32 ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸಲಾಗಿದೆ.
ಸಂಚಾರ ಸಮಸ್ಯೆ ನೀಗಿಸಲು ಯಲ್ಲಮ್ಮನಗುಡ್ಡ ಹೊರವಲಯದಲ್ಲಿ ನಿರ್ಮಿಸಿದ್ದ ಉಗರಗೋಳ ಮಾರ್ಗದ ಸೇತುವೆಯನ್ನೂ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. ವಿವಿಧೆಡೆ ವಾಹನಗಳ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.
ಜಾತ್ರೆಗೆ ಬರುವ ಪ್ರಯಾಣಿಕರಿಗಾಗಿ ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ನರಗುಂದ, ರೋಣ, ಗದಗ, ಚಿಕ್ಕೋಡಿ ಮತ್ತಿತರ ಕಡೆಗಳಿಂದ 24x7 ಮಾದರಿಯಲ್ಲಿ ವಿಶೇಷ ಬಸ್ ಸೌಲಭ್ಯ ಕಲ್ಪಿಸಲಾಗಿದೆ. ಭಕ್ತರ ಆರೋಗ್ಯ ದೃಷ್ಟಿಯಿಂದ ಆರೋಗ್ಯ ಇಲಾಖೆ ತಂಡ ನಿಯೋಜಿಸಲಾಗಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಆಂಬುಲೆನ್ಸ್ ಅನ್ನು ಕಾಯ್ದಿರಿಸಲಾಗಿದೆ.
ಸಮರ್ಪಕ ನೀರು ಪೂರೈಕೆಗಾಗಿ 6 ಎಂಎಲ್‌ಡಿ ಸಾಮರ್ಥ್ಯದ ನೀರು ಸಂಗ್ರಹಕ ಇರಿಸಲಾಗಿದೆ. ಜಮದಗ್ನಿ ದೇವಸ್ಥಾನದ ಬಳಿ 10 ಲಕ್ಷ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ಜತೆಗೆ, 5 ಲಕ್ಷ ಲೀಟರ್ ಸಾಮರ್ಥ್ಯದ ಓವರ್‌ಹೆಡ್ ಟ್ಯಾಂಕ್ ನಿರ್ಮಿಸಲಾಗಿದೆ. 5 ಸಾವಿರ ಲೀಟರ್ ಸಾಮರ್ಥ್ಯದ 39 ನೀರಿನ ಅರವಟ್ಟಿಗೆ ಇರಿಸಲಾಗಿದೆ.
ಭಕ್ತರಿಗೆ ಯಾವ ತೊಂದರೆಯೂ ಆಗದಂತೆ ಎಲ್ಲ ಸೌಕರ್ಯ ಕಲ್ಪಿಸಿದ್ದೇವೆ. ಜಾತ್ರೆಯ ಯಶಸ್ಸಿಗೆ ಜನರ ಸಹಕಾರವೂ ಅಗತ್ಯ.–ವಿಶ್ವಾಸ ವೈದ್ಯ, ಶಾಸಕ
ಎಲ್ಲ ಇಲಾಖೆಗಳ ಸಹಕಾರದೊಂದಿಗೆ ಭಕ್ತರಿಗೆ ಮೂಲಸೌಕರ್ಯ ಕಲ್ಪಿಸುತ್ತಿದ್ದೇವೆ. ತಮ್ಮ ಜವಾಬ್ದಾರಿ ಸರಿಯಾಗಿ ನಿರ್ವಹಿಸುವಂತೆ ಸಿಬ್ಬಂದಿಗೂ ಸೂಚಿಸಿದ್ದೇವೆ.–ಅಶೋಕ ದುಡಗುಂಟಿ, ಕಾರ್ಯದರ್ಶಿ ಯಲ್ಲಮ್ಮ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ
ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದೇವೆ. ಸಂಚಾರ ಸಮಸ್ಯೆ ನಿರ್ವಹಣೆಗೆ ಸವಾರರೂ ಸಹಕರಿಸಬೇಕು.–ಧರ್ಮಾಕರ ಧರ್ಮಟ್ಟಿ, ಸಿಪಿಐ ಸವದತ್ತಿ
ಮದ್ಯ ಮಾರಾಟ ನಿಷೇಧ
ಯಲ್ಲಮ್ಮನಗುಡ್ಡದಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಆದರೆ ‘ವಾಸ್ತವವಾಗಿ ನಿರಾತಂಕವಾಗಿ ಮದ್ಯ ಮಾರಾಟ ನಡೆದಿದೆ. ತಂಪು ಪಾನೀಯ ಅಂಗಡಿಗಳು ಕಿರಾಣಿ ಅಂಗಡಿಗಳಲ್ಲಿ ಎಗ್ಗಿಲ್ಲದೆ ಮದ್ಯ ಮಾರಲಾಗುತ್ತಿದೆ. ಮಾಹಿತಿ ಗೊತ್ತಿದ್ದರೂ ಅಧಿಕಾರಿಗಳು ದಾಳಿ ಮಾಡುತ್ತಿಲ್ಲ’ ಎಂಬ ಆರೋಪ ಕೇಳಿಬರುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.